ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಸಂಚಾರ ದಿಢೀರ್‌ ಸ್ಥಗಿತ– ಪ್ರಯಾಣಿಕರ ಪಡಿಪಾಟಲು

ಕಣ್ಣೂರು: ಪ್ರಯಾಣಿಕನಿಗೆ ಬಸ್‌ ನಿರ್ವಾಹಕ ಹಲ್ಲೆ– ನಿರ್ವಾಹಕನಿಗೆ ಸ್ಥಳೀಯರಿಂದ ಹಲ್ಲೆ
Published 27 ಸೆಪ್ಟೆಂಬರ್ 2023, 16:39 IST
Last Updated 27 ಸೆಪ್ಟೆಂಬರ್ 2023, 16:39 IST
ಅಕ್ಷರ ಗಾತ್ರ

ಮಂಗಳೂರು: ನಗರದ ಹೊರವಲಯದ ಕಣ್ಣೂರಿನಲ್ಲಿ ಸಿಟಿ ಬಸ್‌ ನಿರ್ವಾಹಕರೊಬ್ಬರು ಪ್ರಯಾಣಿಕರೊಬ್ಬರಿಗೆ ಮಂಗಳವಾರ ಸಂಜೆ ಹಲ್ಲೆ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸ್ಥಳೀಯರ ಗುಂಪು ಬಸ್‌ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡಿದೆ. ಈ ವೇಳೆ ಬಸ್‌ ನಿರ್ವಾಹಕ ಮೇಲೂ ಕೆಲವು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಣ್ಣೂರಿಗೆ ತೆರಳುವ ನಾಲ್ಕು ಸಿಟಿ ಬಸ್‌ಗಳು, ನಿರ್ವಾಹಕನ ಮೇಲಿನ ಹಲ್ಲೆಯನ್ನು ಖಂಡಿಸಿ ಗುರುವಾರ ಸೇವೆಯನ್ನು ದಿಢೀರ್‌ ಸ್ಥಗಿತಗೊಳಿಸಿದ್ದರಿಂದ ಈ ಪ್ರದೇಶದ ಪ್ರಯಾಣಿಕರು ಪಡಿಪಾಟಲು ಅನುಭವಿಸಿದರು. ಬೆಳಿಗ್ಗೆ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಪ್ರಯಾಣಕ್ಕೆ ಬೇರೆ ವಾಹನಗಳನ್ನು ಅವಲಂಬಿಸಬೇಕಾಯಿತು.

‘ನಗರದಿಂದ ಕಣ್ಣೂರಿಗೆ ಪ್ರಯಾಣಿಸುವ ಅಬ್ದುಲ್‌ ಖಾದರ್‌ ಅವರು ಕಣ್ಣೂರು ಚೆಕ್‌ಪೋಸ್ಟ್‌ ಹಿಂದಿನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಅಲ್ಲಿ ಬಸ್‌ ನಿಲ್ಲಿಸಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ, ನಿರ್ವಾಹಕ ಯಶವಂತ್ ಕೋಪಗೊಂಡು ಹಲ್ಲೆ ನಡೆಸಿದ್ದರು. ಬಸ್‌ನಿಂದ ಕೆಳಗೆ ಬಿದ್ದ ಅಬ್ದುಲ್‌ ಖಾದರ್‌ ಹಲ್ಲಿಗೆ ಗಾಯವಾಗಿತ್ತು. ಈ ವಿಷಯ ತಿಳಿದು ಸ್ಥಳೀಯರು ನಿರ್ವಾಹಕ ಯಶವಂತ್‌ ಮೇಲೆ ಹಲ್ಲೆ ನಡೆಸಿದ್ದರು’ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು.

ಸಿಟಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದನ್ನು ಪ್ರಶ್ನಿಸಿ ಕಣ್ಣೂರಿನ ಡಿವೈಎಫ್‌ಐ ಘಟಕವು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ದೂರು ನೀಡಿತ್ತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಸಿಟಿ ಬಸ್‌ಗಳ ಸಂಚಾರ ಪುನರಾರಂಭವಾಯಿತು. ಈ ನಡುವೆ ಹಲ್ಲೆಗೊಳಗಾದ ಅಬ್ದುಲ್‌ ಖಾದರ್‌ ಹಾಗೂ ಯಶವಂತ್‌ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ಬಗ್ಗೆ ಇಬ್ಬರೂ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.

ಹಲ್ಲೆಗೊಳಗಾದ ಯಶವಂತ್ ಅವರನ್ನು ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತದ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT