‘ಸಮಾಜಮುಖಿ ಕಾರ್ಯ ನಿರಂತರ’

ಮಂಗಳೂರು: ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಕರ್ಣಾಟಕ ಬ್ಯಾಂಕ್, ಕಟಪಾಡಿ ಗ್ರಾಮದ ಮೂಡಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ನಿರ್ಮಿಸಿದ ಬಸ್ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ಣಾಟಕ ಬ್ಯಾಂಕಿನ ಮುಖ್ಯ ವ್ಯವಹಾರ ಅಧಿಕಾರಿ ಗೋಕುಲದಾಸ ಪೈ, ‘ನಮ್ಮ ಬ್ಯಾಂಕ್ ಜನೋಪಯೋಗಿ ಕೆಲಸಗಳಿಗೆ ಸ್ಪಂದಿಸುತ್ತಲೇ ಬಂದಿದೆ. ಇಲ್ಲಿನ ಗ್ರಾಮ ಪಂಚಾಯಿತಿಯ ಬೇಡಿಕೆಯ ಮೇರೆಗೆ ಎರಡು ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಬಿಸಿಲು, ಜಡಿಮಳೆಯಲ್ಲಿ ಈ ನಿಲ್ದಾಣಗಳು ಜನರಿಗೆ ಉಪಯೋಗಿ ಆಗಲಿವೆ’ ಎಂದರು.
‘ಕೋವಿಡ್–19 ಸಂಕಷ್ಟದ ಕಾಲದಲ್ಲಿ ನಾವು ಅನುಸರಿಸಬೇಕಾದ ನಿಯಮಗಳ ಸಂದೇಶಗಳನ್ನು ಕೂಡ ಈ ನಿಲ್ದಾಣಗಳ ಭಿತ್ತಿಚಿತ್ರಗಳು ಸಾರುತ್ತಿವೆ. ಈ ಸೌಲಭ್ಯಗಳನ್ನು ಗ್ರಾಮಸ್ಥರು ಪ್ರಯೋಜನ ಪಡೆಯುವುದರ ಜೊತೆಗೆ ಅವುಗಳ ಸ್ವಚ್ಛತೆಯನ್ನು ನಿರ್ವಹಿಸಿಕೊಂಡು ಹೋಗಬೇಕು. ಇಂತಹ ಇನ್ನೂ ಹಲವು ಸಮಾಜಮುಖಿ ಕೆಲಸ ನಾವು ನಿರಂತರ ಮಾಡುತ್ತಲೇ ಇರುತ್ತೇವೆ’ ಎಂದು ತಿಳಿಸಿದರು.
ಗ್ರಾಮದ ಮುಖ್ಯಸ್ಥ ಶಿವರಾವ್ ಕಟಪಾಡಿ ಮಾತನಾಡಿದರು. ಮಹಾಪ್ರಬಂಧಕ ಮಂಜುನಾಥ ಭಟ್ ಬಿ.ಕೆ., ಸಹಾಯಕ ಮಹಾಪ್ರಬಂಧಕರಾದ ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ ದೇಶಪಾಂಡೆ, ಬಸ್ ನಿಲ್ದಾಣಗಳನ್ನು ನಿರ್ಮಿಸಿದ ಕಮಲ್ ಎನ್ ಫ್ಯಾಬ್ ಸಂಸ್ಥೆಯ ರಾಜ್ ಕಮಲ್ ದಾಸ್, ಗ್ರಾಮದ ಪ್ರಮುಖರಾದ ವಿನಯ ಬಲ್ಲಾಳ ಕಟಪಾಡಿ, ಅಶೋಕ್ ರಾವ್ ಕಟಪಾಡಿ, ಸುಭಾಷ ಬಲ್ಲಾಳ, ನಿತಿನ್ ವಿ. ಶೇರಿಗಾರ್, ಮಹೇಶ್ ಪೂಜಾರಿ, ವಿಶ್ವೋತ್ತಮ ಆಚಾರ್ಯ, ಸಂಪತ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.