ಮಂಗಳವಾರ, ಮಾರ್ಚ್ 31, 2020
19 °C
ನಗರದಲ್ಲಿ ಸತತ ಮೂರನೇ ಚುನಾವಣೆಯಲ್ಲಿ ಕೇಸರಿ ಪಡೆಯ ಜಯಭೇರಿ

ಮಂಗಳೂರು | ಕಾಂಗ್ರೆಸ್‌ಗೆ ಕಾಡಿದ ಬಂಡಾಯ, ಸತತ ಮೂರನೇ ಬಾರಿ ಗೆದ್ದ ಕೇಸರಿ ಪಡೆ

ವಿ.ಎಸ್‌.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಮಂಗಳೂರು: ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಚುನಾವಣೆಯಲ್ಲಿ ಬಿಜೆಪಿಯ ಆರ್ಭಟಕ್ಕೆ ಕಾಂಗ್ರೆಸ್‌ ಪಕ್ಷ ಸೋತು ಸುಣ್ಣವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಆರಂಭವಾದ ಬಿಜೆಪಿಯ ಗೆಲುವಿನ ಓಟ ಪಾಲಿಕೆ ಚುನಾವಣೆಯಲ್ಲೂ ಮುಂದುವರಿದಿದ್ದು, ಪಕ್ಷಕ್ಕೆ ನಿಚ್ಚಳ ಬಹುಮತ ತಂದುಕೊಟ್ಟಿದೆ.

ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಪೈಕಿ 44 ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಿದೆ. ಕಾಂಗ್ರೆಸ್‌ ಪಕ್ಷವನ್ನು 14 ಸ್ಥಾನಗಳಿಗೆ ಕಟ್ಟಿಹಾಕುವಲ್ಲಿ ಕೇಸರಿ ಪಡೆ ಯಶಸ್ವಿಯಾಗಿದೆ. ಎಸ್‌ಡಿಪಿಐ ಈ ಎರಡೂ ಪಕ್ಷಗಳ ಪ್ರಬಲ ಸ್ಪರ್ಧೆಯ ನಡುವೆಯೂ ತನ್ನ ಬಲವನ್ನು ಎರಡಕ್ಕೆ ಹೆಚ್ಚಿಸಿಕೊಂಡಿದೆ.

ನಗರದ ರೊಸಾರಿಯೊ ಶಿಕ್ಷಣ ಸಂಸ್ಥೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಗುರುವಾರ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆಗೆ 11.30ರ ಸುಮಾರಿಗೆ ಪೂರ್ಣಗೊಂಡಿತ್ತು. ಆರಂಭದ ಹಂತದಿಂದಲೇ ಮುನ್ನಡೆ ಸಾಧಿಸಿದ ಬಿಜೆಪಿ, ಮೂರನೇ ಎರಡಕ್ಕಿಂತ ಹೆಚ್ಚು ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

ಕಾಂಗ್ರೆಸ್‌ ಪಕ್ಷಕ್ಕೆ ಅಭ್ಯರ್ಥಿಗಳ ಆಯ್ಕೆಯ ಹಂತದಿಂದಲೇ ಬಂಡಾಯ ತಲೆನೋವಾಗಿ ಕಾಡಿತ್ತು. ಮಾಜಿ ಮೇಯರ್‌ ಗುಲ್ಜಾರ್‌ ಬಾನು ಅವರಿಗೆ ಟಿಕೆಟ್‌ ನಿರಾಕರಿಸಿದ್ದು, ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವಾ ಅವರ ಮೇಲಿನ ಹಲ್ಲೆಗೂ ಕಾರಣವಾಗಿತ್ತು. ಪಕ್ಷದ ಹಿರಿಯರ ಸತತ ಮನವೊಲಿಕೆಯ ಬಳಿಕವೂ ಕಾಂಗ್ರೆಸ್‌ನ ಹಲವರು ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದರು. ಟಿಕೆಟ್‌ ವಂಚಿತರಾದ ಹಲವರು ಚುನಾವಣಾ ಪ್ರಚಾರದತ್ತ ನಿರಾಸಕ್ತಿ ತಳೆದಿದ್ದರು.

ಮಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಜೆ.ಆರ್‌.ಲೋಬೊ ಮತ್ತು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ ಕಾಂಗ್ರೆಸ್‌ ಪಕ್ಷದ ಚುನಾವಣಾ ಸಾರಥ್ಯ ವಹಿಸಿದ್ದರು. ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ 13 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಉತ್ತರದಲ್ಲಿ ಪಂಜಿಮೊಗರು ವಾರ್ಡ್‌ ಮಾತ್ರ ಕಾಂಗ್ರೆಸ್‌ಗೆ ಒಲಿದಿದೆ.

ಸಂಘಟಿತ ಕಾರ್ಯತಂತ್ರದ ಫಲ: 2018ರ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳ ವ್ಯಾಪ್ತಿಯ 40 ವಾರ್ಡ್‌ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. 2019ರ ಲೋಕಸಭಾ ಚುನಾವಣೆಯ ವೇಳೆಗೆ ಮತ್ತಷ್ಟು ಬಲ ಹೆಚ್ಚಿಸಿಕೊಂಡು 48 ವಾರ್ಡ್‌ಗಳಲ್ಲಿ ಭಾರಿ ಅಂತರದ ಮುನ್ನಡೆ ಪಡೆದಿತ್ತು. ಈ ಚುನಾವಣೆಯಲ್ಲಿ 44 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ನಗರದ ಮೇಲಿನ ಹಿಡಿತವನ್ನು ಉಳಿಸಿಕೊಂಡಿದೆ.

ಗೆದ್ದಿರುವ 44 ಸ್ಥಾನಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳಲ್ಲಿ ಬಿಜೆಪಿಗೆ 1,000ಕ್ಕಿಂತಲೂ ಹೆಚ್ಚಿನ ಮತಗಳ ಅಂತರ ಲಭಿಸಿದೆ. ಹಲವು ಕ್ಷೇತ್ರಗಳಲ್ಲಿ ಗೆಲುವಿನ ಅಂತರ 2,000ವನ್ನೂ ದಾಟಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಭಿನ್ನಮತ ತಲೆದೋರದಂತೆ ಎಚ್ಚರಿಕೆಯ ಹೆಜ್ಜೆ ಇರಿಸಿದ್ದ ಬಿಜೆಪಿ, ನಂತರದ ದಿನಗಳಲ್ಲೂ ಒಗ್ಗಟ್ಟು ಒಡೆಯದಂತೆ ಕಾರ್ಯತಂತ್ರ ರೂಪಿಸಿತ್ತು.

ನಳಿನ್‌ ಕುಮಾರ್‌ ಕಟೀಲ್‌ ಅವರು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಅವರ ತವರು ನೆಲದಲ್ಲಿ ಬಿಜೆಪಿ ಎದುರಿಸಿದ ಮೊದಲ ಚುನಾವಣೆ ಇದು. ವ್ಯವಸ್ಥಿತ ಕಾರ್ಯತಂತ್ರದ ಮೂಲಕ ಚುನಾವಣೆ ಎದುರಿಸಿದ ಸ್ಥಳೀಯ ನಾಯಕರು, ಪಕ್ಷದ ನಾಯಕರಿಗೆ ಗೆಲುವಿನ ಉಡುಗೊರೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು