ಸೋಮವಾರ, ಸೆಪ್ಟೆಂಬರ್ 20, 2021
29 °C
ಕಾಂಗ್ರೆಸ್‌ ಮಾಡಿದ ಆಸ್ತಿಗಳ ಮಾರಾಟವೇ ಬಿಜೆಪಿ ಸಾಧನೆ: ಖರ್ಗೆ

ಉದ್ಯೋಗ ಸೃಷ್ಟಿಯ ಬದಲು ನಿರುದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: 70 ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವವವರೇ, ದೇಶದ ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಡಿದ ರೈಲ್ವೆ, ಬಂದರು, ರಸ್ತೆಗಳು, ಗ್ಯಾಸ್‌ ಪೈಪ್‌ಲೈನ್‌ಗಳು, ವಿದ್ಯುತ್ ಜಾಲ, ಟೆಲಿಕಾಂ ಟವರ್‌ಗಳು, ಕ್ರೀಡಾಂಗಣ ಸೇರಿದಂತೆ ಸಾರ್ವಜನಿಕ ಸ್ವತ್ತುಗಳನ್ನು ನಿರ್ವಹಿಸಲು, ಸಮರ್ಥವಾಗಿ ಬಳಸಿಕೊಳ್ಳಲು ಅಸಮರ್ಥವಾಗಿರುವ ಈಗಿನ ಕೇಂದ್ರ ಸರ್ಕಾರ ಅವುಗಳನ್ನು ಮಾರಾಟ ಮಾಡುತ್ತಿದೆ ಎಂದರು.

‘ನಾವು ಮಾಡಿದ ರಸ್ತೆಯಲ್ಲೇ ಓಡಾಡಿ, ನಾವು ಮಾಡಿದ ಶಾಲಾ ಕಾಲೇಜುಗಳಲ್ಲೇ ಕಲಿತು, ನಾವು ಮಾಡಿದ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆದು ಇದೀಗ ಅವೆಲ್ಲವನ್ನೂ ಮಾರಾಟ ಮಾಡಲು ಮುಂದಾಗಿರುವ ಸರ್ಕಾರದ ಬಗ್ಗೆ ಅದರ ಫಲಾನುಭವಿಗಳೂ ಮೌನವಾಗಿರುವುದು ಬೇಸರದ ಸಂಗತಿ’ ಎಂದು ಹೇಳಿದರು.

1951ರಲ್ಲಿ ಕೇವಲ ಐದು ಸಾರ್ವಜನಿಕ ವಲಯದ ಉದ್ದಿಮೆಗಳಿದ್ದವು. 1969ರಲ್ಲಿ ಅವುಗಳ ಸಂಖ್ಯೆ 84 ಕ್ಕೆ ಏರಿತ್ತು. ಸ್ವಾತಂತ್ರ್ಯ ನಂತರ ಜವಾಹರಲಾಲ್ ನೆಹರೂ ಅವರು ಮಿಶ್ರ ಆರ್ಥಿಕತೆಯ ಕಲ್ಪನೆಯ ಫಲ. ಬಳಿಕ ಕಾಂಗ್ರೆಸ್ ಅವಧಿಯಲ್ಲಿ ಈ ಸಂಖ್ಯೆ 366ಕ್ಕೆ ಏರಿತು. ಈ ಉದ್ದಿಮೆಗಳಲ್ಲಿ 9.2 ಲಕ್ಷ ಕಾಯಂ ನೌಕರರು ಹಾಗೂ 4.98 ಲಕ್ಷ ಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

‘ನಾನು ಕೇಂದ್ರ ಸಚಿವನಾಗಿದ್ದ ಅವಧಿಯಲ್ಲಿ 14 ಲಕ್ಷ ಮಂದಿ ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದರು. ಆದರೆ ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಏಳು ವರ್ಷಗಳ ಅವಧಿಯಲ್ಲಿ ರೈಲ್ವೆ ಉದ್ಯೋಗಿಗಳ ಸಂಖ್ಯೆ 12.53 ಲಕ್ಷಕ್ಕೆ ಇಳಿಕೆಯಾಗಿದೆ. ಟೆಲಿಕಾಂನಲ್ಲಿ 4 ಲಕ್ಷದಷ್ಟಿದ್ದ ನೌಕರರ ಸಂಖ್ಯೆ 3.66 ಲಕ್ಷಕ್ಕೆ ಇಳಿದಿದೆ. ಸಂವಿಧಾನದ ರಕ್ಷಣೆಯ ಜೊತೆಗೆ ಪ್ರಜಾಪ್ರಭುತ್ವವನ್ನು
ಉಳಿಸುವ ಕಾರ್ಯ ಕಾಂಗ್ರೆಸ್ ಮಾಡಿದೆ’ ಎಂದರು.

ಖಾಸಗಿ ಕಂಪನಿಗಳಿಗೆ ಲಾಭ: ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್‌ ಅವರ ರಾಷ್ಟ್ರೀಯ ನಗದೀಕರಣ ಯೋಜನೆಯ ಮೂಲಕ ರಸ್ತೆ, ರೈಲ್ವೆ, ವಿದ್ಯುತ್ ಜಾಲ, ವಿದ್ಯುತ್ ಉತ್ಪಾದನಾ ಘಟಕಗಳು ಸೇರಿದಂತೆ ಸಾರ್ವಜನಿಕ ವಲಯದ ಸ್ವತ್ತುಗಳನ್ನು 4 ವರ್ಷದ ಅವಧಿಗೆ ₹7 ಲಕ್ಷ ಕೋಟಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಖರ್ಗೆ ಹೇಳಿದರು.

ಸರ್ಕಾರ ನಿರೀಕ್ಷಿಸುತ್ತಿರುವ ₹7ಲಕ್ಷ ಕೋಟಿ ಆದಾಯದಲ್ಲಿ 26,700 ಕಿ.ಮೀ. ಹೆದ್ದಾರಿ ನಿರ್ವಹಣೆಯಿಂದಲೇ ₹1.6 ಲಕ್ಷ ಕೋಟಿ, 400 ರೈಲ್ವೆ ನಿಲ್ದಾಣ ಹಾಗೂ ಮಾರ್ಗಗಳಿಂದ ₹1.52 ಲಕ್ಷ ಕೋಟಿ, ವಿದ್ಯುತ್ ಜಾಲದಿಂದ ₹45ಸಾವಿರ ಕೋಟಿ ಬರಲಿದೆ. ಈ ನಿರ್ವಹಣಾ ಒಪ್ಪಂದವು ಶುಲ್ಕ ವಿಧಿಸುವುದು, ನಿರ್ವಹಿಸುವುದು ಹಾಗೂ ಹಿಂದಿರುಗಿಸುವಿಕೆಯ ಆಧಾರದಲ್ಲಿ ನಡೆಯಲಿದ್ದು, ಗುತ್ತಿಗೆ ಪಡೆಯುವ ಕಂಪನಿಗಳು ತಮ್ಮ ಲಾಭಕ್ಕಾಗಿ ಅದರ ಹೊರೆಯನ್ನು ಸಾರ್ವಜನಿಕರ ಮೇಲೆ ಹೇರಲಿವೆ ಎಂದು ಎಚ್ಚರಿಸಿದರು.

ಮಾಜಿ ಸಚಿವರಾದ ಬಿ.ರಮಾನಾಥ ರೈ, ಕೆ.ಅಭಯಚಂದ್ರ ಜೈನ್, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ಮೊಹಿಯುದ್ದೀನ್‌, ಬಾವ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಯು.ಬಿ.ವೆಂಕಟೇಶ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಮಂಜುನಾಥ ಭಂಡಾರಿ ಇದ್ದರು.

ಆಸ್ಕರ್‌ ಆರೋಗ್ಯ ವಿಚಾರಿಸಿದ ಖರ್ಗೆ

ನಗರದ ಯೇನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಅವರನ್ನು ಭೇಟಿ ಮಾಡಿದ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ವಿಚಾರಿಸಿದರು.

ನಂತರ ಮಾತನಾಡಿದ ಖರ್ಗೆ, ‘ನಾವಿಬ್ಬರು 1980ರಿಂದ ಆತ್ಮೀಯರಾಗಿದ್ದು, ಅವರ ಆರೋಗ್ಯ ವಿಚಾರಿಸಲೆಂದೇ ನಾನು ಮಂಗಳೂರಿಗೆ ಭೇಟಿ ನೀಡಿದ್ದು. ಫರ್ನಾಂಡಿಸ್‌ ಅವರ ಪತ್ನಿ, ಕುಟುಂಬದ ಸದಸ್ಯರು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ನಾನು ಮಾತನಾಡಿದ್ದೇನೆ’ ಎಂದರು.

ಕೊಂಕಣ ರೈಲ್ವೆ ಪ್ರಾರಂಭಕ್ಕಾಗಿ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ನಡೆಯುತ್ತಿದ್ದ ವೇಳೆ ಆಸ್ಕರ್‌ ಫರ್ನಾಂಡಿಸ್‌ ಅವರು ಹಳ್ಳಿ ಹಳ್ಳಿಗಳಿಗೆ ತೆರಳಿ ರೈತರ ಮನವೊಲಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಸಹಕಾರ ನೀಡಿದ್ದರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು