ಸೋಮವಾರ, ಮಾರ್ಚ್ 27, 2023
31 °C

ಸಹೋದರ ಅಪಹರಣ – ಐವರ ಬಂಧನ: ಪೊಲೀಸರತ್ತ ಕಾರು ನುಗ್ಗಿಸಿ ಸಿಕ್ಕಿ ಬಿದ್ದ ಆರೋಪಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಉಪ್ಪಿನಂಗಡಿ ಬಳಿಯ ಕೊಯಿಲ ಗ್ರಾಮದ ಸಹೋದರರಿಬ್ಬರನ್ನು ಅಪಹರಿಸಿ ಗೃಹಬಂಧನದಲ್ಲಿಟ್ಟು ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದ ಐವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತರನ್ನು ಉಪ್ಪಿನಂಗಡಿ ಕರುವೇಲು ಗ್ರಾಮದ ಅಬೂಬಕ್ಕರ್ ಸಿದ್ಧಿಕ್‌ (39), ಬಂಟ್ವಾಳ ಗಡಿಯಾರ ಗ್ರಾಮದ ಕಲಂದರ್ ಶಾಫಿ (22), ಬೆಳ್ತಂಗಡಿ ತಾಲ್ಲೂಕಿನ ಬಂಡಾರು ಗ್ರಾಮದ ಪೆರಲ್‌ ಪಡಿಕೆ ಹೌಸ್‌ನ ಮಹಮ್ಮದ್ ಇರ್ಷಾದ್‌ (28), ಬಂಟ್ವಾಳ ಪುದು ಗ್ರಾಮದ ಸುಜೀರ್‌ನ ಇರ್ಫಾನ್‌ (38) ಹಾಗೂ ನಗರದ ಪಾಂಡೇಶ್ವರ ಶಿವನಗರದ ಮೊಹಮ್ಮದ್‌ ರಿಯಾಜ್‌ (30) ಬಂಧಿತರು’ ಎಂದು ಪೊಲೀಸರು ಮಾಹಿತಿ ನೀಡಿದರು. 

‘ದುಷ್ಕರ್ಮಿಗಳ ತಂಡವೊಂದು ಕೊಯಿಲ ಗ್ರಾಮದ ನಿವಾಸಿ ನಿಜಾಮುದ್ದೀನ್, ಅವರ ಚಿಕ್ಕಮ್ಮನ ಮಗ ಶಾರುಖ್‌ ಮತ್ತು ಆತನ ಗೆಳೆಯನನ್ನು ಗುರುವಾರ ಪೆರ್ನೆ ಬಳಿಯ ಸೇಡಿಯಾಪುವಿನಿಂದ ಅಪಹರಿಸಿ ಹಲ್ಲೆ ನಡೆಸಿತ್ತು. ಶಾರುಖ್‌ನನ್ನು ಒತ್ತೆ ಇರಿಸಿಕೊಂಡ ದುಷ್ಕರ್ಮಿಗಳು, ನಿಜಾಮುದ್ದೀನ್‌ನನ್ನು ಮನೆಗೆ ಕಳುಹಿಸಿ ₹ 4ಲಕ್ಷ ಹಣ ತರುವಂತೆ ಸೂಚಿಸಿದ್ದರು. ನಿಜಾಮುದ್ದೀನ್‌ ಈ ಬಗ್ಗೆ ಉಪ್ಪಿನಂಗಡಿ ಠಾಣೆಗೆ ಶುಕ್ರವಾರ ದೂರು ನೀಡಿದ್ದರು. ಆದರೆ ಅಪಹರಣಕ್ಕೊಳಗಾದ ಶಾರುಖ್‌ ಪತ್ತೆಯಾಗಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ನಿಜಾಮುದ್ದೀನ್‌ ಅವರ ಚಿಕ್ಕಮ್ಮನ ಮಗ ಶಾರುಖ್‌ ಸೌದಿ ಅರೇಬಿಯಾದಲ್ಲಿ ಒಂದೂವರೆ ವರ್ಷದಿಂದ ವಾಹನ ಚಾಲಕರಾಗಿ ಕೆಲಸಮಾಡುತ್ತಿದ್ದರು. ಜ.18ರಂದು ವಿದೇಶದಿಂದ ಊರಿಗೆ ಮರಳಿದ್ದರು. ಅದರ ಮರುದಿನವೇ ಅವರ ಹಾಗೂ ಅವರ ಸೋದರನ ಅಪಹರಣ ನಡೆದಿತ್ತು.’

ಪೊಲೀಸರತ್ತ ಕಾರು ನುಗ್ಗಿಸಿ ಸಿಕ್ಕಿ ಬಿದ್ದ ಆರೋಪಿಗಳು: ‘ಮಂಗಳೂರು ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಮಲ್ಲಿಕಾರ್ಜುನ ಅಂಗಡಿ ಹಾಗೂ ಪ್ರದೀಪ್ ನಾಗನಗೌಡ ಅರ್ಕುಳ ತುಪ್ಪೆಕಲ್ಲು ಎಂಬಲ್ಲಿ ಗುರುವಾರ ರಾತ್ರಿ ಗಸ್ತು ತಿರುಗುತ್ತಿರುವಾಗ  ಬಿಳಿ ಬಣ್ಣದ ಮಾರುತಿ ಸುಝುಕಿ ಆಲ್ಟೊ ಕಾರು (ಕೆಎ-19-ಎಂಎ 3457) ನಿಂತಿತ್ತು. ಅದರ ಪಕ್ಕ ಇಬ್ಬರು ನಿಂತಿದ್ದರು. ಕಾರಿನಲ್ಲಿದ್ದವರನ್ನು ಕಾನ್‌ಸ್ಟೆಬಲ್‌ಗಳು ವಿಚಾರಿಸಿದ್ದರು. ಆಗ ಅಲ್ಲಿ ನಿಂತಿದ್ದವರಿಬ್ಬರು ಪೊಲೀಸ್‌ ಸಿಬ್ಬಂದಿಯತ್ತ ಏಕಾಏಕಿ ಕಲ್ಲು ತೂರಿ, ಕಾರಿನೊಳಗೆ ಹತ್ತಿ ಪರಾರಿಯಾಗಲು ಯತ್ನಿಸಿದರು. ಪ್ರದೀಪ ನಾಗನಗೌಡ ಅವರತ್ತ ಕಾರನ್ನು ನುಗ್ಗಿಸಿ ಕೊಲೆಗೆ ಯತ್ನಿಸಿದ್ದರು’

‘ಪರಾರಿಯಾದ ಕಾರನ್ನು ಶುಕ್ರವಾರ ಮಧ್ಯಾಹ್ನ ಕಂಡುಹಿಡಿಯುವಲ್ಲಿ ಪೊಲೀಸರು ಸಫಲವಾಗಿದ್ದರು. ಕಾರಿನಲ್ಲಿ ಆರೋಪಿಗಳಾದ ಅಬೂಬಕ್ಕರ್ ಸಿದ್ಧಿಕ್‌, ಕಲಂದರ್ ಶಾಫಿ, ‌ಮಹಮ್ಮದ್ ಇರ್ಷಾದ್‌, ಇರ್ಫಾನ್‌ ಹಾಗೂ ಮೊಹಮ್ಮದ್‌ ರಿಯಾಜ್‌ ಸಿಕ್ಕಿದ್ದರು. ಅವರ ಜೊತೆಗೆ ಶಾರುಖ್‌ ಕೂಡ ಇದ್ದರು. ತಮ್ಮನ್ನು ಹಾಗೂ ಅಣ್ಣ ನಿಜಾಮುದ್ದೀನ್‌ ಅವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಬಗ್ಗೆ ಶಾರುಖ್‌ ಮಾಹಿತಿ ನೀಡಿದ್ದರು. ಆರೋಪಿಗಳು ಆತನಲ್ಲಿದ್ದ ₹ 22,500 ನಗದು ಹಾಗೂ ಒಪ್ಪೊ ಮೊಬೈಲ್‌ ಕಿತ್ತುಕೊಂಡಿದ್ದು ಹಾಗೂ ₹ 4 ಲಕ್ಷ ಹಣ ತರುವಂತೆ  ನಿಜಾಮುದ್ದಿನನ್ನು ಬಿಟ್ಟು ಕಳುಹಿಸಿದ್ದು ಬೆಳಕಿಗೆ ಬಂದಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದರು.

‘ಆರೋಪಿಗಳಲ್ಲಿ ಅಬೂಬಕ್ಕರ್‌ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳು ಉಪ್ಪಿನಂಗಡಿ ಠಾಣೆಯಲ್ಲಿ ಹಾಗೂ ಅಪಹರಣಕ್ಕೆ ಸಂಬಂಧಿಸಿದ ಒಂದು ಪ್ರಕರಣ  ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದೆ. ಕಲಂದರ್‌ ಶಾಫಿ ವಿರುದ್ಧ ಮಂಗಳೂರು ಉತ್ತರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಇರ್ಫಾನ್‌ ವಿರುದ್ಧ ಕೊಲೆ ಯತ್ನ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆ ಮತ್ತು ಉಳ್ಳಾಲ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಹಲ್ಲೆ ಸಂಬಂಧ ಮೊಹಮ್ಮದ್‌ ರಿಯಾಜ್‌ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ  ಹಲ್ಲೆಗೆ  ಪ್ರಕರಣ ದಾಖಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಆರೋಪಿಗಳ ವಿರುದ್ಧ ಡಕಾಯಿತಿ ಹಾಗೂ ಪೊಲೀಸ್‌ ಸಿಬ್ಬಂದಿಯತ್ತ ಕಲ್ಲು ತೂರಿ,  ಕಾರನ್ನು ನುಗ್ಗಿಸಿದ ಸಂಬಂಧ ಕೊಲೆ ಯತ್ನ  ಪ್ರಕರಣ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸಿಪಿ ದಿನಕರ ಶೆಟ್ಟಿ ಹಾಗೂ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ ಜಾನ್ಸನ್‌ ಡಿಸೋಜ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

–0–

ಅಪಹರಣ ಏಕೆ?

‘ಶಾರುಖ್‌ನ ದೊಡ್ಡಮ್ಮನ ಮಗ ಶಫೀಕ್‌ ಕೂಡಾ ಸೌದಿ ಅರೇಬಿಯಾದಲ್ಲಿದ್ದಾನೆ. ಶಫೀಕ್‌ ಎರಡು ತಿಂಗಳ ಹಿಂದೆ ಚಿನ್ನದ ಬಿಸ್ಕೆಟ್‌ ಅನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿ ಯಾರಿಗೊ ತಲುಪಿಸುವ ಹೊಣೆ ಹೊತ್ತಿದ್ದ. ಆದರೆ, ವಿದೇಶದಿಂದ ಭಾರತಕ್ಕೆ ಬಂದಿದ್ದ ಆತ ಚಿನ್ನದ ಬಿಸ್ಕೆಟ್‌ ಅನ್ನು ತಲುಪಿಸಬೇಕಾದವರಿಗೆ ತಲುಪಿಸಿರಲಿಲ್ಲ. ಆತನ ಚಿಕ್ಕಮ್ಮನ ಮಗ ಶಾರುಖ್‌ ಸೌದಿಯಿಂದ ಊರಿಗೆ ಮರಳಿದ್ದು ಆರೋಪಿ ಕಡೆಯವರಿಗೆ ಗೊತ್ತಾಗಿತ್ತು. ಶಾರುಖ್‌ನನ್ನು ಅಪಹರಿಸಿ ಸುಮಾರು 40 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್‌ ಮರಳಿ ಪಡೆಯುವುದು ಅವರ ಉದ್ದೇಶವಾಗಿತ್ತು’ ಎಂದು ಶಶಿಕುಮಾರ್‌ ವಿವರಿಸಿದರು.

‘ಎರಡು ತಿಂಗಳ ಹಿಂದೆ ಸ್ವದೇಶಕ್ಕೆ ಬಂದಿದ್ದ ಶಫೀಕ್‌ ಮುಂಬೈನಿಂದಲೇ ಮರಳಿದ್ದ. ಮನೆಗೂ ಬಂದಿರಲಿಲ್ಲ. ಆತ ಚಿನ್ನದ ಬಿಸ್ಕೆಟ್‌ ತಂದಿದ್ದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

–0–

ರೌಡಿ ಶೀಟರ್‌ ತಲ್ಲತ್‌ ಕೈವಾಡ?

ಐವರು ಆರೋಪಿಗಳು ರೌಡಿ ಶೀಟರ್‌ ತಲ್ಲತ್‌ ಸೂಚನೆ ಪ್ರಕಾರ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
‘ಈ ಭಾಗದಲ್ಲಿ ಅಪರಾಧ ಚಟುವಟಿಕೆಯಲ್ಲಿ ತೊಡಗಿ, ಬೆಂಗಳೂರಿನಲ್ಲಿ ವಾಸವಾಗಿರುವ ರೌಡಿಶೀಟರ್‌ನ ಆಣತಿಯಂತೆ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ. ರೌಡಿ ಶೀಟರ್‌ ಮಂಗಳೂರು ಕಮಿಷನರೇಟ್‌, ದಕ್ಷಿಣ ಕನ್ನಡ ಹಾಗೂ ಕೇರಳ ಭಾಗದಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಆತನನ್ನು ಗಡಿಪಾರು ಮಾಡಬೇಕು ಎಂಬ ಪ್ರಸ್ತಾವನ್ನೂ ಪೊಲೀಸ್‌ ಇಲಾಖೆ ಸಲ್ಲಿಸಿದೆ’ ಎಂದು ಶಶಿಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು