ಶನಿವಾರ, ಜನವರಿ 28, 2023
15 °C
ವಾಮಂಜೂರಿನಿಂದ ಲಾಲ್‌ಬಾಗ್‌ವರೆಗೆ ನಡೆದೇ ಸಾಗಿದ ಪ್ರತಿಭಟನಾಕಾರರು

ಕೊರಗರಿಗೆ ನಿವೇಶನ ಹಸ್ತಾಂತರಕ್ಕೆ ಒತ್ತಾಯಿಸಿ ಪಾದಯಾತ್ರೆ

ಪ್ರಜಾವಾಣಿ ವಾರ್ತೆ ‌ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರಾವಳಿಯ ಆದಿವಾಸಿಗಳಾದ ಕೊರಗ ಸಮುದಾಯದ ಕುಟುಂಬಗಳಿಗೆ 2018ರಲ್ಲಿ ಮಂಜೂರಾದ 33 ಮನೆ ನಿವೇಶನಗಳನ್ನು ಹಸ್ತಾಂತರಿಸಲು ಆಗ್ರಹಿಸಿ ವಾಮಂಜೂರು ಜಂಕ್ಷನ್‌ನಿಂದ ಲಾಲ್‌ಬಾಗ್‌ನ ಪಾಲಿಕೆ ಕಚೇರಿವರೆಗೆ ಸೋಮವಾರ ಪಾದಯಾತ್ರೆ ನಡೆಯಿತು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಏರ್ಪಡಿಸಿದ್ದ ಪಾದಯಾತ್ರೆಯನ್ನು ಉದ್ಘಾಟಿಸಿದ ಜಾನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು, ‘ಈ ನೆಲದ ಒಡೆಯರಾಗಿದ್ದ ಮೂಲನಿವಾಸಿ ಕೊರಗ ಕುಟುಂಬಗಳು ಈಗ ನೆಲೆ ಇಲ್ಲದೆ ಪರಿತಪಿಸಬೇಕಾಗಿದೆ. ಸ್ವಾತಂತ್ರ್ಯ ದೊರೆತು 75 ವರ್ಷಗಳ ಬಳಿಕವೂ ಅವರು ಜಮೀನಿನ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿ ಬಂದುದು ವ್ಯವಸ್ಥೆಯ ಸೋಲು’ ಎಂದರು.

‘ಪಾಲಿಕೆ ವಿಳಂಬ ಮಾಡದೆ 33 ಕೊರಗ ಕುಟುಂಬಗಳಿಗೂ ಬೇಷರತ್ತಾಗಿ ನಿವೇಶನಗಳನ್ನು ಹಸ್ತಾಂತರ ಮಾಡಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್ ನಾಡ, ‘ಕೊರಗರ ಜನಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ. ಉದ್ಯೋಗ, ವಸತಿ ಮತ್ತು ಆರೋಗ್ಯದ ಪ್ರಶ್ನೆ ಗಂಭೀರವಾಗಿ ಕಾಡುತ್ತಿದೆ. ಇಂತಹ ಸಮಯದಲ್ಲಿ ಕೊರಗ ಸಮುದಾಯಕ್ಕೆ ಬೆಂಗಾವಲಾಗಬೇಕಾದ ಸರ್ಕಾರ ಅವರಿಗೇ ಅನ್ಯಾಯವೆಸಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಹಮ್ಮದ್ ಪೀರ್ ವರದಿಯ ಪ್ರಕಾರ ಕೊರಗ ಕುಟುಂಬಗಳಿಗೆ ತಲಾ ಎರಡೂವರೆ ಎಕರೆ ಕೃಷಿ ಭೂಮಿ ವಿತರಿಸಬೇಕು’ ಎಂದು ಹೇಳಿದರು.

ರೈತ ಕಾರ್ಮಿಕ ಮುಂದಾಳು ಕೆ.ಯಾದವ ಶೆಟ್ಟಿ, ‘ 33 ಕೊರಗ ಕುಟುಂಬಗಳಿಗೆ ತಿಂಗಳ ಒಳಗೆ ನಿವೇಶನಗಳ ಹಕ್ಕುಪತ್ರ ಹಸ್ತಾಂತರಿಸದಿದ್ದಲ್ಲಿ  ಹೋರಾಟ ತೀವ್ರಗೊಳಿಸುತ್ತೇವೆ’ ಎಂದರು.

ಕಾರ್ಮಿಕ ಮುಂದಾಳು ಸದಾಶಿವ ದಾಸ್‌, ‘ಕೊರಗ ಸಮುದಾಯಕ್ಕೆ ಅನ್ಯಾಯವೆಸಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ’ ಎಂದರು.

ಸಮಿತಿಯ ಸಂಚಾಲಕ ಕೆ.ಕರಿಯ, ‘ನಿವೇಶನ ಹಸ್ತಾಂತರ ಆಗುವವರೆಗೂ ಹೋರಾಟದಿಂದ ನಿಲ್ಲದು’ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಆದಿವಾಸಿ ಹಕ್ಕುಗಳ ರಾಜ್ಯ ಸಮಿತಿಯ ಸಹಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ,  ಸ್ಥಳೀಯ ಪಾಲಿಕೆ ಸದಸ್ಯ ಕೆ.ಭಾಸ್ಕರ್, ಯೋಗೀಶ್ ಜಪ್ಪಿನಮೊಗರು ಮಾತನಾಡಿದರು.

ಸಂಘಟನೆಯ ಪದಾಧಿಕಾರಿಗಳಾದ ಶೇಖರ್, ಪ್ರನೀತ್, ವಿನೋದ್ ವಿಕ್ಯಾತ್, ಮಂಜುಳಾ, ಯಶೋದಾ, ವಿಕಾಸ್, ವಿಘ್ನೇಶ್, ಗಣೇಶ್, ಕೃಷ್ಣಪ್ಪ ಅವರು ಪಾದಯಾತ್ರೆಯ ನೇತೃತ್ವ ವಹಿಸಿದ್ದರು.

ಮನೋಜ್ ವಾಮಂಜೂರು, ಸಾಹಿತಿ ಬಿ.ಎಂ.ರೋಹಿಣಿ, ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ರಾಧಕೃಷ್ಣ, ರಘುವೀರ್, ದಿನೇಶ್ ಬೊಂಡಂತಿಲ, ಜಯಶೀಲ, ಪ್ರಶಾಂತ್ ಎಂ.ಬಿ, ಮನೋಜ್ ಉರ್ವಸ್ಟೋರ್ ಭಾಗವಹಿಸಿದರು.

–0–

‘ವೆಂಕೋಜಿರಾವ್‌ ನೀಡಿದ್ದ ಜಾಗ ಕೊಡಿ’

ಪಾಲಿಕೆ ಕಚೇರಿ ಎದುರು ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಸುನಿಲ್ ಕುಮಾರ್‌ ಬಜಾಲ್‌, ‘ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಕುದ್ಮುಲ್‌ ರಂಗರಾಯರಿಂದ ಪ್ರೇರಿತರಾದ ವೆಂಕೋಜಿ ರಾವ್‌ ಪರಿಶಿಷ್ಟರಿಗಾಗಿ ದಾನವಾಗಿ ನೀಡಿದ ಜಮೀನನನ್ನು ಕೊರಗ ಸಮುದಾಯಕ್ಕೆ ನೀಡಿ ಎಂಬುದೇ ನಮ್ಮ ಬೇಡಿಕೆ. 33 ಕುಟುಂಬಗಳಿಗೆ ತಲಾ 2.5 ಸೆಂಟ್ಸ್‌ ಜಾಗ ನೀಡಲು  ಪಾಲಿಕೆ  2018ರಲ್ಲಿ ತೀರ್ಮಾನ ಕೈಗೊಂಡಿದೆ. ಐದು ವರ್ಷದ ಬಳಿಕವೂ ಅವರಿಗೆ ಹಕ್ಕುಪತ್ರ ಕೊಟ್ಟಿಲ್ಲ ಏಕೆ’ ಎಂದು ಪ್ರಶ್ನಿಸಿದರು.

‘ಈ ನೆಲದ ವಾರಸುದಾರರಾದ ಬುಡಕಟ್ಟು ಕೊರಗ ಸಮುದಾಯದವರ ಮೇಲೆ ನಿರಂತರ ದಬ್ಬಾಳಿಕೆ ನಡೆದಿದೆ. ಭೂಸಂಪತ್ತಿನ ಒಡೆಯರಾಗಬೇಕಾದ ಅವರು ವಾಸಕ್ಕೂ ಜಮೀನಿಲ್ಲದ ಸ್ಥಿತಿ ಎದುರಿಸುತ್ತಿರುವುದು ವಿಪರ್ಯಾಸ. ಈಗ ಉಳಿದಿರುವುದೇ ಬೆರಳೆಣಿಕೆಯಷ್ಟು ಕೊರಗ ಕುಟುಂಬಗಳು. ಆರೋಗ್ಯ, ಉದ್ಯೋಗ, ಶಿಕ್ಷಣಗಳೆಲ್ಲವೂ ಈ ಸಮುದಾಯಕ್ಕೆ ಮರೀಚಿಕೆ ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು