ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರಗ -ಬ್ರಾಹುಯಿ ಭಾಷೆ ನಡುವೆ ಸಾಮ್ಯತೆ

ಮಂಗಳೂರು ವಿಶ್ವವಿದ್ಯಾಲಯದ ಅಧ್ಯಯನದಿಂದ ಪತ್ತೆ
Published 27 ಫೆಬ್ರುವರಿ 2024, 4:40 IST
Last Updated 27 ಫೆಬ್ರುವರಿ 2024, 4:40 IST
ಅಕ್ಷರ ಗಾತ್ರ

ಮಂಗಳೂರು: ಉತ್ತರದ ದ್ರಾವಿಡ ಭಾಷೆಗಳು ಮತ್ತು ಕೊರಗ ಭಾಷೆಯ ಆನುವಂಶಿಕ ವ್ಯಾಕರಣ ಲಕ್ಷಣಗಳಲ್ಲಿ ಸಾಮ್ಯತೆ ಇರುವುದು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಿಂದ ತಿಳಿದುಬಂದಿದೆ.

‘ಇಲ್ಲಿಂದ 2ಸಾವಿರ ಕಿ.ಮೀ ದೂರದಲ್ಲಿರುವ ಪಾಕಿಸ್ತಾನದಲ್ಲಿರುವ ಏಕೈಕ ದ್ರಾವಿಡ ಜನಾಂಗವಾಗಿರುವ ಬ್ರಾಹುಯಿ ಜನಾಂಗದ ಭಾಷೆಗೂ ಕೊರಗರ ಭಾಷೆಗೂ ಹೋಲಿಕೆ ಇರುವುದು ಅಚ್ಚರಿ ಮೂಡಿಸಿದೆ. ಕೊರಗರ ಮಾತೃಸಂಬಂಧಿ ವಂಶವಾಹಿಗಳ ಕುರಿತು ನಡೆಸಿದ ಅಧ್ಯಯನದಲ್ಲಿ, ಕೊರಗ ಭಾಷೆಯು ಸಿಂಧೂ ನಾಗರೀಕತೆಯ ಅವನತಿಯ ಸಮಯದಲ್ಲಿ ದಕ್ಷಿಣದ ಕಡೆಗೆ ವಲಸೆ ಹೋದ ಜನಾಂಗದ ಒಂದು ಮಾತೃಭಾಷೆಯನ್ನು ಪ್ರತಿನಿಧಿಸುತ್ತದೆ’ ಎಂದು ಸಂಶೋಧಕರ ತಂಡವು ಅಭಿಪ್ರಾಯಪಟ್ಟಿದೆ. ಈ ಸಂಶೋಧನಾ ಪ್ರಬಂಧವು ಪ್ರತಿಷ್ಠಿತ ‘ಫ್ರಾಂಟಿಯರ್ಸ್ ಇನ್ ಜೆನೆಟಿಕ್ಸ್ʼನಲ್ಲಿ ಪ್ರಕಟಗೊಂಡಿದೆ.

ಸಂಶೋಧಕರ ತಂಡದ ಲೇಖಕರಲ್ಲಿ ಒಬ್ಬರಾದ ಜೈಸನ್ ಸಿಕ್ವೇರ, ‘ಕೊರಗರ ಆನುವಂಶಿಯತೆಯು ನಮಗೆ ಹಿಂದಿನ ಕನಿಷ್ಠ ಎರಡು ನಿರ್ಣಾಯಕ ಕಾಲಾವಧಿಗಳನ್ನು ತಿಳಿಸುತ್ತದೆ. ಮಾತೃಸಂಬಂಧಿ ವಂಶವಾಹಿ ಸಂಗ್ರಹ (ಜೀನ್ ಪೂಲ್) ಸುಮಾರು 16 ಸಾವಿರ ವರ್ಷಗಳ ಹಿಂದಿನ ಪ್ಲೀಸ್ಟೋಸೀನ್ ಯುಗಕ್ಕೆ ಸಂಬಂಧಿಸಿದ್ದರೆ, ಪಿತೃ ಸಂಬಂಧಿ ವಂಶವಾಹಿ ಸಂಗ್ರಹವು ಇನ್ನಷ್ಟು ಹಿಂದಕ್ಕೆ ಹೋಗಿ ಸುಮಾರು 30 ಸಾವಿರ ವರ್ಷಗಳಿಗೂ ಹಿಂದೆ ಇದ್ದ ಕೊನೆಯ ಗ್ಲೇಷಿಯಲ್ ಗರಿಷ್ಠ (Last Glacial Maximum) ಯುಗಕ್ಕೆ ಸೇರಿರುತ್ತದೆ. ಈ ಯುಗವು ಭಾರತೀಯ ಉಪಖಂಡದ ಮೂಲ ಪಿತೃ ಆನುವಂಶಿಯತೆ ರೂಪುಗೊಂಡ ಕಾಲ’ ಎಂದು ಅಭಿಪ್ರಾಯಪಡುತ್ತಾರೆ.  

ಈ ಅಧ್ಯಯನ ಪ್ರಬಂಧದ ಸಹ ಲೇಖಕ, ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮುಸ್ತಾಕ್ ಎಂ.ಎಸ್, ‘ದಕ್ಷಿಣ ಭಾರತದ ಪ್ರಾಚೀನ ಡಿಎನ್ಎ ದೊರೆಯದಿರುವಾಗ ಈ ಪ್ರಾಚೀನ ಬುಡಕಟ್ಟು ಸಮುದಾಯವು ಉತ್ತಮ ಬದಲಿ ಪ್ರತಿನಿಧಿಯಾಗಿ ಕಂಡುಬರುತ್ತಿದೆ’ ಎಂದರು.

ವಿಶ್ವಪ್ರಸಿದ್ಧ ಭಾಷಾಶಾಸ್ತ್ರಜ್ಞ  ಜಾರ್ಜ್ ವಾನ್ ಡ್ರೆಮ್ (ಬರ್ನ್ ವಿಶ್ವವಿದ್ಯಾಲಯ, ಸ್ವಿಜರ್ಲೆಂಡ್‌), ವಿನುತಲಕ್ಷ್ಮಿ ಮತ್ತು ರಣಜಿತ್ ದಾಸ್ (ಯೆನೆಪೊಯ ಡೀಮ್ಡ್ ವಿಶ್ವವಿದ್ಯಾಲಯ) ಅವರು ಈ ಸಂಶೋಧನಾ ಪ್ರಬಂಧದ ಸಹಲೇಖಕರಾಗಿದ್ದಾರೆ.

ಬುಡಕಟ್ಟು ಸಮುದಾಯವಾದ ಕೊರಗರಿ ಮುಖ್ಯವಾಗಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭಾಗಗಳಲ್ಲಿ, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಮತ್ತು ಉತ್ತರ ಕನ್ನಡದ ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಅವರದು ಈ ಭಾಗದ ಅತ್ಯಂತ ಬಡ ಮತ್ತು ಅಳಿವಿನ ಅಂಚಿನಲ್ಲಿರುವ ಬುಡಕಟ್ಟುಗಳಲ್ಲಿ ಒಂದಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT