ಶನಿವಾರ, ಸೆಪ್ಟೆಂಬರ್ 25, 2021
22 °C
ಹೊಸ ಸಂಪುಟ ಸೇರಲು ಜಿಲ್ಲೆಯಲ್ಲಿ ಕಾಣದ ಪೈಪೋಟಿ

ಕೋಟ, ಅಂಗಾರಗೆ ಮತ್ತೆ ಸಚಿವ ಸ್ಥಾನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಚಿವ ಸಂಪುಟದ ಪಟ್ಟಿಯಲ್ಲಿ ಅಂತಿಮಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಇತ್ತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ತವರಿನಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಪೈಪೋಟಿ ಕಾಣುತ್ತಿಲ್ಲ.

ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಶಾಸಕರಿದ್ದು, ಎಸ್. ಅಂಗಾರ ಅವರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಯಾವೊಬ್ಬ ಶಾಸಕರೂ ಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸಿಲ್ಲ. ಎಲ್ಲರೂ ತಮ್ಮ ಕ್ಷೇತ್ರಗಳಲ್ಲಿಯೇ ಉಳಿದಿದ್ದು, ಹಿರಿತನ ಆಧಾರದಲ್ಲಿ ಮತ್ತೊಮ್ಮೆ ಎಸ್‌. ಅಂಗಾರ ಹಾಗೂ ಉಭಯ ಜಿಲ್ಲೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿ ಬರುತ್ತಿವೆ.

ಬಿ.ಎಸ್‌. ಯಡಿಯೂರಪ್ಪ ಅವರ ಅವಧಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ತಲಾ ಒಂದು ಸಚಿವ ಸ್ಥಾನ ದೊರಕಿತ್ತು. ಈ ಪೈಕಿ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ, ಎಸ್‌. ಅಂಗಾರ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಇದೀಗ ಬೊಮ್ಮಾಯಿ ಅವರ ಹೊಸ ಸಂಪುಟದಲ್ಲಿ ಅಂಗಾರ ಅವರಿಗೆ ಸ್ಥಾನ ಸಿಗಲಿದೆಯೇ ಎನ್ನುವ ಕುತೂಹಲ ಉಂಟಾಗಿದೆ. 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಏಳು ತಿಂಗಳ ಹಿಂದೆಯಷ್ಟೇ ಅವರಿಗೆ ಸಚಿವ ಸ್ಥಾನ ದೊರಕಿತ್ತು. ಯಡಿಯೂರಪ್ಪ ರಾಜೀನಾಮೆಯ ನಂತರ ಸಚಿವ ಸ್ಥಾನವೂ ಹೋಗಿದ್ದು, ಮತ್ತೊಮ್ಮೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಉತ್ಸಾಹ ಅಂಗಾರ ಅವರಲ್ಲಿ ಮಾತ್ರ ಇದ್ದಂತೆ ಕಾಣುತ್ತಿದೆ.

ಬೊಮ್ಮಾಯಿ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಆ ಜಿಲ್ಲೆಯ ಬಹುತೇಕ ಶಾಸಕರು ಬೊಮ್ಮಾಯಿ ಅವರಿಗೆ ಆಪ್ತರಾಗಿಯೇ ಇದ್ದಾರೆ. ಅದರಲ್ಲೂ ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಸ್ವಲ್ಪ ಹೆಚ್ಚಾಗಿಯೇ ಆಕ್ರೋಶಗೊಂಡಿದ್ದು, ಅವರನ್ನು ಸಮಾಧಾನ ಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಅವರ ಆಯ್ಕೆಗೆ ಮಾನ್ಯತೆ ಸಿಗುವ ಸಾಧ್ಯತೆಗಳು ಇವೆ. ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎಸ್‌. ಅಂಗಾರ ಅವರು ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿದ್ದು, ಉಭಯ ನಾಯಕರಿಗೆ ಸಚಿವ ಸ್ಥಾನ ನೀಡಲು ವಿರೋಧ ಇಲ್ಲದೇ ಇರುವುದು ಅವರ ಹಾದಿಯನ್ನು ಸುಗಮಗೊಳಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ನಿಗಮ ಮಂಡಳಿಯತ್ತ ದೃಷ್ಟಿ

ಜಿಲ್ಲೆಯ ಶಾಸಕರಿಗೆ ಸದ್ಯಕ್ಕೆ ಸಚಿವ ಸ್ಥಾನದ ಮೇಲೆ ಆಸೆ ಇಲ್ಲದೇ ಇದ್ದರೂ, ನಿಗಮ– ಮಂಡಳಿಗಳತ್ತ ದೃಷ್ಟಿ ನೆಟ್ಟಿದ್ದಾರೆ.

ಡಿ. ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್ ನಾಯ್ಕ್‌, ಹರೀಶ್‌ ಪೂಂಜ, ಸಂಜೀವ ಮಠಂದೂರು ಅವರಿಗೆ ಕನಿಷ್ಠ ಇಬ್ಬರಿಗಾದರೂ ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಬಿಜೆಪಿ ರಾಜ್ಯ ಸಹಕಾರ ಪ್ರಕೋಷ್ಠದ ಸಂಚಾಲಕರಾಗಿರುವ ಸಂಜೀವ ಮಠಂದೂರು ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

ಸದ್ಯಕ್ಕೆ ಕಿಯೋನಿಕ್ಸ್‌ ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನಿತಿನ್‌ಕುಮಾರ್‌, ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ರವೀಂದ್ರ ಶೆಟ್ಟಿ, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಜ್‌ ಅಧ್ಯಕ್ಷರಾಗಿ ಸಂತೋಷ್‌ಕುಮಾರ್‌ ರೈ ಬೋಳಿಯಾರ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು