ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಕೆಎಸ್‌ಆರ್‌ಟಿಸಿಗೆ ಬೇಕಿದೆ ಇನ್ನಷ್ಟು ‘ಶಕ್ತಿ’

Published 15 ಜನವರಿ 2024, 6:11 IST
Last Updated 15 ಜನವರಿ 2024, 6:11 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭವಾದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಎಲ್ಲೆಂದರಲ್ಲಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದೆಂದು ಕನಸು ಹೆಣೆದಿದ್ದ ಮಹಿಳಾ ಪ್ರಯಾಣಿಕರಿಗೆ ನಿರಾಸೆಯಾಗಿದೆ. ಶಕ್ತಿ ಯೋಜನೆ ಜಾರಿಯಾಗಿ ಆರು ತಿಂಗಳು ಕಳೆದರೂ, ಕೋವಿಡ್ ವೇಳೆ ಸ್ಥಗಿತಗೊಂಡಿದ್ದ ಬಹುತೇಕ ಮಾರ್ಗಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳು ರಸ್ತೆಗಿಳಿದಿಲ್ಲ.

ಖಾಸಗಿ ಬಸ್‌ಗಳ ಪ್ರಾಬಲ್ಯ ಇರುವ ಜಿಲ್ಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಸೀಮಿತ ಮಾರ್ಗಗಳಲ್ಲಿ ಮಾತ್ರ ಬೇಡಿಕೆ ಇತ್ತು. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಅನುಷ್ಠಾನಗೊಳಿಸಿದ ಮೇಲೆ ಹೆಚ್ಚುವರಿ ಸರ್ಕಾರಿ ಬಸ್‌ ಸಂಚಾರ ಪ್ರಾರಂಭಿಸುವಂತೆ ಸಾರ್ವಜನಿಕರು, ಸಂಘಟನೆಗಳು ಕೆಎಸ್‌ಆರ್‌ಟಿಸಿಗೆ ಮನವಿ ಸಲ್ಲಿಸಿದ್ದವು. ಹೀಗಾಗಿ, ಮಂಗಳೂರು ವಿಭಾಗವು, ಕೋವಿಡ್‌ ವೇಳೆ ಸ್ಥಗಿತಗೊಂಡಿದ್ದ 33 ಮಾರ್ಗಗಳಲ್ಲಿ ಸಾರಿಗೆ ಸಂಸ್ಥೆ ಬಸ್ ಸಂಚಾರ ಪುನರಾರಂಭಿಸುವುದಾಗಿ ಹೇಳಿತ್ತು.

ಆದರೆ, ಚಾಲಕರು– ನಿರ್ವಾಹಕರು, ತಂತ್ರಜ್ಞರ ಕೊರತೆ, ಬಸ್‌ಗಳ ಅಲಭ್ಯತೆಯಿಂದಾಗಿ ಈ ಹಿಂದೆ ಇದ್ದ ರೈಲು ನಿಲ್ದಾಣ– ಬಜಪೆ, ಸ್ಟೇಟ್‌ಬ್ಯಾಂಕ್‌– ಶಕ್ತಿನಗರ ಮಾರ್ಗಗಳಲ್ಲಿ ಮಾತ್ರ ಬಸ್‌ ಸಂಚಾರ ಪುನರಾರಂಭಿಸಲು ಕೆಎಸ್‌ಆರ್‌ಟಿಸಿಗೆ ಸಾಧ್ಯವಾಗಿದೆ. ಪರವಾನಗಿ ಇದ್ದರೂ, ಇನ್ನುಳಿದ 31 ಮಾರ್ಗಗಳಲ್ಲಿ ಬೇಡಿಕೆ ಇದ್ದರೂ, ಇನ್ನೂ ಸಾರಿಗೆ ಸಂಸ್ಥೆಯ ಬಸ್‌ಗಳು ಓಡುತ್ತಿಲ್ಲ. ಅತಿ ಹೆಚ್ಚು ಬೇಡಿಕೆ ಇರುವ ಮೂಡುಬಿದಿರೆ ಮಾರ್ಗದಲ್ಲಿ ಈಗಲೂ ಖಾಸಗಿ ಬಸ್‌ಗಳ ಏಕಾಧಿಪತ್ಯ ಮುಂದುವರಿದಿದೆ.

‘ಕೋವಿಡ್‌ ಸಂದರ್ಭದಲ್ಲಿ ನಗರ ಸಾರಿಗೆಗೆ ಬೇಡಿಕೆ ತೀವ್ರವಾಗಿ ಕುಸಿದಿತ್ತು. ಹಾಗಾಗಿ ಕೆಲವು ಮಾರ್ಗಗಳಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅದೇ ವೇಳೆ ಬೇರೆ ಜಿಲ್ಲೆಗಳಿಗೆ ಇಲ್ಲಿನ 12 ಬಸ್‌ಗಳನ್ನು ಕಳುಹಿಸಲಾಗಿತ್ತು. ಆಗ ಸ್ಥಗಿತಗೊಂಡಿದ್ದ 33 ಮಾರ್ಗಗಳು, ಹೊಸದಾಗಿ ಬೇಡಿಕೆ ಇರುವ 24 ಮಾರ್ಗ ಸೇರಿ ಒಟ್ಟು 57 ಮಾರ್ಗಗಳಲ್ಲಿ ಈಗ ಬಸ್‌ ಸಂಚಾರ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಈ ಪ್ರಸ್ತಾವವನ್ನು ತಿಂಗಳುಗಳ ಹಿಂದೆ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಈ ಯೋಜನೆ ಜಾರಿಗೊಳಿಸಲು 57 ಬಸ್‌ಗಳು, 198 ಸಿಬ್ಬಂದಿ ಅಗತ್ಯವಿದೆ. ಕೇಂದ್ರ ಕಚೇರಿಯಿಂದ ಮಂಜೂರು ಆದರೆ ತಕ್ಷಣ ಈ ಯೋಜನೆ ಅನುಷ್ಠಾನವಾಗಲಿದೆ’ ಎನ್ನುತ್ತಾರೆ ಅಧಿಕಾರಿಗಳು.

‘ಈ ಹಿಂದೆ 509 ಇದ್ದ ಶೆಡ್ಯೂಲ್‌ಗಳನ್ನು ಪ್ರಸ್ತುತ 519 ಶೆಡ್ಯೂಲ್‌ಗಳಿಗೆ ಹೆಚ್ಚಿಸಲಾಗಿದ್ದು, ಸದ್ಯದಲ್ಲಿ ಇದು 525ಕ್ಕೆ ತಲುಪುತ್ತದೆ. ಸೋಮವಾರದಿಂದ (ಜ.15) ಉಡುಪಿ– ಮಂಗಳೂರು, ಮಣಿಪಾಲ– ಮಂಗಳೂರು ತಲಾ ಎರಡು ಶೆಡ್ಯೂಲ್ ಪ್ರಾರಂಭಿಸಲಾಗುವುದು. ಎಲ್ಲ ಕೊರತೆಗಳ ನಡುವೆಯೂ ಸಾಧ್ಯವಾದಷ್ಟು ಉತ್ತಮ ಸೇವೆ ನೀಡುತ್ತಿದ್ದೇವೆ’ ಎನ್ನುವುದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರು ನೀಡುವ ಸಮಜಾಯಿಷಿ.

‘ಸ್ಟೇಟ್‌ಬ್ಯಾಂಕ್ – ಧರ್ಮಸ್ಥಳ 43 ಶೆಡ್ಯೂಲ್ ಇದ್ದಿದ್ದನ್ನು 51ಕ್ಕೆ ಹೆಚ್ಚಿಸಲಾಗಿದೆ. ಉಪ್ಪಿನಂಗಡಿ, ಸುಬ್ರಹ್ಮಣ್ಯಕ್ಕೂ ಟ್ರಿಪ್ ಹೆಚ್ಚಿಸಲಾಗಿದೆ. ಮಂಗಳೂರು ವಿಭಾಗಕ್ಕೆ ಎರಡು ಸಾರಿಗೆ ಬಸ್‌ಗಳು, ಬಿಎಂಟಿಸಿಯಿಂದ ಎಂಟು ಬಸ್‌ಗಳು (ಬಳಕೆಯಲ್ಲಿ ಹಳೆಯ ಬಸ್‌ಗಳು), ನಾಲ್ಕು ಪಲ್ಲಕ್ಕಿ ಬಸ್‌ಗಳು, ಎರಡು ರಾಜಹಂಸ ಬಸ್‌ಗಳು ಸೇರಿ 18 ಬಸ್‌ಗಳು ಕೇಂದ್ರ ಕಚೇರಿಯಿಂದ ಹೊಸದಾಗಿ ದೊರೆತಿವೆ. ಎರಡು ಪಲ್ಲಕ್ಕಿ ಬಸ್‌ಗಳು ಉತ್ತರ ಕರ್ನಾಟಕಕ್ಕೆ, ಇನ್ನೆರಡು ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿವೆ. ಬಿಎಂಟಿಸಿಯಿಂದ ಬಂದಿರುವ 3–4 ಬಸ್‌ಗಳು ಉಡುಪಿ, ಕುಂದಾಪುರ ಮಾರ್ಗದಲ್ಲಿ ಸಂಚರಿಸುತ್ತಿವೆ. ಸರ್ಕಾರದ ಹಂತದಲ್ಲಿ 450 ಬಸ್‌ಗಳ ಖರೀದಿ, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇವೆಲ್ಲ ಪೂರ್ಣಗೊಂಡ ಮೇಲೆ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮೂಡುಬಿದಿರೆ– ಕಾರ್ಕಳ ಮಾರ್ಗದಲ್ಲಿ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಪ್ರಾರಂಭಿಸಲು ತಾತ್ಕಾಲಿಕ ಪರವಾನಗಿಗೆ ಅರ್ಜಿ ಸಲ್ಲಿಸಲಾಗಿದೆ. ಇದು ದೊರೆತರೆ ಮೂಡುಬಿದಿರೆ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗುವುದು. ನಗರ ಸಾರಿಗೆಯಲ್ಲಿ ಮೂಡುಶೆಡ್ಡೆ– ಸೋಮೇಶ್ವರ, ಸುರತ್ಕಲ್– ಕೃಷ್ಣಾಪುರ– ಗಣೇಶಪುರ ಭಾಗಗಳಲ್ಲಿ ಬಸ್‌ಗಳ ಬೇಡಿಕೆ ಹೆಚ್ಚಿದ್ದು, ಹೆಚ್ಚುವರಿ ಬಸ್ ದೊರೆತರೆ ಈ ಮಾರ್ಗಗಳಿಗೆ ಈಗಾಗಲೇ ಪರವಾನಗಿ ಇರುವುದರಿಂದ ಸಂಚಾರ ಪ್ರಾರಂಭಿಸಬಹುದು. ಬೇಡಿಕೆ ಇರುವ ಇನ್ನು ಕೆಲವು ಮಾರ್ಗಗಳಿಗೆ ತಾತ್ಕಾಲಿಕ ಮತ್ತು ಕಾಯಂ ಪರವಾನಗಿ ಸೇರಿ ಪ್ರಾದೇಶಿಕ ಸಾರಿಗೆ ಕಚೇರಿಗೆ 100ಕ್ಕೂ ಹೆಚ್ಚು ಅರ್ಜಿ ಸಲ್ಲಿಸಲಾಗಿದೆ. ಆದರೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಗಳೇ ನಡೆಯದ ಕಾರಣ ಅರ್ಜಿಗಳು ಬಾಕಿಯಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜೆ– ನರ್ಮ್‌ ಯೋಜನೆಯಡಿ ಮಂಗಳೂರು ವಿಭಾಗಕ್ಕೆ ಒಟ್ಟು 68 ಮಾರ್ಗಗಳಲ್ಲಿ ಬಸ್‌ ಸೇವೆ ಒದಗಿಸುವುದಕ್ಕೆ ಪರವಾನಗಿ ಮಂಜೂರಾಗಿತ್ತು. ಅದರಲ್ಲಿ 14 ಮಾರ್ಗಗಳಲ್ಲಿ ಬಸ್‌ ಸಂಚಾರ ಆರಂಭಿಸುವುದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ಇದೆ. ಕೋವಿಡ್ ವೇಳೆ ಸ್ಥಗಿತಗೊಂಡ ಮಾರ್ಗ ಹೊರತುಪಡಿಸಿ, ಇನ್ನುಳಿದ ಮಾರ್ಗಗಳಲ್ಲಿ ಬಸ್ ಸಂಚರಿಸುತ್ತಿದೆ. ಕಿರಿದಾದ ರಸ್ತೆ ಇರುವ ಪ್ರೀತಿನಗರ, ಗುರುಪುರ ಸಮೀಪದ ಮಣೇಲು ಇಂತಹ ಭಾಗಗಳಲ್ಲಿ ಸಂಚಾರ ಪ್ರಾರಂಭಿಸಲು ಮಿನಿ ಬಸ್ ಅಗತ್ಯವಿದ್ದು, ಇವುಗಳ ಬೇಡಿಕೆಯನ್ನು ನಿಗಮಕ್ಕೆ ಸಲ್ಲಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ದೊಡ್ಡ ಬಸ್‌ಗಳನ್ನು ಓಡಿಸಲು ಸಾಧ್ಯವಾಗದು’ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ ಗ್ರಾಮೀಣ ಭಾಗಗಳಲ್ಲೂ ಕೆಎಸ್‌ಆರ್‌ಟಿಸಿ ಬಸ್‌ಗಳ ಬೇಡಿಕೆ ಇದೆ. ಕುಂದಾಪುರ– ಚೋರಾಡಿ, ಕುಂದಾಪುರ– ಶಿರಿಯಾರ, ಕುಂದಾಪುರ– ಸಿದ್ದಾಪುರ, ಉಡುಪಿಯಿಂದ ಅಲೆವೂರು, ಮಣಿಪಾಲ, ಪರ್ಕಳ, ಮೂಡುಬೆಳ್ಳೆ ಮತ್ತಿತರ ಮಾರ್ಗಗಳಲ್ಲಿ ಬಸ್‌ಗಾಗಿ ಸಾರ್ವಜನಿಕರು ಬೇಡಿಕೆ ಸಲ್ಲಿಸಿದ್ದಾರೆ ಎನ್ನುತ್ತಾರೆ ಅವರು.

ಸಿಗದ ಪೂರ್ಣ ಹಣ: ಶಕ್ತಿ ಯೋಜನೆ ಆರಂಭವಾದ ಮೇಲೆ ಕೆಎಸ್‌ಆರ್‌ಟಿಸಿ ಆದಾಯ ವೃದ್ಧಿಸಿದೆ. ಹಿಂದೆ ದಿನಕ್ಕೆ ₹80ರಿಂದ ₹85 ಲಕ್ಷ ಇದ್ದ ಆದಾಯ ಈಗ ₹1 ಕೋಟಿಗೆ ತಲುಪಿದೆ. ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಟಿಕೆಟ್ ಹಣ ಕೇಂದ್ರ ಕಚೇರಿಗೆ ಹೋಗಿ ಅಲ್ಲಿಂದ ವಿಭಾಗಕ್ಕೆ ವರ್ಗಾವಣೆಯಾಗುತ್ತದೆ. ದಾಖಲೆಯಲ್ಲಿ ಆದಾಯ ಹೆಚ್ಚಳವಾದರೂ, ವಾಸ್ತವದಲ್ಲಿ ಪೂರ್ಣ ಪ್ರಮಾಣದ ಹಣ ನಿಗಮಕ್ಕೆ ಸಿಗುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಜನರ ಪರದಾಟ: ಶಕ್ತಿ ಯೋಜನೆ ಜಾರಿಗೊಂಡ ಮೇಲೆ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಪ್ರತಿದಿನ ಸಂಜೆಯ ವೇಳೆ ಜ್ಯೋತಿ, ಕಂಕನಾಡಿ, ಪಂಪ್‌ವೆಲ್‌ ಮತ್ತಿತರ ಕಡೆಗಳಲ್ಲಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕಾಯುತ್ತ ನಿಂತಿರುವುದು ಕಾಣುತ್ತದೆ. ಆದರೆ, ಮಂಗಳೂರು ವಿಭಾಗವು ಬಸ್‌ಗಳ ಕೊರತೆಯಿಂದ ಹಿಂದೆ ಸ್ಥಗಿತಗೊಳಿಸಿದ್ದ ಮಾರ್ಗಗಳನ್ನು ಪುನರಾರಂಭಿಸಿಲ್ಲ. ನಿಗದಿತ ಮಿತಿಗಿಂತ ಹೆಚ್ಚು ಕಿ.ಮೀ ಓಡಿರುವ ಬಸ್‌ಗಳು ಕೂಡ ಸೇವೆಯಲ್ಲಿವೆ. ಸರ್ಕಾರಿ ಬಸ್‌ ಇಲ್ಲದ ಕಡೆ ಖಾಸಗಿ ಬಸ್‌ಗಳದ್ದೇ ಅಧಿಪತ್ಯವಾಗಿದ್ದು, ಜನರ ಸೇವೆಗಿಂತ ಅವುಗಳಿಗೆ ಆದಾಯವೇ ಮುಖ್ಯವಾಗಿದೆ. ಹೆಚ್ಚು ಆದಾಯ ಇಲ್ಲದ ಕಡೆಗಳಲ್ಲಿ ನಿಯಮಿತವಾಗಿ ಬಸ್‌ ಹೋಗದ ಕಾರಣ ಜನರು ಪರದಾಡುವಂತಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್.

ಸರ್ಕಾರದಿಂದ ಸಿಗುವ ಸಾರಿಗೆ ಸಂಸ್ಥೆ ಬಸ್‌ಗಳ ಸೇವೆ ಹೆಚ್ಚಿನ ಭಾಗಗಳಿಗೆ ಸಿಗುತ್ತಿಲ್ಲ. ಅಲ್ಲದೆ ಖಾಸಗಿ ಬಸ್‌ಗಳ ಅಸ್ಥಿರ ವೇಳಾಪಟ್ಟಿ, ಹೆಚ್ಚಿನ ದರದ ಕಾರಣಕ್ಕೆ ಈ ಭಾಗಕ್ಕೆ ಸರ್ಕಾರಿ ಬಸ್‌ಗಳ ಸೇವೆ ಅಗತ್ಯವಿದೆ ಎನ್ನುತ್ತಾರೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ರುಧೀರ್.

‘ನಿತ್ಯದ ಪ್ರಯಾಣದಿಂದ ಹೈರಾಣ’

ನಾನು ಒಂದು ವರ್ಷದಿಂದ ಪ್ರತಿದಿನ ಮಂಗಳೂರಿನಿಂದ ಮೂಡುಬಿದಿರೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ. ಮೂಡುಬಿದಿರೆಯಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚು ಇರುವ ಕಾರಣ, ಮಂಗಳೂರಿನಿಂದ ನಿತ್ಯ ಪ್ರಯಾಣಿಸುವವರ ಸಂಖ್ಯೆ ಅಧಿಕವಿರುತ್ತದೆ. ಮಂಗಳೂರು ದಾಟುವಷ್ಟರಲ್ಲೇ ಎಲ್ಲ ಸೀಟ್‌ಗಳು ಭರ್ತಿಯಾಗುತ್ತವೆ. ಮುಂದಿನ ಊರುಗಳಲ್ಲಿ ಬಸ್‌ ಹತ್ತುವವರಿಗೆ ಸೀಟ್ ಸಿಗುವುದಿರಲಿ, ಬಸ್ ಒಳಗೆ ತೂರಿಕೊಂಡರೆ ಸಾಕಾಗುತ್ತದೆ. ನಿತ್ಯದ ಪ್ರಯಾಣದಲ್ಲಿ ವಿದ್ಯಾರ್ಥಿಗಳು ಹೈರಾಣಾಗುತ್ತಾರೆ. ಸರ್ಕಾರಿ ಬಸ್ ಸೇವೆ ಇದ್ದರೆ ಅನುಕೂಲವಾಗಿತ್ತು - ಸುಜನ್ ಶೆಟ್ಟಿ, ವಿದ್ಯಾರ್ಥಿ

‘ಸಮಯಕ್ಕೆ ಕಾಲೇಜು ತಲುಪಲು ಕಷ್ಟ’

ಮಂಗಳೂರಿನಿಂದ ಬರುವ ಖಾಸಗಿ ಬಸ್‌ಗಳು ಸದಾ ಜನಜಂಗುಳಿಯಿಂದ ಕೂಡಿರುತ್ತವೆ. ಅಲ್ಲದೆ, ಟಿಕೆಟ್ ದರ ಕೂಡ ಹೆಚ್ಚು. ಕೆಲವೊಮ್ಮೆ ನಿಗದಿತ ಸ್ಥಳದಲ್ಲಿ ಬಸ್‌ ನಿಲ್ಲಿಸುವುದಿಲ್ಲ. ಇದರಿಂದ ತರಗತಿ ಸಮಯಕ್ಕೆ ಕಾಲೇಜು ತಲುಪಲು ಕಷ್ಟವಾಗುತ್ತದೆ. ಮೂಡುಬಿದಿರೆ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಶೀಘ್ರ ಪ್ರಾರಂಭಿಸಬೇಕು- ದ್ವಿತಿ, ಮೂಡುಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ

‘100 ಇ–ಬಸ್‌ ಸಿಗುವ ಸಾಧ್ಯತೆ’

ಪಿಎಂ ಇ–ಸೇವಾ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆ ಆಯ್ಕೆಯಾಗಿದ್ದು, ಈ ಯೋಜನೆಯಡಿ ಮಂಗಳೂರು ವಿಭಾಗಕ್ಕೆ 100 ಎಲೆಕ್ಟ್ರಿಕ್‌ ಬಸ್‌ಗಳು ಸಿಗುವ ಸಾಧ್ಯತೆಗಳಿವೆ. ಇದಕ್ಕಾಗಿ ಹೊಸ ಘಟಕಕ್ಕೆ (ಡಿಪೊ) ಜಾಗದ ಹುಡುಕಾಟ ನಡೆದಿದೆ. ಈಗಾಗಲೇ ಮಂಗಳೂರಿನಲ್ಲಿ ಮೂರು, ಉಡುಪಿ, ಕುಂದಾಪುರದಲ್ಲಿ ತಲಾ ಒಂದು ಡಿಪೊ ಇವೆ. ಪ್ರಸ್ತುತ ಇರುವ ಡಿಪೊಗಳು 80ರಿಂದ 90 ಶೆಡ್ಯೂಲ್ ಸಾಮರ್ಥ್ಯದವಾಗಿದ್ದು, 130 ಶೆಡ್ಯೂಲ್‌ಗಳ ನಿರ್ವಹಣೆ ಮಾಡಲಾಗುತ್ತಿದೆ. ಹೊಸ ಬಸ್‌ಗಳು ಬಂದರೆ, ಹೊಸ ಡಿಪೊ ನಿರ್ಮಾಣ ಮಾಡಬೇಕಾಗುತ್ತದೆ.‌- ರಾಜೇಶ್ ಶೆಟ್ಟಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು ವಿಭಾಗ

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ

ಮಂಜೂರು ಹುದ್ದೆ;1,718

ಭರ್ತಿ ಇರುವ ಹುದ್ದೆ;1,490

ಖಾಲಿ ಇರುವ ಹುದ್ದೆ;228

ಬಸ್‌ಗಳ ಪರವಾನಗಿ

ಕೆಎಸ್‌ಆರ್‌ಟಿಸಿ;74

ಸರ್ವಿಸ್ ಬಸ್;566

ಸಿಟಿ ಬಸ್;386

(ಆಧಾರ: ಆರ್‌ಟಿಒ ಕಚೇರಿ)

ಮಂಗಳೂರಿನ ಸ್ಟೇಟ್‌ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗೆ ಕಾಯುತ್ತಿರುವ ಮಹಿಳೆಯರು ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಸ್ಟೇಟ್‌ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗೆ ಕಾಯುತ್ತಿರುವ ಮಹಿಳೆಯರು ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ದ್ವಿತಿ ವಿದ್ಯಾರ್ಥಿನಿ
ದ್ವಿತಿ ವಿದ್ಯಾರ್ಥಿನಿ
ಸುಜನ್ ಶೆಟ್ಟಿ
ಸುಜನ್ ಶೆಟ್ಟಿ

Cut-off box - ‘ಸಮಯಕ್ಕೆ ಕಾಲೇಜು ತಲುಪಲು ಕಷ್ಟ’ ಮಂಗಳೂರಿನಿಂದ ಬರುವ ಖಾಸಗಿ ಬಸ್‌ಗಳು ಸದಾ ಜನಜಂಗುಳಿಯಿಂದ ತುಂಬಿರುತ್ತವೆ. ಅಲ್ಲದೆ ಟಿಕೆಟ್ ದರ ಕೂಡ ಹೆಚ್ಚು. ಕೆಲವೊಮ್ಮೆ ನಿಗದಿತ ಸ್ಥಳದಲ್ಲಿ ಬಸ್‌ ನಿಲ್ಲಿಸುವುದಿಲ್ಲ. ಇದರಿಂದ ತರಗತಿ ಸಮಯಕ್ಕೆ ಕಾಲೇಜು ತಲುಪಲು ಕಷ್ಟವಾಗುತ್ತದೆ. ಮೂಡುಬಿದಿರೆ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಶೀಘ್ರ ಪ್ರಾರಂಭಿಸಬೇಕು. ದ್ವಿತಿ ಮೂಡುಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ

Cut-off box - ‘ನಿತ್ಯದ ಪ್ರಯಾಣದಿಂದ ಹೈರಾಣ’ ನಾನು ಒಂದು ವರ್ಷದಿಂದ ಪ್ರತಿದಿನ ಮಂಗಳೂರಿನಿಂದ ಮೂಡುಬಿದಿರೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ. ಮೂಡುಬಿದಿರೆಯಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚು ಇರುವ ಕಾರಣ ಮಂಗಳೂರಿನಿಂದ ನಿತ್ಯ ಪ್ರಯಾಣಿಸುವವರ ಸಂಖ್ಯೆ ಅಧಿಕವಿರುತ್ತದೆ. ಮಂಗಳೂರು ದಾಟುವಷ್ಟರಲ್ಲೇ ಎಲ್ಲ ಸೀಟ್‌ಗಳು ಭರ್ತಿಯಾಗುತ್ತವೆ. ಮುಂದಿನ ಊರುಗಳಲ್ಲಿ ಬಸ್‌ ಹತ್ತುವವರಿಗೆ ಸೀಟ್ ಸಿಗುವುದಿರಲಿ ಬಸ್ ಒಳಗೆ ತೂರಿಕೊಂಡರೆ ಸಾಕಾಗುತ್ತದೆ. ನಿತ್ಯದ ಪ್ರಯಾಣದಲ್ಲಿ ವಿದ್ಯಾರ್ಥಿಗಳು ಹೈರಾಣಾಗುತ್ತಾರೆ. ಸರ್ಕಾರಿ ಬಸ್ ಸೇವೆ ಇದ್ದರೆ ಅನುಕೂಲವಾಗಿತ್ತು. ಸುಜನ್ ಶೆಟ್ಟಿ ವಿದ್ಯಾರ್ಥಿ

Cut-off box - ‘100 ಇ–ಬಸ್‌ ಸಿಗುವ ಸಾಧ್ಯತೆ’ ಪಿಎಂ ಇ–ಸೇವಾ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆ ಆಯ್ಕೆಯಾಗಿದ್ದು ಈ ಯೋಜನೆಯಡಿ ಮಂಗಳೂರು ವಿಭಾಗಕ್ಕೆ 100 ಎಲೆಕ್ಟ್ರಿಕ್‌ ಬಸ್‌ಗಳು ಸಿಗುವ ಸಾಧ್ಯತೆಗಳಿವೆ. ಇದಕ್ಕಾಗಿ ಹೊಸ ಘಟಕಕ್ಕೆ (ಡಿಪೊ) ಜಾಗದ ಹುಡುಕಾಟ ನಡೆದಿದೆ. ಈಗಾಗಲೇ ಮಂಗಳೂರಿನಲ್ಲಿ ಮೂರು ಉಡುಪಿ ಕುಂದಾಪುರದಲ್ಲಿ ತಲಾ ಒಂದು ಡಿಪೊ ಇವೆ. ಪ್ರಸ್ತುತ ಇರುವ ಡಿಪೊಗಳು 80ರಿಂದ 90 ಶೆಡ್ಯೂಲ್ ಸಾಮರ್ಥ್ಯದವಾಗಿದ್ದು 130 ಶೆಡ್ಯೂಲ್‌ಗಳ ನಿರ್ವಹಣೆ ಮಾಡಲಾಗುತ್ತಿದೆ. ಹೊಸ ಬಸ್‌ಗಳು ಬಂದರೆ ಹೊಸ ಡಿಪೊ ನಿರ್ಮಾಣ ಮಾಡಬೇಕಾಗುತ್ತದೆ.‌‌ ರಾಜೇಶ್ ಶೆಟ್ಟಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

Cut-off box - ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಮಂಜೂರು ಹುದ್ದೆ;1718 ಭರ್ತಿ ಇರುವ ಹುದ್ದೆ;1490 ಖಾಲಿ ಇರುವ ಹುದ್ದೆ;228

Cut-off box - ಬಸ್‌ಗಳ ಪರವಾನಗಿ ಕೆಎಸ್‌ಆರ್‌ಟಿಸಿ;74 ಸರ್ವಿಸ್ ಬಸ್;566 ಸಿಟಿ ಬಸ್;386 (ಆಧಾರ: ಆರ್‌ಟಿಒ ಕಚೇರಿ)

Cut-off box - ‘ಹೊಸ ಪರವಾನಗಿ; ಅವಕಾಶ ಇಲ್ಲ’ ಕೆಎಸ್ಆರ್‌ಟಿಸಿ ಸಲ್ಲಿಸಿರುವ ಅರ್ಜಿಗಳಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರದ ಮಿತಿಯಲ್ಲಿ ಪರವಾನಗಿ ನೀಡಲಾಗಿದೆ. 2022ರಲ್ಲಿ ನಾಲ್ಕು ಮಾರ್ಗಗಳಿಗೆ ಕೆಎಸ್ಆರ್‌ಟಿಸಿಗೆ ಪರವಾನಗಿ ದೊರೆತಿದೆ. ನಗರ ವ್ಯಾಪ್ತಿಯಲ್ಲಿ ಹೊಸ ಪರ್ಮಿಟ್ ನೀಡಲು ಜಿಲ್ಲಾ ದಂಡಾಧಿಕಾರಿಗಳ ನೋಟಿಫಿಕೇಷನ್ ಪ್ರಕಾರ ಅವಕಾಶ ಇಲ್ಲ ಎಂಬುದು ಆರ್‌ಟಿಒ ಕಚೇರಿ ಅಧಿಕಾರಿಗಳು ನೀಡುವ ಸಮಜಾಯಿಷಿ.

Cut-off box - ‘ಸ್ಟೇಟ್‌ ಬ್ಯಾಂಕ್ ಮಾರ್ಗವೇ ಯಾಕೆ?’ ‘ಕೆಎಸ್‌ಆರ್‌ಟಿಸಿ ಪರವಾನಗಿ ಕೇಳಿ ಅರ್ಜಿ ಸಲ್ಲಿಸಿರುವ ಮಾರ್ಗಗಳಲ್ಲಿ ಹೆಚ್ಚಿನವು ಸ್ಟೇಟ್‌ ಬ್ಯಾಂಕ್‌ನಿಂದ (ಸ್ಟಾರ್ಟಿಂಗ್ ಪಾಯಿಂಟ್‌) ವಿವಿಧ ಪ್ರದೇಶಗಳಿಗೆ ಹೊರಡುವ ಬಸ್‌ಗಳಾಗಿವೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಬಸ್‌ಗಳನ್ನು ಪ್ರಾರಂಭಿಸಲು ಈಗಾಗಲೇ ಇರುವ ಪರವಾನಗಿ ಸಾಕಾಗುತ್ತದೆ. ಆದರೂ ನಗರ ವ್ಯಾಪ್ತಿಯಲ್ಲಿ ಹೊಸ ಪರವಾನಗಿ ನೀಡಲು ಅನುಮತಿ ಇಲ್ಲದ ಸ್ಟೇಟ್‌ ಬ್ಯಾಂಕ್‌ನಿಂದ ಹೊರಡುವ ಮಾರ್ಗ ರೂಪಿಸಿದ್ದು ಯಾಕೆ ಎಂಬ ಅನುಮಾನ ಮೂಡುತ್ತದೆ’ ಎಂದು ನಿತ್ಯ ಸಾರಿಗೆ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರೊಬ್ಬರು ಪ್ರಶ್ನಿಸುತ್ತಾರೆ. ಸ್ಟೇಟ್‌ ಬ್ಯಾಂಕ್‌ನಿಂದ ಹೊರಡುವ ಬಸ್‌ಗಳಿಗೆ ಜನರ ಬೇಡಿಕೆ ಹೆಚ್ಚು ಎಂಬುದು ನಿಜವಾದರೂ ಕೆಎಸ್‌ಆರ್‌ಟಿಸಿ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಿ ಬಸ್‌ ಸಂಚಾರ ಪ್ರಾರಂಭಿಸಿದರೆ ಜನರು ಹೊಸ ವ್ಯವಸ್ಥೆಗೆ ಕ್ರಮೇಣ ಹೊಂದಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT