ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಡಿಗೋಶನ್: ಹೊಸ ಆಮ್ಲಜನಕ ಘಟಕ

ಕ್ರೆಡೈ ಪ್ರಾಯೋಜಕತ್ವದಲ್ಲಿ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ
Last Updated 18 ಸೆಪ್ಟೆಂಬರ್ 2021, 3:07 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ಎರಡು ಅಲೆಗಳನ್ನು ಸಮರ್ಥವಾಗಿ ಎದುರಿಸಿರುವ ನಗರದ ಲೇಡಿಗೋಶನ್ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭಾವ್ಯ ಮೂರನೇ ಅಲೆ ಎದುರಿಸಲು ಹೆಚ್ಚುವರಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಜತೆಗೆ ಹೊಸ ಆಮ್ಲಜನಕ ಘಟಕ ನಿರ್ಮಾಣ ಅಂತಿಮ ಹಂತದಲ್ಲಿದೆ.

ಕ್ರೆಡೈ ನೆರವಿನಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಘಟಕವು ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿದೆ. ಜಿಲ್ಲಾಡಳಿತದ ಮುತುವರ್ಜಿಯಿಂದ ಇದಕ್ಕೆ ಅಗತ್ಯ ಮೂಲ ಸೌಕರ್ಯಗಳು ದೊರೆತಿವೆ. ಈಗಾಗಲೇ ಆಸ್ಪತ್ರೆಯಲ್ಲಿ ಸೆಂಟ್ರಲ್ ಆಮ್ಲಜನಕ ಘಟಕ ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ ಹೊಸ ಘಟಕ ದೊರೆತಿರುವುದರಿಂದ ಲೇಡಿಗೋಶನ್ ಆಸ್ಪತ್ರೆಯು ಆಮ್ಲಜನಕ ಸ್ವಾವಲಂಬನೆಯತ್ತ ಹೆಜ್ಜೆಯಿಟ್ಟಿದೆ.

‘ಈ ಹಿಂದೆ ಆಮ್ಲಜನಕ ಬಲ್ಕ್ ಸಿಲಿಂಡರ್ ಬಳಕೆ ಮಾಡುತ್ತಿದ್ದೆವು. ಈಗ ಡ್ಯುರೊ ಸಿಲಿಂಡರ್ ಬಳಕೆ ಮಾಡುತ್ತಿದ್ದೇವೆ. ಒಂದು ಡ್ಯುರೊ ಸಿಲಿಂಡರ್ 18 ಬಲ್ಕ್ ಸಿಲಿಂಡರ್‌ಗೆ ಸಮನಾಗಿದೆ. ಒಂದು ಡ್ಯುರೊ ಸಿಲಿಂಡರ್ 150 ಕ್ಯೂಬಿಕ್ ಮಿಲಿ ಮೀಟರ್ ಸಾಮರ್ಥ್ಯ ಹೊಂದಿರುತ್ತದೆ. ಕೋವಿಡ್ ಗರಿಷ್ಠ ಮಟ್ಟದಲ್ಲಿದ್ದಾಗ ಸಹ ಆಸ್ಪತ್ರೆಯ ಬೇಡಿಕೆ 300 ಕ್ಯೂಬಿಕ್ ಮಿಲಿ ಮೀಟರ್‌ಗಿಂತ ಕಡಿಮೆ ಇತ್ತು. ವೈದ್ಯಕೀಯ ಆಮ್ಲಜನಕ ಘಟಕಕ್ಕೆ ಪೈಪ್‌ಲೈನ್ ಜೋಡಣೆಯಾಗಿರುವ ಕಾರಣ, ಎಲ್ಲ ರೀತಿಯ ವೈದ್ಯಕೀಯ ತುರ್ತು ಸಂದರ್ಭಗಳಿಗೆ ಬಳಕೆ ಮಾಡಿಕೊಳ್ಳಬಹುದು’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ತಿಳಿಸಿದರು.

‘ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ವೇಳೆ ಗರ್ಭಿಣಿಯರು, ಬಾಣಂತಿಯರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದವು. ಆದರೆ, ಕೆಲವರಿಗೆ ಮಾತ್ರ ಆಮ್ಲಜನಕ ನೀಡಬೇಕಾಗ ಅಗತ್ಯ ಬಂತು’ ಎಂದು ವಿವರಿಸಿದರು.

‘ಕೋವಿಡ್ ವಾರ್ಡ್‌ನಲ್ಲಿ 22 ಆಮ್ಲಜನಕ ಸಹಿತ ಹಾಸಿಗೆಗಳು ಇವೆ. ಹೆಚ್ಚುವರಿಯಾಗಿ 14 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ನವಜಾತ ಶಿಶುಗಳಿಗೆಂದು ಎರಡು ಐಸಿಯು ಹಾಸಿಗೆ ಮೀಸಲಿಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಕೋವಿಡ್ ಸಂದರ್ಭದಲ್ಲಿ ವೈಯಕ್ತಿಕ ಅಂತರ ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಲೇಡಿಗೋಶನ್ ಆಸ್ಪತ್ರೆಯಲ್ಲಿ ‘ಅನೌನ್ಸ್‌ಮೆಂಟ್ ಸಿಸ್ಟಮ್’ ಅಳವಡಿಸಲಾಗಿದೆ. ಹೊರರೋಗಿ ವಿಭಾಗದಲ್ಲಿ ಆಗುವ ಜನಜಂಗುಳಿ ತಪ್ಪಿಸಲು ಇದರಿಂದ ಅನುಕೂಲವಾಗಲಿದೆ. ಮೈಕ್ ಮೂಲಕ ಮಾಹಿತಿ ನೀಡಲಾಗುತ್ತದೆ. ನಾಲ್ಕು ಕಡೆಗಳಲ್ಲಿ ಸ್ಪೀಕರ್ ಅಳವಡಿಸಲಾಗಿದೆ ಎಂದು ಡಾ. ದುರ್ಗಾಪ್ರಸಾದ್ ತಿಳಿಸಿದರು.

‘ಪ್ರಸ್ತುತ ಆರು ಪ್ರಕರಣ’

ಕೋವಿಡ್ ಮೊದಲ ಅಲೆಯಲ್ಲಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗರ್ಭಿಣಿ– ಬಾಣಂತಿಯರು ಸೇರಿ ಒಟ್ಟು 131 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದವು. ಅವುಗಳಲ್ಲಿ 119 ಹೆರಿಗೆ ಪ್ರಕರಣಗಳಾಗಿದ್ದು, 48 ಮಹಿಳೆಯರಿಗೆ ಸಹಜ ಹೆರಿಗೆ, 71 ಜನರಿಗೆ ಸಿ–ಸೆಕ್ಷನ್ ಹೆರಿಗೆಯಾಗಿದೆ. ಐದು ನವಜಾತ ಶಿಶುಗಳಿಗೆ ಕೋವಿಡ್ ತಗುಲಿತ್ತು. ಎಲ್ಲರೂ ಗುಣಮುಖರಾಗಿದ್ದರು.

ಎರಡನೇ ಅಲೆಯಲ್ಲಿ 242 ಜನರಿಗೆ ಕೋವಿಡ್ ತಗುಲಿದ್ದು, ಅವರಲ್ಲಿ 140 ಹೆರಿಗೆ ಪ್ರಕರಣಗಳಾಗಿವೆ. 55 ಮಹಿಳೆಯರಿಗೆ ಸಹಜ ಹೆರಿಗೆ ಹಾಗೂ 85 ಮಹಿಳೆಯರಿಗೆ ಸಿ–ಸೆಕ್ಷನ್ ಹೆರಿಗೆ ಮಾಡಿಸಲಾಗಿದೆ. ಎಂಟು ನವಜಾತ ಶಿಶುಗಳಿಗೆ ಕೋವಿಡ್ ತಗುಲಿತ್ತು. ಒಂದು ಮಗು ಮಾತ್ರ ಮೃತಪಟ್ಟಿದ್ದು, ಆ ಮಗು ಹುಟ್ಟುವಾಗಲೇ 600 ಗ್ರಾಂ ಇದ್ದ ಕಾರಣ, ಇದು ಕೋವಿಡ್‌ನಿಂದ ಆಗಿರುವ ಸಾವು ಎನ್ನಲಾಗದು. ಪ್ರಸ್ತುತ ಆರು ಕೋವಿಡ್ ಪಾಸಿಟಿವ್ ಪ್ರಕರಣಗಳು ಇವೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT