ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೊಲೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ

Last Updated 17 ಆಗಸ್ಟ್ 2021, 15:28 IST
ಅಕ್ಷರ ಗಾತ್ರ

ಮಂಗಳೂರು: ಪ್ರಿಯಕರನೊಂದಿಗೆ ಪತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಪ್ರಕಟಿಸಿದೆ.

ಮೂಡುಬಿದಿರೆ ಕುಕ್ಕುದಕಟ್ಟೆ ಮೂಡುಕೊಣಾಜೆ ಗ್ರಾಮದ ಅಶ್ವಿನಿ ಯಾನೆ ಮಮತಾ ಹಾಗೂ ಅದೇ ಗ್ರಾಮದ ಆನಂದ ಮೇರ ಶಿಕ್ಷೆಗೊಳಗಾದವರು. ಜಯರಾಜ್ ಕೊಲೆಯಾದವರು.

ಪ್ರಕರಣ ವಿವರ: ಬಂಟ್ವಾಳ ತಾಲ್ಲೂಕಿನ ಕೆದಿಲ ಗ್ರಾಮದ ಪೇರಮೊಗರಿನ ಜಯರಾಜ್ ಮಂಗಳೂರಿನಲ್ಲಿ ಉದ್ಯೋಗದಲ್ಲಿ ಇದ್ದರು. 2014ರಲ್ಲಿ ಅಶ್ವಿನಿ ಜೊತೆಗೆ ಜಯರಾಜ್ ಅವರ ವಿವಾಹವಾಗಿತ್ತು. ಮೂಡುಬಿದಿರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 2015ರಲ್ಲಿ ಅಶ್ವಿನಿ ಗರ್ಭವತಿಯಾಗಿ ತಾಯಿ ಮನೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಅಶ್ವಿನಿ ಅದೇ ಊರಿನ ಹಳೆ ಪರಿಚಯದ ಆನಂದ ಮೇರ ಜೊತೆ ಸಂಬಂಧ ಇದ್ದ ವಿಷಯ ತಿಳಿದು, ಜಯರಾಜ್ ಮತ್ತು ಅಶ್ವಿನಿ ನಡುವೆ ವೈಮನಸ್ಸು ಉಂಟಾಗಿತ್ತು. ತಾಯಿ ಮನೆಯಲ್ಲಿದ್ದ ಅಶ್ವಿನಿ, ಸಂಚು ರೂಪಿಸಿ, 2016ರ ಸೆಪ್ಟಂಬರ್ 13ರಂದು ಪತಿ ಜಯರಾಜ್‌ನನ್ನು ಮನೆಗೆ ಕರೆಯಿಸಿಕೊಂಡು, ಆನಂದ ಮೇರನಿಗೆ ಮಾಹಿತಿ ನೀಡಿದ್ದಳು.

ಅಂದು ಮನೆಗೆ ಬಂದ ಜಯರಾಜ್ ಜತೆ ಆಕೆ ಹಣದ ಬಗ್ಗೆ ವಿಚಾರಿಸುತ್ತಿರುವಾಗ, ಆನಂದ ಮೇರ ಕಬ್ಬಿಣದ ರಾಡ್‌ನಿಂದ ಜಯರಾಜ್‌ ತಲೆಗೆ ಹೊಡೆದು, ಕೊಲೆ ಮಾಡಿದ್ದ. ನಂತರ ಜಯರಾಜ್‌ನ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಮನೆಯ ಹಿಂಬದಿಯಲ್ಲಿರುವ ಶಾಲೆಯ ಕಾಂಪೌಂಡ್‌ ಬಳಿ ಅಡಗಿಸಿ ಇಡಲಾಗಿತ್ತು.

ಆರೋಪಿಗಳ ಫೋನ್‌ ಕರೆಯಿಂದ ಅನುಮಾನಗೊಂಡ ಜಯರಾಜ್ ಸಹೋದರ ಗಿರೀಶ್ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂಡುಬಿದಿರೆ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ, ಆನಂದ ಮೇರ ಮತ್ತು ಅಶ್ವಿನಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹ 5,000 ದಂಡ, ದಂಡದ ಹಣ ಪಾವತಿಸಲು ತಪ್ಪಿದರೆ ಜೈಲು ಶಿಕ್ಷೆ, ಸಾಕ್ಷ್ಯನಾಶ ಪ್ರಕರಣಕ್ಕೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT