ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯೂಸ್ಟಾರ್ ಮಂಗಳೂರು ಫೈನಲ್‌ಗೆ

ಮಂಗಳೂರು ಪ್ರೀಮಿಯರ್ ಕಬಡ್ಡಿ ಲೀಗ್‌ 2ನೇ ಆವೃತ್ತಿ: ಲೈಫ್‌ಲೈನ್ ಫಾಲ್ಕನ್‌ಗೆ ಸೋಲು
Published : 1 ಸೆಪ್ಟೆಂಬರ್ 2024, 16:31 IST
Last Updated : 1 ಸೆಪ್ಟೆಂಬರ್ 2024, 16:31 IST
ಫಾಲೋ ಮಾಡಿ
Comments

ಮಂಗಳೂರು: ನ್ಯೂ ಸ್ಟಾರ್ ಮಂಗಳೂರು ತಂಡ ಇಲ್ಲಿ ನಡೆದ ಚೆಫ್‌ ಟಾಕ್‌ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್‌ನ ಫೈನಲ್ ಪ್ರವೇಶಿಸಿತು. ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಟೂರ್ನಿಯಲ್ಲಿ ಭಾನುವಾರ ಸಂಜೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂ ಸ್ಟಾರ್ 57–30ರಲ್ಲಿ ಲೈಫ್‌ಲೈನ್ ಫಾಲ್ಕನ್‌ ಎದುರು ಜಯ ಗಳಿಸಿತು.

ಎರಡನೇ ದಿನದ ಲೀಗ್ ಹಂತದ ಮೊದಲ ಪಂದ್ಯ ರೋಚಕವಾಗಿತ್ತು. ಹಣಾಹಣಿಯಲ್ಲಿ ನ್ಯೂ ಸ್ಟಾರ್‌ ಮಂಗಳೂರು ತಂಡ ಮಂಗಳೂರು ಯುನೈಟೆಡ್ ವಿರುದ್ಧ 24–23ರಲ್ಲಿ ಜಯ ಸಾಧಿಸಿತು. ಪ್ರಥಮಾರ್ಧದಲ್ಲಿ ನ್ಯೂಸ್ಟಾರ್‌ 15–8ರ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಎಚ್ಚರಿಕೆಯ ಆಟವಾಡಿದ ಯುನೈಟೆಡ್ ಪಾಯಿಂಟ್‌ಗಳನ್ನು ಗಳಿಸುತ್ತ ಪಂದ್ಯಕ್ಕೆ ರೋಮಾಂಚಕ ಸ್ಪರ್ಶ ನೀಡಿತು. ಕೊನೆಯ ಎರಡು ನಿಮಿಷ ಇರುವಾಗ ಎದುರಾಳಿ ತಂಡವನ್ನು ಆಲ್‌ ಔಟ್ ಮಾಡಿ ಹಿನ್ನಡೆಯನ್ನು 22–23ಕ್ಕೆ ಕುಗ್ಗಿಸಿಕೊಂಡಿತು. ಕೊನೆಗೂ ಸೋಲಿನಿಂದ ತಪ್ಪಿಸಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಟೀಮ್ ಬಾವಾವನ್ನು ಲೈಫ್‌ಲೈನ್ ಫಾಲ್ಕನ್ ತಂಡ 45–42ರಲ್ಲಿ ಮಣಿಸಿತು. ಆರಂಭದಲ್ಲಿ ಟೀಮ್ ಬಾವಾ ಸುಲಭವಾಗಿ ಪಾಯಿಂಟ್‌ಗಳನ್ನು ಗಳಿಸಿದರೂ ನಂತರ ಫಾಲ್ಕನ್ ಪಾರುಪತ್ಯ ಸ್ಥಾಪಿಸಿ 19–16ರ ಮುನ್ನಡೆಯೊದಿಗೆ ವಿರಾಮಕ್ಕೆ ತೆರಳಿತು. ದ್ವಿತೀಯಾರ್ಧದ ಆರಂಭ ಕುತೂಹಲದಿಂದ ಕೂಡಿತ್ತು. ತಿರುಗೇಟು ನೀಡಿದ ಬಾವಾ ತಂಡ ಹಿನ್ನಡೆಯನ್ನು 19–20ಕ್ಕೆ ಇಳಿಸಿತು. ನಂತರ ಎದುರಾಳಿಗಳ ಅಂಗಣ ಖಾಲಿ ಮಾಡಿ 23–22ರ ಮುನ್ನಡೆಯತ್ತ ಸಾಗಿತು. ಆದರೆ ಶ್ರವಣ್ ಇರಾ ಅವರ ಅಮೋಘ ದಾಳಿಯ ಮೂಲಕ 3 ಪಾಯಿಂಟ್ ಗಳಿಸಿದ ಫಾಲ್ಕನ್ ಮುನ್ನಡೆ ಗಳಿಸಿತು.

ನಂತರ ಪಂದ್ಯ 25–25, 26–26 ಮತ್ತು 28–28ರಲ್ಲಿ ಸಮ ಆಯಿತು. ಆ ಮೇಲೆ ಒಮ್ಮೆ ಟೀಮ್ ಬಾವಾ, ಮತ್ತೊಮ್ಮೆ ಫಾಲ್ಕನ್ ಮೇಲುಗೈ ಸಾಧಿಸುತ್ತ ಸಾಗಿತು. ನಾಲ್ಕು ನಿಮಿಷಗಳ ಅವಧಿ ಬಾಕಿ ಇದ್ದಾಗ ಪಂದ್ಯ ಮೊತ್ತೊಮ್ಮೆ ಸಮ (33–33) ಆಯಿತು. ರೋಚಕ ಹೋರಾಟದ ಕೊನೆಯಲ್ಲಿ ಫಾಲ್ಕನ್ ಗೆಲುವು ತನ್ನದಾಗಿಸಿಕೊಂಡಿತು. ಅಸ್ತ್ರ ವಿರುದ್ಧ 47–26ರಲ್ಲಿ ಕೆಟಿಎನ್‌ ಜಯ ಗಳಿಸಿತು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟೀಮ್ ಪಿ.ಕೆ 29–20ರಲ್ಲಿ ಯು.ಕುಂಜತ್ತೂರು ಎದುರು ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT