ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಲೋಕಕ್ಕೆ ಕಾರಂತರ ಕೊಡುಗೆ ಅಪಾರ

‘ಬಾಲವನ’ದಲ್ಲಿ ಕವಿಗೋಷ್ಠಿ, ಕಾರಂತರ ಸಾಹಿತ್ಯ ಲೋಕ ಪರಿಚಯದಲ್ಲಿ ಪ್ರೊ. ಅರ್ತಿಕಜೆ
Last Updated 12 ಫೆಬ್ರುವರಿ 2020, 15:17 IST
ಅಕ್ಷರ ಗಾತ್ರ

ಪುತ್ತೂರು: ‘ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆ, ವಾಸ್ತುಕಲೆ ಸೇರಿದಂತೆ ಗೀತನಾಟಕ, ಯಕ್ಷಗಾನ ಗ್ರಂಥ, ಕಥೆ, ಕಾದಂಬರಿ, ಹರಟೆ, ಅನುಭವ ಕಥನ ಹೀಗೆ ಹಲವು ಪ್ರಾಕಾರಗಳಲ್ಲಿ ಸಾಹಿತ್ಯ ರಚನೆಮಾಡಿ. ಕನ್ನಡ ಲೋಕಕ್ಕೆ ಶಿವರಾಮ ಕಾರಂತರು ಅಪಾರ ಕೊಡುಗೆಗಳನ್ನು ನೀಡಿದ್ದಾರೆ’ ಎಂದು ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಹೇಳಿದರು.

ಪರ್ಲಡ್ಕದಲ್ಲಿರುವ ಶಿವರಾಮ ಕಾರಂತ ಬಾಲವನದಲ್ಲಿ ಬುಧವಾರ ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿ, ಉಪವಿಭಾಗಾಧಿಕಾರಿ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ನಡೆದ `ಸೃಜನಾತ್ಮಕ ಬರವಣಿಗೆ, ಕವಿಗೋಷ್ಠಿ ಹಾಗೂ ಕಾರಂತರ ಸಾಹಿತ್ಯ ಲೋಕ ಪರಿಚಯ' ಕಾರ್ಯಕ್ರಮದಲ್ಲಿ ಅವರು ಕಾರಂತರ ಸಾಹಿತ್ಯ ಲೋಕದ ಬಗ್ಗೆ ಉಪನ್ಯಾಸ ನೀಡಿದರು.

ಮಕ್ಕಳ ಶಿಕ್ಷಣ ಗೋಡೆಮಧ್ಯದಿಂದ ಹೊರ ಬರಬೇಕು ಎಂಬ ದೃಷ್ಟಿಯನ್ನು ಹೊಂದಿದ್ದ ಕಾರಂತರು ‘ಮಕ್ಕಳ ಕೂಟ’ ರಚಿಸಿ ಚಟುವಟಿಕೆ ಹಮ್ಮಿಕೊಂಡಿದ್ದರು. 1ನೇ ತರಗತಿಯಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ `ಸಿರಿಗನ್ನಡ ಪಠ್ಯ ಮಾಲೆ' ಎಂಬ ಪುಸ್ತಕ ರಚಿಸಿ ಕೊಟ್ಟಿದ್ದರು. ಬಾಲ ಪ್ರಪಂಚ, ವಿಜ್ಞಾನ ಪ್ರಪಂಚದಂತಹ ಮಕ್ಕಳ ಜ್ಞಾನ ಹೆಚ್ಚಿಸುವ ಪುಸ್ತಕ ರಚಿಸಿದ್ದರು. ಮುದ್ರಣಾಲಯ, ಪ್ರಕಾಶನಕ್ಕೂ ಕೈ ಹಾಕಿದ್ದ ಕಾರಂತರು ‘ಹರ್ಷ ಮುದ್ರಣಾಲಯ’ ಆರಂಭಿಸಿದ್ದರು ಎಂದರು.

ಪತ್ರಿಕಾರಂಗ, ಸಿನಿಮಾರಂಗ, ರಾಜಕೀಯರಂಗ, ಪರಿಸರ ಪರ ಹೋರಾಟ, ಸ್ವಚ್ಛತಾ ಜಾಗೃತಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಕಾರಂತರು 1951ರಲ್ಲಿ ಪುತ್ತೂರಿನಲ್ಲಿ ಕರ್ನಾಟಕ ಸಂಘವನ್ನು ಸ್ಥಾಪಿಸಿ ಅದರ ಮೂಲಕ ಹಲವು ಪುಸ್ತಕಗಳ ಪ್ರಕಾಶನದ ವ್ಯವಸ್ಥೆ ಮಾಡಿದ್ದರು. ಪುತ್ತೂರಿನ ನೆಲ್ಲಿಕಟ್ಟೆ ಶಾಲೆಯ ವಠಾರದಲ್ಲಿ ದಸರಾ ನಾಡಹಬ್ಬ ನಡೆಸುತ್ತಿದ್ದರು. ದಲಿತರು ಮತ್ತು ಬಡವರಿಗಾಗಿ ವಯಸ್ಕರ ಶಿಕ್ಷಣವನ್ನು ಆರಂಭಿಸಿದ್ದರು ಎಂದು ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್ ಉದ್ಘಾಟಿಸಿ ಮಾತನಾಡಿ, ‘ಬಾಲವನದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಜನರ ಭಾಗವಹಿಸುವಿಕೆಯಿಂದ ಅದು ಯಶಸ್ವಿಯಾಗಲು ಸಾಧ್ಯ. ಕಾರಂತರು ಪುತ್ತೂರಿಗೆ ಬಂದ ಆರಂಭದಲ್ಲಿ ಸುಳ್ಯದ ಹಳೆಗೇಟು ಎಂಬಲ್ಲಿರುವ ನನ್ನ ಅಜ್ಜನ ಮನೆಯಲ್ಲಿ ಉಳಿದುಕೊಂಡಿದ್ದರು. ಹೀಗಾಗಿ ನಮ್ಮ ಕುಟುಂಬಕ್ಕೂ ಕಾರಂತರಿಗೂ ನಂಟು ಇದೆ’ ಎಂದು ಅವರು ಹೇಳಿದರು.

ಪ್ರಾಂಶುಪಾಲ ಝೇವಿಯರ್ ಡಿಸೋಜ ಮಾತನಾಡಿದರು. ಕವಿ ಸುಬ್ರಾಯ ಚೊಕ್ಕಾಡಿ ಉಪಸ್ಥಿತರಿದ್ದರು. ‘ಬಾಲವನ’ದ ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ ಬಂಬಿಲ ಸ್ವಾಗತಿಸಿದರು. ‘ರಂಗ ಮಡಿಲು’ ಸದಸ್ಯೆ ಲವಿನಾ ಡಿಸೋಜ ವಂದಿಸಿದರು. ಕಡಲೂರಿನ ಲೇಖಕರ ಸಂಘದ ಕಾರ್ಯದರ್ಶಿ ಸಫ್ವಾನ್ ಸವಣೂರು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಡುವೆ `ರಂಗಮಡಿಲು' ತಂಡದಿಂದ ಗೀತಾಗಾಯನ ನಡೆಯಿತು. ಸುಬ್ರಾಯ ಚೊಕ್ಕಾಡಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT