ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಡಿಲಿಕೆ: ಮೊದಲ ದಿನವೇ ವಾಹನಗಳ ಅಬ್ಬರ

ವ್ಯಾಪಾರ, ವಹಿವಾಟು ಚುರುಕು
Last Updated 4 ಮೇ 2020, 16:22 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 41 ದಿನಗಳ ಬಳಿಕ ಸೋಮವಾರದಿಂದ ಲಾಕ್‌ ಡೌನ್‌ ಸಡಿಲಿಕೆಯಾಗಿದ್ದು, ಹಗಲಿನ ಅವಧಿಯಲ್ಲಿ ಆಯ್ದ ಕೆಲವು ಚಟುವಟಿಕೆಗಳಿಗೆ ಅವಕಾಶ ದೊರಕಿತು. ಮೊದಲ ದಿನವೇ ಭಾರಿ ಸಂಖ್ಯೆಯ ವಾಹನಗಳು ರಸ್ತೆಗಿಳಿದಿದ್ದು, ಸಂಚಾರದ ಅಬ್ಬರ ಜೋರಾಗಿತ್ತು.

ಮಾರ್ಚ್‌ 24ರಿಂದ ಜಿಲ್ಲೆಯಲ್ಲಿ ಲಾಕ್‌ ಡೌನ್‌ ಜಾರಿಯಲ್ಲಿದೆ. ಈ ಅವಧಿಯಲ್ಲಿ ಮಧ್ಯಾಹ್ನದವರೆಗೆ ಅಗತ್ಯ ವಸ್ತುಗಳ ಖರೀದಿಯ ಹೊರತಾಗಿ ಯಾವುದೇ ಚಟುವಟಿಕೆಗೆ ಅವಕಾಶವಿರಲಿಲ್ಲ. ಸೋಮವಾರದಿಂದ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಆಯ್ದ ಕೆಲವು ವಹಿವಾಟುಗಳಿಗೆ ಅನುಮತಿ ದೊರಕಿದೆ. ದಿನಸಿ ಅಂಗಡಿಗಳು, ಕೆಲವು ಸಣ್ಣ ಮಳಿಗೆಗಳು, ಹಾರ್ಡ್‌ವೇರ್‌ಗಳು, ಬೇಕರಿಗಳು ಸೇರಿದಂತೆ ಹಲವು ಮಳಿಗೆಗಳು ಪೂರ್ಣವಾಗಿ ವಹಿವಾಟು ನಡೆಸಿದವು. ಮಾಲ್‌ಗಳು ಮತ್ತು ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಿರಲಿಲ್ಲ.

ಕೋವಿಡ್‌–19 ಸೋಂಕಿತರ ನಿವಾಸಗಳಿರುವ ಎಂಟು ನಿರ್ಬಂಧಿತ ವಲಯಗಳ ಹೊರತಾಗಿ ಜಿಲ್ಲೆಯಲ್ಲಿ ಲಾಕ್‌ ಡೌನ್‌ ಸಡಿಲಿಕೆಯಾಗಿದೆ. ಉಳಿದ ಪ್ರದೇಶಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ವ್ಯಾಪಾರ, ವಹಿವಾಟು ಚುರುಕಾಗಿತ್ತು. ಹಲವು ದಿನಗಳಿಂದ ಖರೀದಿಯಿಂದ ದೂರ ಉಳಿದಿದ್ದ ಜನರು ಬೆಳಿಗ್ಗೆಯೇ ಅಂಗಡಿಗಳತ್ತ ಹೆಜ್ಜೆ ಹಾಕುತ್ತಿದ್ದುದು ಕಂಡುಬಂತು.

ಮಂಗಳೂರಿನ ಕೆಲವೆಡೆ ಬಟ್ಟೆ ಅಂಗಡಿಗಳು, ಚಪ್ಪಲಿ ಅಂಗಡಿಗಳು ಕೂಡ ತೆರೆದಿದ್ದವು. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಈ ಅಂಗಡಿಗಳ ವಹಿವಾಟಿಗೆ ಅನುಮತಿ ನೀಡಿಲ್ಲ ಎಂಬುದನ್ನು ಮಾಲೀಕರ ಗಮನಕ್ಕೆ ತಂದರು. ಪೊಲೀಸರ ಸೂಚನೆಯಂತೆ ಅಂಗಡಿಗಳನ್ನು ಮುಚ್ಚಲಾಯಿತು.

ಆರಂಭವಾಗದ ಕೈಗಾರಿಕೆಗಳು

ಮಾಹಿತಿ ತಂತ್ರಜ್ಞಾನ ಸೇರಿದಂತೆ ಜಿಲ್ಲೆಯಲ್ಲಿ ಪ್ರಮುಖ ಉದ್ದಿಮೆಗಳು, ಕೈಗಾರಿಕೆಗಳಲ್ಲಿ ಸೀಮಿತ ಸಂಖ್ಯೆಯ ಸಿಬ್ಬಂದಿಯನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗಿದೆ. ಆದರೆ, ಪೂರ್ಣ ಪ್ರಮಾಣದ ತಯಾರಿಯ ಕೊರತೆ ಮತ್ತು ಸಿಬ್ಬಂದಿ ಕೆಲಸಕ್ಕೆ ಹಾಜರಾಗದ ಕಾರಣದಿಂದ ಬಹುತೇಕ ಉದ್ದಿಮೆಗಳು ಕಾರ್ಯಾರಂಭ ಮಾಡಿಲ್ಲ.

ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗದ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಕ್ಲಿನಿಕ್‌ಗಳನ್ನು ತೆರೆಯುವಂತೆಯೂ ಸೂಚಿಸಲಾಗಿದೆ. ಆದರೆ, ಹೊರ ರೋಗಿಗಳು ಆಸ್ಪತ್ರೆಯತ್ತ ಬಾರದೇ ಇರುವ ಕಾರಣ ಇನ್ನೂ ಈ ವಿಭಾಗಗಳು ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಬಹುತೇಕ ಕ್ಲಿನಿಕ್‌ಗಳೂ ಸೋಮವಾರ ಮುಚ್ಚಿಯೇ ಇದ್ದವು.

ವಾಹನ ಸಂಚಾರದ ಅಬ್ಬರ

ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ದ್ವಿಚಕ್ರ ವಾಹನದಲ್ಲಿ ಒಬ್ಬರು, ಕಾರು ಮತ್ತು ಆಟೊ ರಿಕ್ಷಾಗಳಲ್ಲಿ ಮೂವರು ಸಂಚರಿಸಲು ಅವಕಾಶ ನೀಡಲಾಗಿದೆ. ಮೊದಲ ದಿನವೇ ಸಾವಿರಾರು ಮಂದಿ ವಾಹನಗಳೊಂದಿಗೆ ರಸ್ತೆಗೆ ಇಳಿದಿದ್ದರು. ಮಧ್ಯಾಹ್ನದವರೆಗೂ ರಸ್ತೆಗಳಲ್ಲಿ ವಾಹನ ಸಂಚಾರದ ಅಬ್ಬರ ಜೋರಾಗಿತ್ತು.

ಮಂಗಳೂರು ನಗರ, ಉಳ್ಳಾಲ, ಸುರತ್ಕಲ್‌, ಬಂಟ್ವಾಳ, ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಕಡಬ, ಮೂಡುಬಿದಿರೆ, ಮೂಲ್ಕಿ ಸೇರಿದಂತೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT