ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಮೂರು ಗಂಟೆ ಖರೀದಿಗೆ ಅವಕಾಶ

ನಾಳೆಯಿಂದ ಏಳು ದಿನ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿ
Last Updated 14 ಜುಲೈ 2020, 17:33 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌–19 ಸೋಂಕುನಿಯಂತ್ರಣಕ್ಕಾಗಿ ಇದೇ 15ರ ರಾತ್ರಿಯಿಂದ 23ರ ಬೆಳಿಗ್ಗೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ನಿತ್ಯವೂ ಬೆಳಿಗ್ಗೆ 8ರಿಂದ 11ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ ಕುಮಾರ್ ಕಟೀಲ್‌ ಮತ್ತು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಒಂದು ವಾರ ಲಾಕ್‌ಡೌನ್‌ ಜಾರಿಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಈ ಕುರಿತು ಮಾರ್ಗಸೂಚಿಗಳನ್ನು ಪ್ರಕಟಿಸಿ ಜಿಲ್ಲಾಧಿಕಾರಿ ಮಂಗಳವಾರ ಅಧಿಸೂಚನೆ ಹೊರಡಿಸಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆ–2005ರ ಅಡಿಯಲ್ಲಿ ಜಿಲ್ಲಾಧಿಕಾರಿ ಲಾಕ್‌ಡೌನ್‌ ಆದೇಶ ಹೊರಡಿಸಿದ್ದಾರೆ. ಮಂಗಳೂರು ನಗರ ಪೊಲೀಸ್‌ ಕಮಿಷನರ್‌, ದಕ್ಷಿಣ ಕನ್ನಡ ಎಸ್‌ಪಿ, ಮಂಗಳೂರು ಮತ್ತು ಪುತ್ತೂರು ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ದವಸ ಧಾನ್ಯಗಳು, ಹಣ್ಣುಗಳು, ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇ–ಕಾಮರ್ಸ್ ಸೇವೆಗಳ ಮೂಲಕ ಆಹಾರ, ಔಷಧಿ, ವೈದ್ಯಕೀಯ ಸಲಕರಣೆಗಳನ್ನು ಪೂರೈಸುವುದಕ್ಕೂ ಅವಕಾಶ ಇದೆ.

ಬ್ಯಾಂಕ್‌, ಆಸ್ಪತ್ರೆ, ಔಷಧಿ ಅಂಗಡಿ, ವೈದ್ಯಕೀಯ ಪ್ರಯೋಗಾಲಯಗಳು ಲಾಕ್‌ಡೌನ್‌ ಅವಧಿಯಲ್ಲೂ ತೆರೆದಿರುತ್ತವೆ. ಹೋಟೆಲ್‌ಗಳಲ್ಲಿ ಕುಳಿತು ತಿನ್ನಲು ಅವಕಾಶವಿಲ್ಲ. ಪಾರ್ಸೆಲ್‌ ನೀಡಲು ಅನುಮತಿ ಇದೆ.

ಸಾರ್ವಜನಿಕ ಸಾರಿಗೆ ಇಲ್ಲ: ಲಾಕ್‌ಡೌನ್‌ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಸೇರಿದಂತೆ ಯಾವುದೇ ರೀತಿಯ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶವಿಲ್ಲ. ಟ್ಯಾಕ್ಸಿ ಮತ್ತು ಆಟೊ ರಿಕ್ಷಾಗಳನ್ನು ತುರ್ತು ಸಂದರ್ಭದಲ್ಲಿ ಮಾತ್ರ ಬಾಡಿಗೆಗೆ ಪಡೆದು, ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

ಈಗಾಗಲೇ ನಿಗದಿಯಾಗಿದ್ದ ರೈಲುಮತ್ತು ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ರೈಲು ಮತ್ತು ವಿಮಾನಗಳ ಪ್ರಯಾಣಿಕರು ಕಾಯ್ದಿರಿಸಿ ರುವ ಟಿಕೆಟ್‌ಗಳನ್ನೇ ಓಡಾಟಕ್ಕೆ ಅನುಮತಿಸಿರುವ ಪಾಸ್‌ಗಳೆಂದು ಪರಿಗಣಿಸಲಾಗುತ್ತದೆ.‌

ಧಾರ್ಮಿಕ ಸ್ಥಳಗಳು ಬಂದ್‌: ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲ ಧಾರ್ಮಿಕ ಸ್ಥಳಗಳು ಮತ್ತು ಪೂಜಾ ಸ್ಥಳಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ. ಈ ಅವಧಿಯಲ್ಲಿ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಮಾಂಸ ಮಾರಾಟಕ್ಕೆ ಅವಕಾಶ

ಲಾಕ್‌ಡೌನ್‌ ಜಾರಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಂಗಳವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಮೀನು ಮತ್ತು ಮಾಂಸ ಮಾರಾಟಕ್ಕೆ ಸಂಬಂಧಿಸಿದ ಉಲ್ಲೇಖವೇ ಇಲ್ಲ. ಆದರೆ, ಅಗತ್ಯ ವಸ್ತುಗಳ ಖರೀದಿಗೆ ಅನು
ಮತಿಸಿರುವ ಮೂರು ಗಂಟೆಗಳ ಅವಧಿಯಲ್ಲಿ ಮಾಂಸ ಮಾರಾಟಕ್ಕೂ ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ‘ಮೀನು ಮಾರುಕಟ್ಟೆಗಳನ್ನು ತೆರೆದರೆ ಜನಸಂದಣಿ ಹೆಚ್ಚಲಿದೆ. ಮಾಂಸದ ಅಂಗಡಿಗಳನ್ನು ಬೆಳಿಗ್ಗೆ 8ರಿಂದ 11ರವರೆಗೂ ತೆರೆಯಲು ಅವಕಾಶ ನೀಡಲಾಗುವುದು. ಈ ಸಂಬಂಧ ಪರಿಷ್ಕೃತ ಆದೇಶ ನೀಡಲಾಗುವುದು. ಪೊಲೀಸರಿಗೂ ಸೂಚನೆ ನೀಡಲಾಗುವುದು’ ಎಂದರು.

ಮದ್ಯ ಬಂದ್‌: ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲ ಬಗೆಯ ಮದ್ಯದಂಗಡಿಗಳನ್ನು ಬಂದ್‌ ಮಾಡಲಾಗುತ್ತದೆ. ಬುಧವಾರ ಈ ಸಂಬಂಧ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಯಾವುದಕ್ಕೆ ಅವಕಾಶ?

ಹಾಲು, ದಿನಸಿ, ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳು (ಬೆ.8ರಿಂದ 11)

ಆಹಾರ ಸಂಸ್ಕರಣಾ ಉದ್ದಿಮೆಗಳು, ಬ್ಯಾಂಕ್‌, ವಿಮಾ ಕಚೇರಿಗಳು, ಎಟಿಎಂ, ಆಸ್ಪತ್ರೆ, ಕ್ಲಿನಿಕ್‌,ಔಷಧಿ ಮಳಿಗೆಗಳು, ಇ– ಕಾಮರ್ಸ್‌ ಸೇವೆ, ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಉದ್ದಿಮೆಗಳು.

ಯಾವುದು ಬಂದ್‌?

ಹೋಟೆಲ್‌ನಲ್ಲಿ ಕುಳಿತು ತಿನ್ನುವುದು, ಧಾರ್ಮಿಕ ಕ್ಷೇತ್ರಗಳ ಭೇಟಿ, ಚಿತ್ರಮಂದಿರ, ಮಾಲ್‌, ಜಿಮ್‌, ಕ್ರೀಡಾಂಗಣ, ಈಜುಕೊಳ, ಉದ್ಯಾನ, ರಂಗಮಂದಿರ, ಸಭಾಂಗಣಗಳು, ಎಲ್ಲ ಬಗೆಯ ಮದ್ಯದಂಗಡಿಗಳು, ಶಾಲೆ, ಕಾಲೇಜು ಮತ್ತು ಟ್ಯೂಷನ್‌ ಕೇಂದ್ರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT