ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೌತೆ ಚಂಡಮಾರುತ | ಬದುಕಿ ಉಳಿಯುವ ಭರವಸೆ ಇರಲಿಲ್ಲ ಎಂದ ಯುವಕರು

ಸುರಕ್ಷಿತವಾಗಿ ದಡ ಸೇರಿದ ಜಿಲ್ಲೆಯ ಯುವಕರು
Last Updated 3 ಜೂನ್ 2021, 5:56 IST
ಅಕ್ಷರ ಗಾತ್ರ

ಮಂಗಳೂರು: ತೌತೆ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ ಮುಂಬೈನ ಬಾರ್ಜ್‌ನಿಂದ ಸುರಕ್ಷಿತವಾಗಿ ದಡ ಸೇರಿದ್ದ ಜಿಲ್ಲೆಯ ಇಬ್ಬರು ಯುವಕರು ಮನೆಗೆ ಮರಳಿದ್ದಾರೆ. ಮೇ 17ರಂದು ತೌತೆ ಚಂಡಮಾರುತದ ಅಬ್ಬರಕ್ಕೆ ನಲುಗಿದ್ದ ಮುಂಬೈ ಕರಾವಳಿಯ, ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ತೊಕ್ಕೊಟ್ಟು ಕಲ್ಲಾಪು ನಿವಾಸಿ ಚ್ಯವನ್ ಜೆ.ವಿ. ಮತ್ತು ಬಂಟ್ವಾಳ ಪಾಣೆಮಂಗಳೂರಿನ ಸುಕುಮಾರ್, ಬಾರ್ಜ್ ಮುಳುಗಿದ ಸಂದರ್ಭದಲ್ಲಿ ಸಮುದ್ರದಲ್ಲೇ ಈಜಾಡಿ ದಡ ಸೇರಿದ್ದರು.

ಮುಂಬೈ ಸಮೀಪದ ಬಾರ್ಜ್‌ನಲ್ಲಿ ಒಎನ್‌ಜಿಸಿಯ ರಿಂಗ್ ಮರುಜೋಡಣೆ ಕಾರ್ಯದಲ್ಲಿ ಚ್ಯವನ್ ಮತ್ತು ಸುಕುಮಾರ್ ಸೇರಿದಂತೆ 260 ಮಂದಿ ಕೆಲಸ ನಿರ್ವಹಿಸುತ್ತಿದ್ದರು. ಚಂಡಮಾರುತದ ಪರಿಣಾಮ ಬಾರ್ಜ್ ಮುಳುಗಡೆಯಾಗಿತ್ತು.

ಮೇ 17ರಂದು ಸಂಜೆ 4ರಿಂದ 5 ಗಂಟೆಯ ವೇಳೆಗೆ ಬಾರ್ಜ್ ಮುಳುಗಲು ಆರಂಭವಾಗಿದ್ದು, ಕಾರ್ಮಿಕರು ಜೀವ ರಕ್ಷಣೆಗಾಗಿ ಲೈಫ್ ಜಾಕೆಟ್ ತೊಟ್ಟು ಸಮುದ್ರಕ್ಕೆ ಹಾರಿದ್ದರು. ದೈತ್ಯ ಅಲೆಗಳಿಂದ ಸಾಕಷ್ಟು ಬಾರಿ ಮುಳುಗಿದ್ದರೂ, ಸತತ 12 ಗಂಟೆ ಸಮುದ್ರದಲ್ಲೇ ಈಜಿದರು. ಮೇ 18ರ ಬೆಳಿಗ್ಗೆ ಭಾರತೀಯ ನೌಕಾಪಡೆ ಅವರನ್ನು ರಕ್ಷಣೆ ಮಾಡಿತು.

‘ಲೈಫ್ ಜಾಕೆಟ್ ಇದ್ದರೂ ಅಲೆಗಳ ಜೊತೆಗಿನ ಸೆಣಸಾಟ ಸುಲಭವಾಗಿ ಇರಲಿಲ್ಲ. ಸತತ 12 ಗಂಟೆ ಈಜಿದ ಬಳಿಕ ನೌಕಾಪಡೆ ಮೇ 18ರ ಮುಂಜಾನೆ 4 ಗಂಟೆಯ ವೇಳೆಗೆ ನಮ್ಮನ್ನು ರಕ್ಷಿಸಿದರು. ರಾತ್ರಿ ಇಡೀ ಕತ್ತಲಿನಲ್ಲಿ ಈಜುತ್ತಾ ಎಲ್ಲಿ ಹೋಗುತ್ತಿದ್ದೇವೆಂಬ ಅರಿವೇ ನಮಗೆ ಇರಲಿಲ್ಲ. ರಕ್ಷಣೆ ಮಾಡಿದ ಸಂದರ್ಭದಲ್ಲಿ ನಮ್ಮಲ್ಲಿದ್ದ ದೇಹದ ಶಕ್ತಿ ಎಲ್ಲವೂ ನಿಷ್ಕ್ರಿಯವಾಗಿತ್ತು’ ಎಂದು ಯುವಕರು ಹೇಳಿದರು.

‘ನಾವು ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. ಉಪ್ಪು ನೀರಿನಲ್ಲಿದ್ದ ಕಾರಣ ಕಣ್ಣು ಭಾಗಶಃ ಮಂಜಾಗಿತ್ತು. ಬದುಕುಳಿಯುವ ಸಣ್ಣ ಭರವಸೆಯೂ ನಮಗೆ ಇರಲಿಲ್ಲ. ಈ ಹಿಂದೆ ತರಬೇತಿಯಲ್ಲಿ ಹೇಳಿದಂತೆ ಅಪಾಯದ ಸಂದರ್ಭದಲ್ಲಿ ಒಟ್ಟಿಗೆ ಇದ್ದರೆ ರಕ್ಷಣೆಗೂ ಮೊದಲ ಪ್ರಾಶಸ್ತ್ಯ ನೀಡುತ್ತಾರೆ ಎಂಬುದು ಗೊತ್ತಿತ್ತು. ಹೀಗಾಗಿ ರಾತ್ರಿ ಇಡೀ ನಾವು 5 ಮಂದಿಯ ತಂಡ ಒಬ್ಬರಿಗೊಬ್ಬರು ಧೈರ್ಯ ಹೇಳುತ್ತಾ ಈಜಾಡಿದೆವು’ ಎಂದು ಚ್ಯವನ್ ಮತ್ತು ಸುಕುಮಾರ್ ತಿಳಿಸಿದರು.

ಸಾವನ್ನು ಗೆದ್ದು ಮನೆಗೆ ಬಂದ ಯುವಕರಿಬ್ಬರ ಮನೆಯವರು ಈಗ ‘ನೀವು ಇನ್ನು ಆ ಕೆಲಸಕ್ಕೆ ಹೋಗಬೇಡಿ. ಊರಲ್ಲೇ ಬೇರೆ ಏನಾದರೂ ಕೆಲಸ ಮಾಡಬಹುದು’ ಎಂದು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT