ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಭೂಸ್ವಾಧೀನಾಧಿಕಾರಿ ಬಳಿ 2 ಮನೆ, 8 ನಿವೇಶನ

ಎಸಿಬಿ ಅಧಿಕಾರಿಗಳ ದಾಳಿ ವೇಳೆ ದಾಖಲೆಗಳ ಪತ್ತೆ
Last Updated 13 ಜೂನ್ 2020, 10:13 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಮಂಗಳೂರು ವಿಭಾಗದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದು, ಸದ್ಯ ಅಮಾನತ್ತಿನಲ್ಲಿರುವ ಕೆಎಎಸ್‌ ಅಧಿಕಾರಿ ಡಾ.ದಾಸೇಗೌಡ ಎಂ. ಎರಡು ಮನೆ, ಎಂಟು ನಿವೇಶನ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಹೊಂದಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಎಂಆರ್‌ಪಿಎಲ್‌ ವಿಸ್ತರಣಾ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನಿನ ಮಾಲೀಕರಿಗೆ ಪರಿಹಾರ ಪಾವತಿಸಲು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ಇದೇ ಅಧಿಕಾರಿಯನ್ನು 2019ರ ಡಿಸೆಂಬರ್‌ನಲ್ಲಿ ಬಂಧಿಸಿದ್ದರು. ಆ ಬಳಿಕ ದಾಸೇಗೌಡ ಅವರನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿರುವ ಎಸಿಬಿ ಅಧಿಕಾರಿಗಳು, ಮಂಗಳೂರು, ಮಂಡ್ಯ ಸೇರಿದಂತೆ ಹಲವೆಡೆ ಶುಕ್ರವಾರ ಶೋಧ ನಡೆಸಿದರು.

ಎಸಿಬಿ ಪಶ್ಚಿಮ ವಲಯ ಎಸ್‌ಪಿ ಉಮಾ ಪ್ರಶಾಂತ್‌, ಡಿವೈಎಸ್‌ಪಿ ಮಂಜುನಾಥ್‌, ಇನ್‌ಸ್ಪೆಕ್ಟರ್‌ ಯೋಗೇಶ್‌ ಕುಮಾರ್‌ ನೇತೃತ್ವದ ತಂಡ ಶುಕ್ರವಾರ ನಸುಕಿನಲ್ಲೇ ಕಾರ್ಯಾಚರಣೆ ಆರಂಭಿಸಿತ್ತು. ಮಂಗಳೂರಿನ ಬಿಜೈನಲ್ಲಿರುವ ದಾಸೇಗೌಡ ಅವರ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಯ ಬಾಗಿಲಿನ ಬೀಗಕ್ಕೆ ಮೊಹರು ಮಾಡಿರುವ ತನಿಖಾ ತಂಡ, ಆರೋಪಿತ ಅಧಿಕಾರಿಯನ್ನು ಕರೆತಂದು ಬಾಗಿಲು ತೆರೆಯಲು ಸಿದ್ಧತೆ ನಡೆಸಿದೆ.

ಆರೋಪಿ ಅಧಿಕಾರಿ ಮಂಡ್ಯ ಮತ್ತು ಮಂಗಳೂರಿನಲ್ಲಿ ತಲಾ ಒಂದು ಐಷಾರಾಮಿ ಮನೆ ಹೊಂದಿದ್ದಾರೆ. ಮೈಸೂರಿನಲ್ಲಿ ಎರಡು, ಮಂಡ್ಯ ನಗರದಲ್ಲಿ ಎರಡು, ಮಂಡ್ಯ ಗ್ರಾಮೀಣ ಪ್ರದೇಶದಲ್ಲಿ ಎರಡು ಮತ್ತು ಬೆಂಗಳೂರಿನ ಯಶವಂತಪುರ ವ್ಯಾಪ್ತಿಯಲ್ಲಿ ಎರಡು ನಿವೇಶನಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಕಾರುಗಳು, ಬೈಕ್‌ಗಳು ಸೇರಿದಂತೆ ಹಲವು ವಾಹನಗಳು ಆರೋಪಿತರ ಮನೆಗಳಲ್ಲಿ ಪತ್ತೆಯಾಗಿವೆ. ಮಂಡ್ಯದ ಮನೆಯಲ್ಲಿ ₹ 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಗೃಹೋಪಯೋಗಿ ವಸ್ತುಗಳು ಇರುವುದನ್ನು ತನಿಖಾ ತಂಡ ಪಟ್ಟಿ ಮಾಡಿದೆ. ಬ್ಯಾಂಕ್‌ ಖಾತೆಗಳಲ್ಲಿ ₹ 10 ಲಕ್ಷಕ್ಕೂ ಹೆಚ್ಚಿನ ಮೊತ್ತದ ಠೇವಣಿ ಪತ್ತೆಯಾಗಿದೆ. 580 ಗ್ರಾಂ. ಚಿನ್ನ ಮತ್ತು 6.6 ಕೆ.ಜಿ. ಬೆಳ್ಳಿಯ ಆಭರಣಗಳು ದೊರೆತಿವೆ. ಆರೋಪಿ ಅಧಿಕಾರಿ ಮತ್ತು ಕುಟುಂಬದ ಸದಸ್ಯರ ಬ್ಯಾಂಕ್‌ ಲಾಕರ್‌ಗಳನ್ನು ಇನ್ನಷ್ಟೇ ತೆರೆದು, ಪರಿಶೀಲನೆ ಮಾಡಬೇಕಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT