ಮಂಗಳೂರು: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಇದೇ 3 ರಿಂದ 14ರವರೆಗೆ 'ಮಂಗಳೂರು ದಸರಾ ಮಹೋತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ ತಿಳಿಸಿದರು.
ಕ್ಷೇತ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ಎಂದಿನಂತೆ ಈ ವರ್ಷವೂ ಮಂಗಳೂರು ದಸರಾ ವೈಭವೋಪೇತವಾಗಿ ನಡೆಯಲಿದೆ. ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೇ 3ರಂದು ಕ್ಷೇತ್ರದಲ್ಲಿ ಶಾರದೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದೆ. ದಸರಾ ಮಹೋತ್ಸವವನ್ನು ಈ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಉದ್ಘಾಟಿಸಲಿದ್ದಾರೆ’ ಎಂದರು.
ಆಡಳಿತ ಮಂಡಳಿಯ ಖಜಾಂಚಿ ಪದ್ಮರಾಜ ಆರ್., ‘ದಸರಾ ಅಂಗವಾಗಿ ಸಂತೋಷಿ ಮಂಟಪದಲ್ಲಿ ಇದೇ 3ರಿಂದ 12ರವರೆಗೆ ನಿತ್ಯವೂ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಸಂಜೆ 5.30ರಿಂದ ಸಂತೋಷಿ ಮಂಟಪದಲ್ಲಿ ನವರಾತ್ರಿ ಸಾಂಸ್ಕೃತಿಕ ವೈಭವ ಏರ್ಪಡಿಸಲಾಗುತ್ತದೆ’ ಎಂದು ತಿಳಿಸಿದರು.
‘ಇದೇ 3ರಂದು ಬೆಳಿಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, ಕಲಶ ಪ್ರತಿಷ್ಠೆ, ಪುಷ್ಪಾಲಂಕಾರ ಮಹಾಪೂಜೆಗಳು ನೆರವೇರಲಿವೆ. ಭಜನೆ, ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ ಉತ್ಸವ ನಡೆಯಲಿದೆ. ಇದೇ 4 ರಂದು ದುರ್ಗಾಹೋಮ, ಇದೇ 5ರಂದು ಪಂಚ ದುರ್ಗಾಹೋಮ, ಇದೇ 6 ರಂದು ಆರ್ಯ ದುರ್ಗಾಹೋಮ, 7ರಂದು ಅಂಬಿಕಾ ದುರ್ಗಾ ಹೋಮ, 8ರಂದು ಭಗವತೀ ದುರ್ಗಾ ಹೋಮ (ಲಲಿತಾ ಪಂಚಮಿ) ಬೆಳಿಗ್ಗೆ 10ರಿಂದ ನಡೆಯಲಿವೆ. ಇದೇ 9ರಂದು ಬೆಳಿಗ್ಗೆ ಗಂಟೆ 9ರಿಂದ ಸಾಮೂಹಿಕ ಚಂಡಿಕಾ ಹೋಮ, ಕುಮಾರಿ ದುರ್ಗಾ ಹೋಮ ನೆರವೇರಲಿದೆ. ಇದೇ 10 ರಂದು ಮಹಿಷ ಮರ್ದಿನಿ ದುರ್ಗಾ ಹೋಮ, ಇದೇ 11ರಂದು ಚಂಡಿಕಾಹೋಮ ಮತ್ತು ಹಗಲೋತ್ಸವ ಬೆಳಿಗ್ಗೆ 10ರಿಂದ ನಡೆಯಲಿದೆ. ಇದೇ 12ರಂದು ಸರಸ್ವತಿ ದುರ್ಗಾಹೋಮ, 11.30 ರಿಂದ ಶತ ಸೀಯಾಳಾಭಿಷೇಕ, ಶಿವಪೂಜೆ (ಮಹಾನವಮಿ) ನಡೆಯಲಿದೆ. ಇದೇ 13ರಂದು ವಾಗೀಶ್ವರಿ ದುರ್ಗಾಹೋಮ, 12.30ಕ್ಕೆ ಶಿವಪೂಜೆ ನಡೆಯಲಿದೆ. ನಿತ್ಯವೂ ಮಧ್ಯಾಹ್ನ 12.30ರಿಂದ ಅನ್ನ ಸಂತರ್ಪಣೆ ಇರಲಿದೆ’ ಎಂದು ತಿಳಿಸಿದರು.
‘ಈ ಸಲ ಅಂಗಡಿ ಮಳಿಗೆಗಳ ಜಾಗವನ್ನು ಪಾಲಿಕೆಯವರೇ ಹರಾಜು ಹಾಕಿದ್ದಾರೆ. ಜನ ಜಂಗುಳಿ ಉಂಟಾಗಿ ಭಕ್ತರಿಗೆ ಸಮಸ್ಯೆ ಆಗುವುದನ್ನು ತಪ್ಪಿಸಲು ದ್ವಾರದಿಂದ ದೇವಸ್ಥಾನದವರೆಗೆ ರಸ್ತೆ ಪಕ್ಕದಲ್ಲಿ ಮಳಿಗೆಗಳಿಗೆ ಅವಕಾಶ ನೀಡದಂತೆ ಕೋರಿದ್ದೇವೆ’ ಎಂದು ತಿಳಿಸಿದರು.
ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ, ‘ದಸರಾ ಶೋಭಾಯಾತ್ರೆ ಸಾಗುವ ರಸ್ತೆಯ ಇಕ್ಕೆಲಗಳ ಕಟ್ಟಡಗಳನ್ನು ಅದರ ಮಾಲೀಕರೇ ವಿದ್ಯುದಲಂಕಾರ ಮಾಡಿಸಿ ದಸರಾಕ್ಕೆ ಮತ್ತಷ್ಟು ಮೆರುಗು ತುಂಬ ತುಂಬಬೇಕು’ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ ಮಿಜಾರು, ಎಂ. ಶೇಖರ್ ಪೂಜಾರಿ, ಜಗದೀಪ್ ಡಿ.ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ-ಉಪಾಧ್ಯಕ್ಷ ಡಾ.ಅನಸೂಯ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷರಾದ ಬಿ.ಜಿ.ಸುವರ್ಣ, ಸದಸ್ಯರಾದ ಕಿಶೋರ್ ದಂಡೆಕೇರಿ, ವಾಸುದೇವ ಕೋಟ್ಯಾನ್, ಎಚ್.ಎಸ್. ಜೈರಾಜ್, ಲತೀಶ್ ಎಂ. ಸುವರ್ಣ, ರಾಧಾಕೃಷ್ಣ, ಲೀಲಾಕ್ಷ ಕರ್ಕೇರಾ, ಚಂದನ್‌ದಾಸ್, ಗೌರವಿ ರಾಜಶೇಖರ್, ಕೃತಿನ್ ಧೀರಜ್ ಅಮೀನ್ ಭಾಗವಹಿಸಿದ್ದರು.
ಮಂಗಳೂರು ದಸರಾ ವರ್ಷದಿಂದ ವರ್ಷಕ್ಕೆ ವೈಭವೋಪೇತವಾಗಿ ನಡೆಯುತ್ತಿರುವುದಕ್ಕೆ ಮುಖ್ಯ ಕಾರಣ ಕ್ಷೇತ್ರದ ಭಕ್ತಾದಿಗಳು. ಶ್ರೀ ಗೋಕರ್ಣನಾಥೇಶ್ವರ ದೇವರ ಆಶೀರ್ವಾದದಿಂದ ಇದೆಲ್ಲವೂ ಸಾಧ್ಯವಾಗಿದೆಬಿ.ಜನಾರ್ದನ ಪೂಜಾರಿ ಶ್ರಿಗೋಕರ್ಣನಾಥೇಶ್ವರ ಕ್ಷೇತ್ರದ ಅಭಿವೃದ್ಧಿಯ ರೂವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.