ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ರಿ ದೇಗುಲದಲ್ಲಿ ಮುದ್ದುಕೃಷ್ಣರ ಕಲರವ

ರಾಷ್ಟ್ರೀಯ ಮಕ್ಕಳ ಉತ್ಸವ: ಪ್ರೇಕ್ಷಕರ ಮನಸೂರೆಗೊಂಡ ಪುಟಾಣಿಗಳ ತುಂಟಾಟ
Last Updated 18 ಆಗಸ್ಟ್ 2022, 16:24 IST
ಅಕ್ಷರ ಗಾತ್ರ

ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನದ ಪ್ರಾಂಗಣಗುರುವಾರಕೃಷ್ಣಮಯವಾಗಿತ್ತು. ಎಲ್ಲಿ ನೋಡಿದರೂ ಮುದ್ದುಕೃಷ್ಣರದ್ದೇ ದರ್ಬಾರು. ಪುಟ್ಟ ಪುಟ್ಟ ಕಂಗಳ, ಪುಟಾಣಿಗಳ ಕೃಷ್ಣ ವೇಷ ಆಕರ್ಷಣೀಯವಾಗಿತ್ತು. ಬಣ್ಣಬಣ್ಣದ ವೇಷಭೂಷಣಗಳಿಂದ ಧರೆಗಿಳಿದ ಗೋಪಾಲರ ತುಂಟಾಟಗಳು ಪ್ರೇಕ್ಷಕರ ಮನಸೂರೆಗೊಂಡವು.

ತೊಟ್ಟಿಲ ಕೃಷ್ಣ, ಬಾಲಕೃಷ್ಣ, ಬೆಣ್ಣೆ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ, ಗೀತಾ ಕೃಷ್ಣ, ಯಕ್ಷ ಕೃಷ್ಣ, ರಾಧಾಕೃಷ್ಣ, ಯಶೋದೆ ಕೃಷ್ಣ, ದೇವಕಿ ಕೃಷ್ಣ, ರಾಧಾ ಮಾಧವ ಹೀಗೆ ಹಲವು ವೇಷಗಳಲ್ಲಿ ಕಂಗೊಳಿಸಿದ ಪುಟಾಣಿಗಳು, ದೇವಸ್ಥಾನದ ಪ್ರಾಂಗಣವನ್ನು ಗೋಕುಲವನ್ನಾಗಿ ಪರಿವರ್ತಿಸಿದ್ದರು.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಗರದ ಕದ್ರಿ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯಲ್ಲಿ ಈ ವಾತಾವರಣ ಕಂಡು ಬಂತು. ಕೋವಿಡ್‌ ಕಾರಣದಿಂದ ಎರಡು ವರ್ಷಗಳ ಬಳಿಕ ಸ್ಪರ್ಧೆ ಆಯೋಜನೆಗೊಂಡಿದ್ದು, ತಾಯಂದಿರ ಉತ್ಸಾಹ ಇಮ್ಮಡಿಯಾಗಿತ್ತು. ಮಕ್ಕಳಿಗೆ ಕೃಷ್ಣ, ರುಕ್ಮಿಣಿ, ರಾಧೆ, ದೇವಕಿ ಮುಂತಾದ ವೇಷ ಹಾಕಿಸಿ, ಮನೆಮಂದಿಯೆಲ್ಲ ‌ಸೇರಿ ಸಂಭ್ರಮಿಸಿದರು.

ರಾಷ್ಟ್ರೀಯ ಮಕ್ಕಳ ಉತ್ಸವಕ್ಕೆ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಚಾಲನೆ ನೀಡಿದರು. ಕದ್ರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ, ತಂತ್ರಿ ವಿಠಲದಾಸ ತಂತ್ರಿ, ಪ್ರಮುಖರಾದ ಕದ್ರಿ ವಾಸುದೇವ ಅಡಿಗ, ಹರಿಕೃಷ್ಣ ಪುನರೂರು, ಪ್ರೊ.ಎಂ.ಬಿ.ಪುರಾಣಿಕ್, ಶಶಿಧರ ಹೆಗ್ಡೆ, ಭಾಸ್ಕರಚಂದ್ರ, ಭುವನಾಭಿರಾಮ ಉಡುಪ, ಮಟ್ಟಿ ಲಕ್ಷ್ಮಿನಾರಾಯಣ ರಾವ್, ರತ್ನಾಕರ ಜೈನ್, ದಯಾನಂದ ಕಟೀಲ್ ಪುನೀತ್ ಬೆಂಗಳೂರು ಇದ್ದರು.

ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಸಕ ವೇದವ್ಯಾಸ ಕಾಮತ್ ಮತ್ತು ಮೇಯರ್ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿದರು.

‘ಮಕ್ಕಳಲ್ಲಿ ಸತ್‌ಚಿಂತನೆ, ಕೃಷ್ಣ ಚಿಂತನೆ, ರಾಷ್ಟ್ರಚಿಂತನೆ ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಉದ್ದೇಶದಿಂದ ನಾಲ್ಕು ದಶಕಗಳಿಂದ ಈ ಸ್ಪರ್ಧೆ ಆಯೋಜಿಸಿಕೊಂಡು ಬರಲಾಗಿದೆ. ಎಂಟು ಮಕ್ಕಳಿಂದ ಆರಂಭಗೊಂಡ ಈ ಸ್ಪರ್ಧೆ ಇಂದು ಎಂಟು ವೇದಿಕೆಗಳಿಗೆ ವಿಸ್ತರಣೆಗೊಂಡು ರಾಷ್ಟ್ರೀಯ ಉತ್ಸವವಾಗಿ ಪರಿವರ್ತನೆಯಾಗಿದೆ. ಆ ಮೂಲಕ ಧಾರ್ಮಿಕ ಜಾಗೃತಿ ಸಮಾಜದಲ್ಲಿ ಮೂಡಿಸುವ ವಿಶೇಷ ಪ್ರಯತ್ನ ನಡೆಸಲಾಗಿದೆ. ಇದು ವ್ಯಕ್ತಿ ಆಧಾರಿತವಲ್ಲ, ಸಾಮೂಹಿಕ ಪ್ರಯತ್ನದ ಫಲ’ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ತಿಳಿಸಿದರು.

9 ವೇದಿಕೆ, 33 ವಿಭಾಗಗಳಲ್ಲಿ ಸ್ಪರ್ಧೆ: ‌ಒಟ್ಟು 33 ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ ಏಕಕಾಲದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಭಾಗವಹಿಸಿದ ಸ್ಪರ್ಧಾಳುಗಳಿಗೆ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಮಂಜುನಾಥ ದೇವರ ಭಾವಚಿತ್ರ, ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳು, ಪ್ರಶಂಸನಾ ಪತ್ರ ಮತ್ತು ಭಗವದ್ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಲಾಯಿತು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.

ತಿಂಗಳಿನ ಮಗುವಿನಿಂದ ಆರಂಭವಾಗಿ ಬೇರೆ ಬೇರೆ ವಯಸ್ಸಿನ ಕೃಷ್ಣಾವತಾರಗಳು ನೋಡುಗರ ಕಣ್ಮನ ಸೆಳೆದವು. ಬಹುತೇಕ ಮಂದಿ ತಮ್ಮ ಮಕ್ಕಳಿಗೆ ಕೃಷ್ಣ ವೇಷವನ್ನು ಮನೆಯಲ್ಲಿ ಹಾಕಿಕೊಂಡು ಬೈಕ್‌, ಕಾರಿನಲ್ಲಿ ಬಂದರೆ, ಇನ್ನು ಕೆಲವರು ದೇವಸ್ಥಾನದ ಅಭಿಷೇಕ ಮಂದಿರದ ಕೆಳಭಾಗದಲ್ಲಿ ವೇಷ ಹಾಕಿಸಿದರು. ಮುದ್ದು ಕೃಷ್ಣರ ಜತೆಗೆ ಯಶೋದೆಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಯಶೋದೆಯರು ಪುಟಾಣಿಗಳಿಗೆ ವಿವಿಧ ರೀತಿಯ ಅಭಿನಯ ಕಲೆಗಳನ್ನು ಹೇಳಿಕೊಡುತ್ತಿದ್ದುದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT