ಮಂಗಳವಾರ, ಜನವರಿ 28, 2020
25 °C
ಬಂತು ಇಂಟರ್ನೆಟ್, ಬಸ್ ಸಂಚಾರ ಆರಂಭ, ರಸ್ತೆಗಿಳಿದ ಆಟೊಗಳು

ಮಂಗಳೂರು | ಕರ್ಫ್ಯೂ ಸಡಿಲಿಕೆ: ದಿನಬಳಕೆ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟ ಬಳಿಕ ಗುರುವಾರದಿಂದ ನಗರದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂವನ್ನು ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಸಡಿಲಿಸಲಾಗಿದೆ. ಇಂಟರ್ನೆಟ್ ಸೇವೆ ಲಭ್ಯವಾಗಿದೆ.

ಅಂಗಡಿ,‌ ಮುಂಗಟ್ಟುಗಳು ತೆರೆದಿದ್ದು, ದಿನಬಳಕೆಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಮಾರುಕಟ್ಟೆಗಳಲ್ಲಿ ಭಾರಿ ಜನಸಂದಣಿ ಇದೆ. ಬಂದರು ದಕ್ಕೆಯ ಮೀನು ಮಾರುಕಟ್ಟೆಯಲ್ಲಿ ಸಹಸ್ರಾರು ಮಂದಿ ಮೀನು ಖರೀದಿಗೆ ಬಂದಿದ್ದು, ನೂಕುನುಗ್ಗಲು ಉಂಟಾಗಿದೆ.

ಬಸ್ ಸಂಚಾರ ಆರಂಭವಾಗುತ್ತಿದೆ. ಆಟೊಗಳು ರಸ್ತೆಗಿಳಿದಿವೆ.

ಅಂತೂ ಬಂತು ಇಂಟರ್ನೆಟ್

ಮೊಬೈಲ್ ಇಂಟರ್ನೆಟ್ ಬಳಕೆಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಮೊಬೈಲ್‌ಗಳಿಗೆ ವಾಟ್ಸ್ಯಾಪ್‌ ಮೆಸೇಜ್‌ಗಳು ಪುಂಖಾನುಪುಂಖವಾಗಿ ಬಂದು ಬೀಳುತ್ತಿವೆ. ಇಂಟರ್ನೆಟ್‌ ಇಲ್ಲದೆ ‘ಏನನ್ನೋ ಕಳೆದುಕೊಂಡಿದ್ದ’ ಭಾವದಲ್ಲಿದ್ದ ಯುವಪೀಳಿಗೆಯಂತೂ ಮೊಬೈಲ್‌ ಕೈಲಿ ಹಿಡಿದು ಶಿಲೆಗಳಂತೆ ಕುಳಿತಿದ್ದಾರೆ.

ಗುರುವಾರ ನಡೆದ ಘಟನಾವಳಿಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂಟರ್‌ನೆಟ್‌ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು. ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ಯಾವುದೇ ಬರಹ, ಚಿತ್ರಗಳು ಹರಿದಾಡಿ ಸಾಮರಸ್ಯಕ್ಕೆ ಭಂಗ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ 48 ಗಂಟೆಗಳ ಕಾಲ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿ, ಗೃಹ ಇಲಾಖೆಯ ಸಹಾಯಕ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್‌ ಗೋಯೆಲ್‌ ಗುರುವಾರ ರಾತ್ರಿ ಆದೇಶ ಹೊರಡಿಸಿದ್ದರು.

ಅದಾದ ನಂತರ ಗುರುವಾರ ಮಧ್ಯರಾತ್ರಿಯಿಂದಲೇ ಇಂಟರ್‌ನೆಟ್‌ ಸೇವೆ ಸ್ಥಗಿತಗೊಂಡಿತ್ತು. ಕ್ಷಣಕ್ಷಣದ ಸುದ್ದಿಗಳಿಗೆ ಇಂಟರ್‌ನೆಟ್‌ ಅನ್ನೇ ಅವಲಂಬಿಸಿದ್ದ ಜನರು ದಿಕ್ಕು ತೋಚದಂತಾಗಿದ್ದರು. ನಿತ್ಯದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲೇ ಕಾಲ ಕಳೆಯುವವರಿಗಂತೂ ನೆಟ್‌ ಸಂಪರ್ಕ ಇಲ್ಲದೆ, ದಿನ ಕಳೆಯುವುದೇ ಕಷ್ಟವಾಗಿ ಪರಿಣಮಿಸಿತ್ತು.

ಭಾನುವಾರ ಮುಂಜಾನೆಯಿಂದ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು ಪುನಃ ಚಾಲನೆಯಾಗಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು