ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಇಂಟರ್‌ನೆಟ್ ಇಲ್ಲದ 48 ಗಂಟೆ: ರಾಜ್ಯದಲ್ಲಿ ಮೊದಲ ಬಾರಿಗೆ ನೆಟ್ ಕಡಿತ

ಆಟ ಆಡಿ ಕಾಲ ಕಳೆದ ಮಕ್ಕಳು: ಹರಟೆಯಲ್ಲಿ ತಲ್ಲೀನರಾದ ಪಾಲಕರು
Last Updated 22 ಡಿಸೆಂಬರ್ 2019, 2:47 IST
ಅಕ್ಷರ ಗಾತ್ರ

ಮಂಗಳೂರು: ಫೇಸ್‌ಬುಕ್‌ನಲ್ಲಿ ಬರುತ್ತಿದ್ದ ಜನ್ಮದಿನದ ಸೂಚನೆಗಳಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಕಾಣಿಸುತ್ತಿದ್ದ ಫೋಟೊ, ವಿಡಿಯೊ ಸಂದೇಶಗಳೂ ಇಲ್ಲ. ಶಾಲೆ–ಕಾಲೇಜುಗಳಿಗೆ ರಜೆ ಇದ್ದು, ವಿಡಿಯೊ ನೋಡಿ ಕಾಲ ಕಳೆಯಬೇಕೆಂದರೆ, ಯೂಟೂಬ್‌ನ ಪರದೆಯೂ ತೆರೆದುಕೊಳ್ಳುತ್ತಿಲ್ಲ. ಹೊಸ ಗೇಮ್‌ ಡೌನ್‌ಲೋಡ್ ಮಾಡಬೇಕೆಂದರೆ, ಪ್ಲೇ ಸ್ಟೋರ್ ಅವಕಾಶ ನೀಡುತ್ತಿಲ್ಲ...

ನಿತ್ಯ ಹಾಸಿಗೆಯಿಂದ ಏಳುವ ಮುನ್ನವೇ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ತಲ್ಲೀನರಾಗಿ ಇರುತ್ತಿದ್ದ ಜಿಲ್ಲೆಯ ಕೆಲ ಜನರಿಗೆ 48 ಗಂಟೆ ಕಳೆಯುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಸದಾ ಮೊಬೈಲ್‌ನ ಮೇಲೆಯೇ ಇರುತ್ತಿದ್ದ ಬೆರಳುಗಳಿಗೆ ಎರಡು ದಿನ ಸಂಪೂರ್ಣ ವಿಶ್ರಾಂತಿ ಸಿಕ್ಕಿತ್ತು. ಅಲ್ಲದೇ, ಪದೇ ಪದೇ ಮೊಬೈಲ್‌ ಚಾರ್ಜ್‌ ಮಾಡುವ ರಗಳೆಯೂ ಇರಲಿಲ್ಲ.

ಗುರುವಾರ ನಡೆದ ಘಟನಾವಳಿಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂಟರ್‌ನೆಟ್‌ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು. ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ಯಾವುದೇ ಬರಹ, ಚಿತ್ರಗಳು ಹರಿದಾಡಿ ಸಾಮರಸ್ಯಕ್ಕೆ ಭಂಗ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ 48 ಗಂಟೆಗಳ ಕಾಲ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿ, ಗೃಹ ಇಲಾಖೆಯ ಸಹಾಯಕ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್‌ ಗೋಯೆಲ್‌ ಗುರುವಾರ ರಾತ್ರಿ ಆದೇಶ ಹೊರಡಿಸಿದ್ದರು.

ಅದಾದ ನಂತರ ಗುರುವಾರ ಮಧ್ಯರಾತ್ರಿಯಿಂದಲೇ ಇಂಟರ್‌ನೆಟ್‌ ಸೇವೆ ಸ್ಥಗಿತಗೊಂಡಿತ್ತು. ಕ್ಷಣ ಕ್ಷಣದ ಸುದ್ದಿಗಳಿಗೆ ಇಂಟರ್‌ನೆಟ್‌ ಅನ್ನೇ ಅವಲಂಬಿಸಿದ್ದ ಜನರು ದಿಕ್ಕು ತೋಚದಂತಾಗಿದ್ದರು. ನಿತ್ಯದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲೇ ಕಾಲ ಕಳೆಯುವವರಿಗಂತೂ ನೆಟ್‌ ಸಂಪರ್ಕ ಇಲ್ಲದೆ, ದಿನ ಕಳೆಯುವುದೇ ಕಷ್ಟವಾಗಿ ಪರಿಣಮಿಸಿತ್ತು.

ಇತ್ತ ಮಾರುಕಟ್ಟೆಯೂ ಇಲ್ಲ, ಅತ್ತ ಶಾಲಾ–ಕಾಲೇಜುಗಳೂ ಇಲ್ಲ. ಕರ್ಫ್ಯೂ ವಿಧಿಸಿದ್ದರಿಂದ ಮನೆಗಳಿಂದ ಹೊರಗೆ ಹೋಗುವಂತೆಯೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಕೂಡ ಇರದೇ ಇದ್ದುದರಿಂದ ಜನರು ಕಾಲ ಕಳೆಯುವುದು ಹೇಗೆ ಎನ್ನುವ ಚಿಂತೆಯಲ್ಲಿ ಮುಳುಗಿದ್ದರು.

ಚರ್ಚಾ ಕೂಟ: ಮೊಬೈಲ್‌ನಲ್ಲಿಯೇ ತಲ್ಲೀನರಾಗಿ ಇರುತ್ತಿದ್ದ ಜನರು, ಪರಸ್ಪರ ಚರ್ಚೆ ಮಾಡುವ ಮೂಲಕ ಕಾಲ ಕಳೆಯಲು ಮುಂದಾದರು. ಮನೆಗಳಲ್ಲಿ ತಂದೆ–ತಾಯಿ, ಮಕ್ಕಳು, ಹಿರಿಯರೊಂದಿಗೆ ಚರ್ಚೆಗಳು ನಡೆದರೆ, ಅಪಾರ್ಟ್‌ಮೆಂಟ್‌ಗಳಲ್ಲಿ ಅಕ್ಕಪಕ್ಕದ ಮನೆಯವರೇ ಒಂದೆಡೆ ಕುಳಿತು ಹರಟೆ ಹೊಡೆಯುವುದರಲ್ಲಿ ನಿರತರಾಗಿದ್ದರು.

ಇನ್ನೊಂದೆಡೆ ಬಡಾವಣೆಯಲ್ಲಿ ಇರುವ ಮಕ್ಕಳೆಲ್ಲ ಒಟ್ಟಾಗಿ ಸೇರಿ, ಆಟದಲ್ಲಿ ನಿರತರಾಗಿದ್ದರು. ಬಿಕೋ ಎನ್ನುತ್ತಿದ್ದ ರಸ್ತೆಗಳೇ ಕ್ರಿಕೆಟ್‌, ಬ್ಯಾಡ್ಮಿಂಟನ್‌, ಫುಟ್‌ಬಾಲ್‌ನ ಅಂಕಣಗಳಾಗಿ ಪರಿಣಮಿಸಿದ್ದವು.

ಇಂಟರ್ನೆಟ್‌ ಸಂಪರ್ಕ ಸ್ಥಗಿತದಿಂದಾಗಿ ಕೆಲವರು ಪರದಾಡಿದರೆ, ಇನ್ನೊಂದಷ್ಟು ಜನರು ಇಂಟರ್‌ನೆಟ್‌ ಸಂಪರ್ಕ ಕಡಿತವಾದದ್ದು ಒಳ್ಳೆಯದೇ ಆಯಿತೆಂದು ಮಾತನಾಡಿಕೊಳ್ಳುತ್ತಿದ್ದರು. ಇಂಟರ್‌ನೆಟ್‌ ಸಂಪರ್ಕ ಇಲ್ಲದಿದ್ದರೆ, ಯಾವುದೇ ಮಾಹಿತಿ ಪಡೆಯುವುದಕ್ಕೂ ಆಗುವುದಿಲ್ಲ. ಹೀಗಾಗಿ ಅಹಿತಕರ ಘಟನೆಗಳಿಗೆ ಆಸ್ಪದವೂ ಸಿಗುವುದಿಲ್ಲ. ಇಂಟರ್‌ನೆಟ್‌ ಸಂಪರ್ಕ ಸ್ಥಗಿತಗೊಳಿಸಿರುವುದು ಒಳ್ಳೆಯದೇ ಆಯಿತು ಎನ್ನುವ ಮಾತುಗಳೂ ಕೆಲವೆಡೆ ಕೇಳಿ ಬಂದವು.

ರಾಜ್ಯದಲ್ಲಿ ಮೊದಲ ಬಾರಿ ಇಂಟರ್‌ನೆಟ್ ಸ್ಥಗಿತ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ. ಈ ಮೊದಲು ರಾಜ್ಯದ ಬೇರಾವ ಭಾಗದಲ್ಲೂ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಿರುವ ಉದಾಹರಣೆಗಳು ಇಲ್ಲ. ಇದರಿಂದಾಗಿ ನಗರದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಟಿವಿಗಳ ಮುಂದೆ ಕುಳಿತುಕೊಳ್ಳುವುದು ಅನಿವಾರ್ಯವಾಗಿತ್ತು.

ಇಂಟರ್‌ನೆಟ್‌ ಯುಗಕ್ಕೆ ರೂಢಿಸಿಕೊಂಡಿದ್ದ ಹಲವರು, ನೆಟ್‌ ಇಲ್ಲದೇ ನೇರವಾಗಿ ಕರೆ ಮಾಡಿ, ಸ್ನೇಹಿತರು, ಆಪ್ತರಲ್ಲಿ ಸುದೀರ್ಘವಾಗಿ ಮಾತನಾಡುತ್ತಿದ್ದರು. ಭಾನುವಾರ ಮುಂಜಾನೆ ಮಂಗಳೂರಿನಲ್ಲಿ ಇಂಟರ್ನೆಟ್‌ ಸಂಪರ್ಕ ಮತ್ತೆ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT