ಮಂಗಳೂರು: ಭರತಖಂಡ ಕಂಡ ಮಹಾನ್ ದಾರ್ಶನಿಕ ನಾರಾಯಣ ಗುರು. ಅಂಥವರ ಪಾದಸ್ಪರ್ಶ ಮಂಗಳೂರಿಗೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಲು ಬಂದಾಗ ಆಗಿದ್ದು, ಪಾವಿತ್ರ್ಯ ಪಡೆದುಕೊಂಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಆಯೋಜಿಸಲಾದ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದಲ್ಲಿ ಪರಮಾತ್ಮನಂತೆ ಹುಟ್ಟಿಬಂದ ಅವರು ಸಮಾಜದ ಎಲ್ಲಾ ವರ್ಗದವರಿಗೂ ಸಮಾನತೆ, ಮುಖ್ಯವಾಹಿನಿಗೆ ಬರುವ ಅವಕಾಶ ಕಲ್ಪಿಸಿಕೊಟ್ಟರು. ನೂರಾರು ವರ್ಷಗಳ ಹಿಂದೆಯೇ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶಿಕ್ಷಣ ಕೇಂದ್ರ, ವಸತಿ ನಿಲಯಗಳನ್ನು ಸ್ಥಾಪಿಸಿ ಶಿಕ್ಷಣ ಕಲ್ಪಿಸಿದರು. ಹಿಂದುಳಿದ ವರ್ಗದವರು ಮುಖ್ಯವಾಹಿನಿಗೆ ಬರಬೇಕು, ಅವರಿಗೆ ಶಿಕ್ಷಣ ಕಲ್ಪಿಸಬೇಕು, ಅಸ್ಪೃಶ್ಯತೆ ತೊಲಗಿಸಬೇಕು ಎನ್ನುವ ಚಿಂತನೆ ಇಟ್ಟಕೊಂಡು ಭಾರತದೆಲ್ಲೆಡೆ ಕಾರ್ಯಪ್ರವೃತ್ತರಾದರು ಎಂದರು.
ನಾರಾಯಣ ಗುರು ಅವರು ಜನ್ಮತಾಳದೆ ಇದ್ದಿದ್ದರೆ ಕೇರಳದಲ್ಲಿ ಹಿಂದೂ ಧರ್ಮದ ದೈವ–ದೇವರುಗಳನ್ನು ನಂಬುವಂತಹ ವಾತಾವರಣ ಕಳೆದುಹೋಗುತ್ತಿತ್ತು. ಗುಡಿ, ಮಂದಿರಗಳಿಗೆ ಪ್ರವೇಶ ನಿಷಿದ್ಧವಾಗಿದ್ದ ಸಮುದಾಯಗಳಿಗೆ ಪ್ರವೇಶಿಸುವ, ಆರಾಧಿಸುವ ದಾರಿ ತೋರಿಸಿ, ಅವಕಾಶ ಕಲ್ಪಿಸಿಕೊಡುವ ಮೂಲಕ ಅವರು ಇತರ ಧರ್ಮಗಳಿಗೆ ಮತಾಂತರ, ಇನ್ನಿತರ ವ್ಯವಸ್ಥೆಗೆ ಬಲಿಯಾಗುವುದನ್ನು ತಪ್ಪಿಸಿ ಹಿಂದೂ ಧರ್ಮಕ್ಕೆ ಮಾರ್ಗದರ್ಶನ ಮಾಡಿದರು ಎಂದರು.
ನಾರಾಯಣ ಗುರು ನಿಗಮ ಸ್ಥಾಪನೆಯಾಗಿ, ಕಳೆದ 15 ತಿಂಗಳುಗಳಿಂದ ಅಧ್ಯಕ್ಷರ ನೇಮಕವಾಗಿಲ್ಲ. ಅನುದಾನವೂ ಬಿಡುಗಡೆಯಾಯಾಗಿಲ್ಲ. ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವೆಲ್ಲವನ್ನು ಜಿಲ್ಲಾಡಳಿತ, ಸರ್ಕಾರ ಅನುಷ್ಠಾನ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಜಿ.ಎಸ್.ಗಟ್ಟಿ ಅವರು ಮಾತನಾಡಿ, ನಾರಾಯಣ ಗುರು ಅವರ ತತ್ವ, ಚಿಂತನೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜ ತನ್ನಿಂದ ತಾನೇ ಸುಧಾರಣೆಯಾಗುತ್ತದೆ ಎಂದರು.
ನಾರಾಯಣ ಗುರುಗಳ ಜೀವನ, ತತ್ವ–ಚಿಂತನೆಗಳ ಕುರಿತು ಉಪನ್ಯಾಸ ನೀಡಿದ ಚಿಂತಕ ಅರವಿಂದ ಚೊಕ್ಕಾಡಿ ಅವರು, ಅದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದ ನಾರಾಯಣ ಗುರುಗಳ ಆಧ್ಯಾತ್ಮಿಕ ಚಿಂತನೆಗಳು ಅವರ ಸಾಮಾಜಿಕ ಸುಧಾರಣೆಗಳಿಗೆ ಪ್ರೇರಣಾ ಶಕ್ತಿಯಾಗಿತ್ತು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಸಾಯಿರಾಮ್, ಕುದ್ರೋಳಿ ಗೋಕರ್ಣನಾಥ ಕಾಲೇಜು ಸಂಚಾಲಕ ವಸಂತ ಕಾರಂದೂರು, ಪ್ರಾಂಶುಪಾಲ ಜಯಪ್ರಕಾಶ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ರೇಣುಕಾ ಕಣಿಯೂರು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.