‘ಸಾಧಕಿಯರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸುಶೀಲಾ ನಾಡ ಮಾತನಾಡಿದರು
ನ್ಯೂನತೆ ಮೆಟ್ಟಿನಿಂತ ಸಬಿತಾ
‘ಎರಡೂ ಕೈಗಳಿಲ್ಲದೆ ನಾನು ಹುಟ್ಟಿದ್ದರಿಂದ ಸುತ್ತಮುತ್ತಲ ಊರಿನವರು ಬಂದು ವಿಶೇಷ ಎಂಬಂತೆ ನನ್ನನ್ನು ನೋಡಿ ಹೋಗುತ್ತಿದ್ದರಂತೆ. ಕೈಗಳಿಲ್ಲದ ನನ್ನನ್ನು ಡ್ರೈವರ್ ಕೆಲಸ ಮಾಡಿಕೊಂಡಿದ್ದ ಅಪ್ಪ ಬೀಡಿ ಕಟ್ಟುತ್ತಿದ್ದ ಅಮ್ಮ ಕಷ್ಟಪಟ್ಟು ಸಾಕಿದ್ದಾರೆ. ಮುದ್ದಿನಿಂದ ಸಾಕಿ ವಿದ್ಯಾಳಂತಳನ್ನಾಗಿ ಬೆಳೆಸಿ ಜೀವನದ ಎಲ್ಲಾ ಹಂತಗಳಲ್ಲೂ ಜೊತೆಯಾಗಿದ್ದಾರೆ. ಅಕ್ಕಂದಿರು ಮಿತ್ರರು ಶಿಕ್ಷಕರು ಪ್ರೋತ್ಸಾಹಿಸಿದ್ದರಿಂದಾಗಿ ನ್ಯೂನತೆ ಮೆಟ್ಟಿನಿಂತು ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಸಬಿತಾ ಮೋನಿಸ್ ತಮ್ಮ ಜೀವನಗಾಥೆ ನಿರೂಪಿಸಿದರು. ಅಂಗನವಾಡಿಗೆ ಹೋಗುತ್ತಿದ್ದ ನಾನು ಕಾಲಿಗೆ ಬಳಪ ಸಿಕ್ಕಿಸಿ ಬರೆಯುವುದು ಕಲಿತೆ. ಶಾಲೆಗೆ ದಾಖಲಾತಿ ಮಾಡಲು ತೆರಳಿದಾಗ ಅಲ್ಲಿ ನನ್ನನ್ನು ವಿಶೇಷ ಶಾಲೆಗೆ ಸೇರಿಸುವಂತೆ ಹೆತ್ತವರಿಗೆ ತಿಳಿಸಿದ್ದರು. ಅವರಿಗೆ ಅದರ ಬಗ್ಗೆ ತಿಳಿದಿರಲಿಲ್ಲ. ಎರಡು ವರ್ಷ ಅಂಗನವವಾಡಿಯಲ್ಲೇ ಕಳೆದೆ. 1ನೇ ತರಗತಿಯಲ್ಲಿ ಗೆಳತಿಯರೊಂದಿಗೆ ಕೂರುತ್ತಿದ್ದೆ. ಒಂದು ದಿನ ಅಧಿಕಾರಿಗಳು ಭೇಟಿ ನೀಡಿದಾಗ ನಾನು ಸ್ಲೇಟ್‌ನಲ್ಲಿ ಬರೆದಿದ್ದನ್ನು ಗಮನಿಸಿ ಯಾಕೆ ಅವಳನ್ನು ಇನ್ನೂ ದಾಖಲಿಸಿಲ್ಲ ಎಂದು ಪ್ರಶ್ನಿಸಿ ದಾಖಲಿಸಲು ಸೂಚಿಸುತ್ತಾರೆ. ಅಲ್ಲಿಂದ ನಾನು ಹಿಂತಿರುಗಿ ನೋಡಿಲ್ಲ. ಶೈಕ್ಷಣಿಕ ಸಾಧನೆ ಮಾಡುತ್ತಾ ಹೋಗಿ ಮುಂದೆ ಎಂ.ಎಸ್‌ಡಬ್ಲ್ಯೂ ಪದವಿ ಮಾಡಿದೆ ಎಂದು ವಿವರಿಸಿದರು.