ಗುರುವಾರ , ಅಕ್ಟೋಬರ್ 21, 2021
28 °C
‘ನಮ್ಮ ದಸರಾ- ನಮ್ಮ ಸುರಕ್ಷೆ’ ಘೋಷವಾಕ್ಯದಡಿ ನವರಾತ್ರಿ ಉತ್ಸವ

ದಕ್ಷಿಣ ಕನ್ನಡ: ವಿಶ್ವವಿಖ್ಯಾತ ‘ಮಂಗಳೂರು ದಸರಾ’ಕ್ಕೆ ಕುದ್ರೋಳಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ವಿಶ್ವವಿಖ್ಯಾತ ‘ಮಂಗಳೂರು ದಸರಾ’ಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಸಜ್ಜಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೋವಿಡ್ ಮಾರ್ಗಸೂಚಿಗಳೊಂದಿಗೆ ಅ.7ರಿಂದ ಅ.16ರ ವರೆಗೆ ವೈಭವಪೂರ್ಣವಾಗಿ ನವರಾತ್ರಿ ಉತ್ಸವಕ್ಕೆ ಸಿದ್ಧತೆ ನಡೆಸಲಾಗಿದೆ.

‘ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ‘ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಯಲಿವೆ. ದಸರಾ ಮೆರವಣಿಗೆ ಹೊರತುಪಡಿಸಿ ಉಳಿದೆಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದೆ’ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ಅ.7ರಂದು ಮಹಾನವಮಿ ಉತ್ಸವ ಆರಂಭದೊಂದಿಗೆ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಗೆ ಗುರುಪ್ರಾರ್ಥನೆ, 11.30ಕ್ಕೆ ಕಲಶ ಪ್ರತಿಷ್ಠೆ ಹಾಗೂ 11.40ಕ್ಕೆ ದರ್ಬಾರು ಮಂಟಪದಲ್ಲಿ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ನಿತ್ಯ ವಿಶೇಷ ಪೂಜೆಗಳು ನೆರವೇರಲಿದೆ. ಅ. 15ರಂದು ಮಹಾಪೂಜೆ ನಡೆದು ರಾತ್ರಿ 8ರಿಂದ ಕ್ಷೇತ್ರದ ಆವರಣದಲ್ಲಿ ಸರಳ ಮೆರವಣಿಗೆಯೊಂದಿಗೆ ಶಾರದಾ ವಿಸರ್ಜನೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಸರ್ಕಾರದ ಆದೇಶದಂತೆ ಈ ಬಾರಿಯೂ ದಸರಾವನ್ನು ಕೋವಿಡ್‌ ಮಾರ್ಗಸೂಚಿಗಳೊಂದಿಗೆ ನಡೆಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆಯ ಬದಲು ಆಹಾರ ಪೊಟ್ಟಣವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುವುದು’ ಎಂದು ಹೇಳಿದರು.

ವರ್ಚುವಲ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ: ‘ದಸರಾ ಪ್ರಯುಕ್ತ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 15ರಿಂದ 20 ಕಲಾ ತಂಡಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿವೆ. ಕೋವಿಡ್‌ ಕಾರಣದಿಂದ ಇದನ್ನೂ ವರ್ಚುವಲ್‌ ಮೂಲಕ ನಡೆಸಲು ಉದ್ದೇಶಿಸಿದ್ದು, ಸ್ಥಳೀಯ ವಾಹಿನಿಯ ಮೂಲಕ ವೀಕ್ಷಿಸಬಹುದು’ ಎಂದು ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು.

‌ಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ಮಹೇಶ್ಚಂದ್ರ, ಎಂ.ಶೇಖರ್ ಪೂಜಾರಿ, ಜಗದೀಪ್ ಡಿ. ಸುವರ್ಣ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ರಾಧಾಕೃಷ್ಣ, ಜತಿನ್ ಅತ್ತಾವರ, ಲೀಲಾಕ್ಷ ಕರ್ಕೇರ, ಚಂದನ್‌ದಾಸ್, ಗೌರವಿ ಪಿ.ಕೆ., ಕಿಶೋರ್ ದಂಡಕೇರಿ ಇದ್ದರು.

ಪಾಲಿಕೆಯಿಂದ ರಾಜಬೀದಿ ವಿದ್ಯುದ್ದೀಪಾಲಂಕಾರ

‘ಮಂಗಳೂರು ದಸರಾ’ ಮಹೋತ್ಸವದ ಅಂಗವಾಗಿ ನಗರದ ಸುಮಾರು 6–7 ಕಿ.ಮೀ. ರಾಜಬೀದಿಯಲ್ಲಿ ವಿದ್ಯುದ್ದೀಪಾಲಂಕಾರಕ್ಕೆ ಮಂಗಳೂರು ಮಹಾನಗರ ಪಾಲಿಕೆಯಿಂದ ವ್ಯವಸ್ಥೆಗೆ ಪಾಲಿಕೆ ಸಮ್ಮತಿಸಿರುವುದು ಹಾಗೂ ಇದಕ್ಕೆ ಸಹಕರಿಸಿರುವ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯ ಹರಿಕೃಷ್ಣ ಬಂಟ್ವಾಳ ತಿಳಿಸಿದರು.

‘ಪ್ರತಿವರ್ಷ ಸಂಘಸಂಸ್ಥೆಗಳ ಸಹಕಾರದಲ್ಲಿ ರಾಜಬೀದಿಯನ್ನು ವಿದ್ಯುತ್‌ ಅಲಂಕಾರ ಮಾಡಲಾಗುತ್ತಿತ್ತು. ಸುಮಾರು ₹ 50 ಲಕ್ಷ ತನಕ ಖರ್ಚಾಗುತ್ತಿತ್ತು. ಕಳೆದ ವರ್ಷ ಕ್ಷೇತ್ರಕ್ಕೆ ಬಂದಿದ್ದ ಶಾಸಕ ವೇದವ್ಯಾಸ ಕಾಮತ್‌ ಅವರೇ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದರು’ ಎಂದು ಹೇಳಿದರು.

ಕೋವಿಡ್ ‌ಲಸಿಕೆಗೆ ವ್ಯವಸ್ಥೆ

‘ದಸರಾ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೋವಿಡ್‌–19 ಲಸಿಕೆಯನ್ನು ವ್ಯವಸ್ಥೆಯನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ಮಾಡಲಾಗುತ್ತದೆ. 18 ವರ್ಷ ದಾಟಿದವರು ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆಯುವವರು ಆಧಾರ್‌ ಕಾರ್ಡ್‌ ತರುವುದು ಕಡ್ಡಾಯ. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆತನಕ ಲಸಿಕೆ ಲಭ್ಯವಿದೆ’ ಎಂದು ಪದ್ಮರಾಜ್ ಆರ್. ಮಾಹಿತಿ ನೀಡಿದರು.

‘ಭಕ್ತರು ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು ಬರಬೇಕು. ದೇವಸ್ಥಾನದ ಪ್ರಾಂಗಣ ಪ್ರವೇಶಿಸುವ ಮೊದಲು ಥರ್ಮಲ್‌ ಸ್ಕ್ಯಾನ್‌ಗೊಳಪಡಬೇಕು, ಕ್ಷೇತ್ರ ಆವರಣದಲ್ಲಿ ಅಂತರ ಕಾಪಾಡಬೇಕು, ದೇವಾಲಯ ಮತ್ತು ದರ್ಬಾರ್‌ ಮಂಟಪದಲ್ಲಿ ಕಡ್ಡಾಯವಾಗಿ ಫೋಟೊ ನಿಷೇಧಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು