ಮಂಗಳೂರು: ‘ಈ ನಗರದ ವೈಶಿಷ್ಟ್ಯದೊಂದಿಗೆ ಇಲ್ಲಿನ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರವು ಗುರುತಿಸಿಕೊಂಡು ಬೆಳೆಯಬೇಕು. ಐ.ಟಿ ಉದ್ದಿಮೆಗಳಿಗೆ ಮಂಗಳೂರನ್ನೇ ಏಕೆ ಆಯ್ಕೆ ಮಾಡಬೇಕು ಎಂಬ ಪ್ರಶ್ನೆಗೆ ಈ ಗುರುತಿನಲ್ಲೇ ಉತ್ತರ ಸಿಗುವಂತಾಗಬೇಕು’ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.
ಮಂಗಳೂರು ಐಟಿ ಕಾರ್ಯಪಡೆ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಿಲಿಕಾನ್ ಬೀಚ್ ಆಗುವತ್ತ ಮಂಗಳೂರಿನ ಐಟಿ ಅಲೆ’ ಸಂವಾದದಲ್ಲಿ ಅವರು ಮಾತನಾಡಿದರು.
‘ಇಲ್ಲಿ ಪಬ್ ಇಲ್ಲ, ಪಾರ್ಟಿ ನಡೆಸಲು ಜಾಗ ಇಲ್ಲ ಎಂಬೆಲ್ಲ ದೂರುಗಳನ್ನು ಬದಿಗಿಟ್ಟು ಮಂಗಳೂರೇ ಏಕೆ ಐ.ಟಿ ಕಂಪನಿಗೆ ಪ್ರಶಸ್ತ ಸ್ಥಳ ಎಂಬುದನ್ನು ಪ್ರಚುರ ಪಡಿಸಬೇಕಿದೆ. ಮೂಲಸೌಕರ್ಯ ಒದಗಿಸಿ, ಐ.ಟಿ ಕಂಪನಿಗಳನ್ನು ಸೆಳೆಯಲೆಂದೇ ವ್ಯವಸ್ಥೆಯನ್ನು ಕಟ್ಟಬೇಕಿದೆ. ಅಲ್ಪಾವಧಿ ಹಾಗೂ ದೀರ್ಘಾವಧಿ ಗುರಿಗಳನ್ನು ಗೊತ್ತುಪಡಿಸಿಕೊಂಡು, ಆದ್ಯತಾ ಕಾರ್ಯಗಳನ್ನು ಪಟ್ಟಿಮಾಡಿ ಕ್ರಮವಹಿಸಬೇಕಿದೆ’ ಎಂದು ಕ್ಯಾ.ಚೌಟ ತಿಳಿಸಿದರು.
‘ಐಟಿ ಹಬ್ ಆಗಿ ಹೊರಹೊಮ್ಮಲು ಇರುವ ಕೊರತೆಗಳೇನು, ಅವುಗಳನ್ನು ನಿವಾರಿಸುವ ಬಗೆ ಹೇಗೆ ಎಂಬ ಕುರಿತ ನಿಖರ ತಿಳಿವಳಿಕೆಯೊಂದಿಗೆ ಹೆಜ್ಜೆ ಹಾಕಬೇಕು. ಈ ದಿಸೆಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಏನೆಲ್ಲ ಅಗತ್ಯ ಎಂಬ ಸ್ಪಷ್ಟತೆಯೊಂದಿಗೆ ಮುಂದಡಿ ಇಡಬೇಕು’ ಎಂದರು.
'ನಗರದಲ್ಲಿರುವ ಉದ್ಯಮಶೀಲತಾ ಅವಕಾಶಗಳು ಮತ್ತು ಕಲಿಕಾ ಕೇಂದ್ರಕ್ಕೆ (ಸಿಇಒಎಲ್) ಬಲತುಂಬುವ ಬಗ್ಗೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸುತ್ತೇನೆ. ಐ.ಟಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ನಗರದಲ್ಲಿ ನ್ಯಾಸ್ಕಾಂ ಕೇಂದ್ರವನ್ನು ಆರಂಭಿಸಲು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಕೋರುತ್ತೇನೆ’ ಎಂದು ಸಂಸದ ಭರವಸೆ ನೀಡಿದರು.
ಮುಡಿಪುವಿನ ಇನ್ಫೊಸಿಸ್ ಕೇಂದ್ರದಲ್ಲಿ 10 ಸಾವಿರ ಉದ್ಯೋಗಗಳು ಬಳಸುವಷ್ಟು ಸೌಕರ್ಯವಿದ್ದರೂ 4 ಸಾವಿರ ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಸೌಕರ್ಯವನ್ನು ಸದ್ಬಳಕೆಯಾಗಬೇಕು ಎಂದರು
ಪ್ರಸ್ತಾವಿಕವಾಗಿ ಮಾತನಾಡಿದ ಆಶಿತ್ ಹೆಗ್ಡೆ, ‘ಐ.ಟಿ ಕ್ಷೇತ್ರದ ದೊಡ್ಡ ಉದ್ದಿಮೆಗಳಲ್ಲಿ ಕೆಲಸ ಮಾಡುವ ಶೇ 95ರಷ್ಟು ಮಂದಿ, ಕೆಲವೊಂದು ಅವಶ್ಯಕತೆ ಪೂರೈಸಿದರೆ ಮಂಗಳೂರಿನಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಈ ಪ್ರದೇಶದ 25ಕ್ಕೂ ಅಧಿಕ ಎಂಜಿನಿಯರಿಂಗ್ ಕಾಲೇಜುಗಳಿಂದ ವರ್ಷಕ್ಕೆ 12 ಸಾವಿರ ಎಂಜಿನಿಯರ್‌ಗಳು, ಸುಮಾರು 150ಕ್ಕೂ ಹೆಚ್ಚು ಪದವಿ ಕಾಲೇಜುಗಳಿಂದ 40 ಸಾವಿರಕ್ಕೂ ಹೆಚ್ಚು ಪದವೀಧರರು ಪ್ರತಿ ವರ್ಷ ಹೊರಬರುತ್ತಾರೆ. ಐಟಿ ಕಂಪನಿಗಳಿಗೆ ಪ್ರತಿಭೆಗಳ ಕೊರತೆ ಇಲ್ಲಿಲ್ಲ. 50ಕ್ಕೂ ಹೆಚ್ಚು ಇನ್ಕ್ಯುಬೇಷನ್ ಕೇಂದ್ರಗಳು ಇಲ್ಲಿವೆ. 230ಕ್ಕೂ ಹೆಚ್ಚು ಐಟಿ ಕಂಪನಿಗಳು ಇಲ್ಲಿ ಕಚೇರಿಯನ್ನು ಹೊಂದಿವೆ. ಇಲ್ಲಿನ ಐ.ಟಿ ಕಂಪನಿಗಳು ವರ್ಷದಲ್ಲಿ ₹4,194 ಕೋಟಿ (5000 ಲಕ್ಷ ಡಾಲರ್) ವಹಿವಾಟು ನಡೆಸುತ್ತಿವೆ’ ಎಂದು ತಿಳಿಸಿದರು.
ಸಂವಾದವನ್ನು ಮಂಗಳೂರ ಐಟಿ ಕಾರ್ಯಪಡೆಯ ಪ್ರವೀಣ್ ಕಲ್ಬಾವಿ ನಡೆಸಿಕೊಟ್ಟರು. ಮಹಮ್ಮದ್ ಹನೀಫ್ ಸ್ವಾಗತಿಸಿದರು. ಸುಬೋಧ್ ಧನ್ಯವಾದ ಸಲ್ಲಿಸಿದರು.
ಬಿ.ಸಿ.ರೋಡ್– ಅಡ್ಡಹೊಳೆ ಚತುಷ್ಪಥ
2025ಕ್ಕೆ ಪೂರ್ಣ ‘ಬಿ.ಸಿ.ರೋಡ್– ಅಡ್ಡಹೊಳೆ ನಡುವೆ ಹೆದ್ದಾರಿ ಚತುಷ್ಫತ ಕಾಮಗಾರಿ 2025ರ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ. ಸಕಲೇಶಪುರ ಮಾರನಹಳ್ಳಿವರೆಗಿನ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಈ ಚತುಷ್ಪತ ಕಾಮಗಾರಿ ಪೂರ್ಣಗೊಂಡ ಬಳಿಕ ಮಂಗಳೂರು– ಬೆಂಗಳೂರು ಸಂಪರ್ಕ ಸುಲಭವಾಗಲಿದೆ. ಶಿರಾಡಿಯಲ್ಲಿ ಪರ್ಯಾಯ ಮಾರ್ಗವನ್ನು ಗುರುತಿಸುವ ಹಾಗೂ ಸುರಂಗವನ್ನು ನಿರ್ಮಿಸುವ ಪ್ರಸ್ತಾವಗಳೂ ಪರಿಶೀಲನೆಯಲ್ಲಿವೆ’ ಎಂದು ಕ್ಯಾ.ಬ್ರಿಜೇಶ್ ಚೌಟ ಮಾಹಿತಿ ನೀಡಿದರು.
ಮಂಗಳೂರಿನ ಯಾವುದೇ ಸ್ಥಳವನ್ನು 15 ನಿಮಿಷದಲ್ಲಿ ತಲುಪಲು ಸಾಧ್ಯವಾಗುವಂತಹ ಮೂಲಸೌಕರ್ಯ ಕಲ್ಪಿಸಿ ಇದನ್ನು ‘15 ನಿಮಿಷದ ಸಿಟಿ’ ಎಂದು ಬಿಂಬಿಸಿ.ರೋಹಿತ್ ಭಟ್, ರೋಬೊಸಾಫ್ಟ್ ಕಂಪನಿಯ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.