ಮಂಗಳೂರು: ನಗರದ ವೆಲೆನ್ಸಿಯಾದಲ್ಲಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಮನೆಗೆ ಕಿಡಿಗೇಡಿಗಳ ತಂಡವೊಂದು ಬುಧವಾರ ರಾತ್ರಿ ಕಲ್ಲು ತೂರಿದೆ.
ಬುಧವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಮನೆ ಬಳಿಗೆ ತೆರಳಿದ್ದ ಐದಾರು ಮಂದಿ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಿ ಘೋಷಣೆ ಕೂಗಿ ಪರಾರಿಯಾಗಿದ್ದಾರೆ ಎಂದು ಗೊತ್ತಾಗಿದೆ.
ಈ ಘಟನೆ ನಡೆದಾಗ ಐವನ್ ಡಿಸೋಜ ಅವರು ಮನೆಯಲ್ಲಿರಲಿಲ್ಲ. ಪಕ್ಷದ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿಗೆ ತೆರಳಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿ ನೀಡಿದ್ದನ್ನು ಖಂಡಿಸಿ, ಕಾಂಗ್ರೆಸ್ ನೇತೃತ್ವದಲ್ಲಿ ನಗರದಲ್ಲಿ ಈಚೆಗೆ ಪ್ರತಿಭಟನೆ ನಡೆದಿತ್ತು. ಈ ವೇಳೆ ಮಾತನಾಡಿದ್ದ ಐವನ್ ಡಿಸೋಜ, 'ರಾಷ್ಟ್ರಪತಿಯವರು ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಬಾಂಗ್ಲಾದಲ್ಲಿ ಆದ ಸ್ಥಿತಿ ರಾಜ್ಯಪಾಲರಿಗೂ ಆಗಲಿದೆ' ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಖಂಡನೆ ವ್ಯಕ್ತವಾಗಿತ್ತು. ಐವನ್ ವಿರುದ್ಧ ಬಿಜೆಪಿ ಯುವ ಮೋರ್ಚಾ ಮತ್ತಿತರ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದವು.
ಕಲ್ಲು ತೂರಾಟದ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, 'ಹೆಲ್ಮೆಟ್ ಧರಿಸಿದ್ದ ಕೆಲವರು ಐವನ್ ಡಿಸೋಜ ಅವರ ಮನೆಗೆ ಕಲ್ಲು ಬಿಸಾಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ' ಎಂದು ತಿಳಿಸಿದರು.