ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮಂಗಳೂರು ವಿವಿಯಲ್ಲಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿ, ನೌಕರರಿಗೆ ಅನ್ಯಾಯ ಆರೋಪ
Last Updated 24 ಮಾರ್ಚ್ 2023, 12:34 IST
ಅಕ್ಷರ ಗಾತ್ರ

ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 2021–22ರ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ವಿತರಿಸಿದ ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಅವ್ಯವಹಾರ ಆಗಿದ್ದು ಎಂಜಿನಿಯರಿಂಗ್ ವಿಭಾಗದ ತಾಂತ್ರಿಕ ಹುದ್ದೆಗಳ ನೇಮಕಾತಿಯಲ್ಲೂ ಗೋಲ್‌ಮಾಲ್ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ದೂರಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಲೋಕೇಶ್ ನಾಯ್ಕ, ‘ಮಾಹಿತಿ ಹಕ್ಕು ಕಾಯ್ದೆಯಡಿ ಮತ್ತು ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ ವಿಶ್ವವಿದ್ಯಾಲಯದ ಕುಲಪತಿ ಪಿ.ಎಸ್.ಯಡಿಪಡಿತ್ತಾಯ ಭಾರಿ ಅಕ್ರಮ ಮಾಡಿರುವುದು ತಿಳಿದು ಬಂದಿದೆ. ಇದರಲ್ಲಿ ಕುಲಸಚಿವ ಕಿಶೋರ್ ಕುಮಾರ್ ಸಿ.ಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೂಡ ಶಾಮೀಲಾಗಿರುವ ಸಂದೇಹ ಇದೆ. ಅಕ್ರಮಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು, ನ್ಯಾಯಾಂಗ ತನಿಖೆಗೂ ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಿತರಿಸಲು ಕಡಿಮೆ ದರದ 200 ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ಅತ್ಯುತ್ತಮ ಗುಣಮಟ್ಟದ ಲ್ಯಾಪ್‌ಟಾಪ್ ಎಂದು ಹೇಳಿ ಪ್ರತಿಯೊಂದಕ್ಕೂ ₹ 97000 ದರ ಹಾಕಲಾಗಿದೆ. ಖಾಸಗಿ ಕಾಲೇಜಿನ ಅಧ್ಯಾಪಕರೊಬ್ಬರನ್ನು ತಾಂತ್ರಿಕ ತಜ್ಞ ಎಂದು ಬಿಂಬಿಸಿ ಗುಣಮಟ್ಟದ ವರದಿ ಪಡೆದುಕೊಳ್ಳಲಾಗಿದೆ. ಕಳಪೆ ಮಟ್ಟದ ಲ್ಯಾಪ್‌ಟಾಪ್‌ ನೀಡಿ ವಿದ್ಯಾರ್ಥಿಗಳಿಗೂ, ಹೆಚ್ಚು ದರ ತೋರಿಸಿ ಸರ್ಕಾರಕ್ಕೂ ಮೋಸ ಮಾಡಲಾಗಿದೆ’ ಎಂದು ಅವರು ದೂರಿದರು.

ಶಿಫ್ಟ್ ಮೆಕ್ಯಾನಿಕ್ ಮತ್ತು ಇತರ ತಾಂತ್ರಿಕ ಹುದ್ದೆಗಳ ಬಡ್ತಿ ನಿಯಮ ರೂಪಿಸುವಾಗ ಪರಿಶಿಷ್ಟ ನೌಕರರು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸಲಿಲ್ಲ. ಸಾಮಾನ್ಯ ವರ್ಗದಲ್ಲಿ ನೇಮಕವಾದ ವ್ಯಕ್ತಿಯೊಬ್ಬರನ್ನು ಎಸ್‌ಟಿ ಮೀಸಲಾತಿಗೆ ಪರಿಗಣಿಸಿ ಬಡ್ತಿ ನೀಡಲಾಗಿದೆ. 221 ಬೋಧಕೇತರ ಹುದ್ದೆಗಳ ನೇಮಕಾತಿ ವೇಳೆ 32ಕ್ಕೆ ಮಾತ್ರ ಅಧಿಸೂಚನೆ ಹೊರಡಿಸಿ ಉಳಿದವುಗಳನ್ನು ತಮಗೆ ಬೇಕಾದವರಿಗೆ ನೀಡಿದ್ದಾರೆ. ಪರಿಶಿಷ್ಟ ಅಧ್ಯಾಪಕರ ವಿರುದ್ಧ ಸುಳ್ಳು ಮಾಹಿತಿ ನೀಡಿ ತಾತ್ಕಾಲಿಕ ಬಹಿಷ್ಕಾರ ಹಾಕಲಾಗಿದೆ. ಭದ್ರತೆ, ಶುಚಿತ್ವದಲ್ಲಿ ಬಾಗಿಯಾಗಿರುವ ಸಿಬ್ಬಂದಿಗೆ ಮಾಸಿಕ ವೇತನ ಸಮರ್ಪಕವಾಗಿ ನೀಡುತ್ತಿಲ್ಲ, ಮೊತ್ತದಲ್ಲಿ ಕಡಿತವನ್ನೂ ಮಾಡಲಾಗುತ್ತದೆ’ ಎಂದು ಲೋಕೇಶ್ ನಾಯ್ಕ ಆರೋಪಿಸಿದರು.

ಡಿ.ಗಂಗಾಧರ ನಾಯ್ಕ, ಜಯಪ್ರಕಾಶ್‌, ರತ್ನಾವತಿ ಮತ್ತು ರೇವತಿ ಇದ್ದರು.

ಸುಳ್ಳು ಆರೋಪಗಳು

ತಾವು ಹೇಳಿದ ಹಾಗೆ ಕೇಳಲಿಲ್ಲ, ಅವರಿಗೆ ಬೇಕಾದವರಿಗೆ ಅನುಕೂಲ ಮಾಡಿಕೊಟ್ಟಿಲ್ಲ ಎಂಬ ಕಾರಣಕ್ಕೆ ಕೆಲವರು ನನ್ನನ್ನು ಮತ್ತು ವಿಶ್ವವಿದ್ಯಾಲಯವನ್ನು ಗುರಿ ಇಟ್ಟು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೆಲವರ ಜೊತೆ ತಾಸುಗಟ್ಟಲೆ ಚರ್ಚೆ ಮಾಡಿದ ನಂತರವೂ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೆಲವರು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ಒಳಿತಿಗಾಗಿಯೇ ಎಲ್ಲ ಕೆಲಸ ಮಾಡಿದ್ದೇನೆಯೇ ಹೊರತು ಪೂರ್ವಗ್ರಹದಿಂದ ಅಲ್ಲ. ಅಷ್ಟಕ್ಕೂ ಬಹಿರಂಗ ಚರ್ಚೆ ಮಾಡಲು ಇದೇನು ರಾಜಕೀಯ ಕ್ಷೇತ್ರವಲ್ಲವಲ್ಲ.

–ಪ್ರೊ. ಪಿ.ಎಸ್.ಯಡಿಪಡಿತ್ತಾಯ, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT