ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ನರೇಗಾ ಯೋಜನೆ; ಗ್ರಾಮೀಣ ಅಭ್ಯುದಯಕ್ಕೆ ನೆರವು

ಪುತ್ತೂರು ತಾಲ್ಲೂಕಿನಲ್ಲಿ ‘ನರೇಗಾ’ ಗುರಿಮೀರಿದ ಸಾಧನೆ
Last Updated 3 ಮೇ 2022, 19:30 IST
ಅಕ್ಷರ ಗಾತ್ರ

ಪುತ್ತೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪುತ್ತೂರು ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಸತತ ಎರಡನೇ ಬಾರಿಗೆ ಗುರಿ ಮೀರಿದ ಸಾಧನೆಯಾಗಿದೆ.

ತಾಲ್ಲೂಕಿಗೆ ಯೋಜನೆಯಡಿ 1,78,322 ಮಾನವ ದಿನಗಳ ಗುರಿ ನಿಗದಿಪಡಿಸಲಾಗಿತ್ತು. ಆದರೆ ತಾಲ್ಲೂಕಿನಲ್ಲಿ 2,11,602 ಮಾನವ ದಿನಗಳ ಕೆಲಸಗಳು ನಡೆದಿದ್ದು, ಶೇ 119ರಷ್ಟು ಸಾಧನೆಯಾಗಿದೆ. ಇದರಲ್ಲಿ 2,302 ವೈಯಕ್ತಿಕ ಕಾಮಗಾರಿಗಳು ಮತ್ತು 131 ಸಾರ್ವಜನಿಕ ಕಾಮಗಾರಿಗಳು ನಡೆದಿವೆ. 13,873 ಮಂದಿ ಫಲಾನುಭವಿಗಳಿಗೆ ಉದ್ಯೋಗ ಕಾರ್ಡ್ ನೀಡಲಾಗಿದೆ.

ರಸ್ತೆ ನಿರ್ಮಾಣ, ಸರ್ಕಾರಿ ಶಾಲೆಗಳಲ್ಲಿ ಭೋಜನ ಶಾಲೆ ನಿರ್ಮಾಣ, ಶಾಲಾ ಆವರಣಗೋಡೆ, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗಳು ನಡೆದಿವೆ. ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಕುಡಿಯುವ ನೀರಿಗಾಗಿ ತೆರೆದ ಬಾವಿ ನಿರ್ಮಾಣ, ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಳೆನೀರು ಇಂಗಿಸುವ ಯೋಜನೆ, ಇಂಗುಗುಂಡಿ ರಚನೆ, ಕಿಂಡಿ ಅಣೆಕಟ್ಟೆ ನಿರ್ಮಾಣ, ಕೃಷಿ ಕಾಯಕಕ್ಕೆ ಪೂರಕವಾದ ಕೃಷಿ ಹೊಂಡ ರಚನೆ, ಅಡಿಕೆ ತೋಟ ರಚನೆ, ಸ್ವಚ್ಛತೆ -ನೈರ್ಮಲ್ಯಕ್ಕಾಗಿ ಬಚ್ಚಲು ಗುಂಡಿಗಳ ರಚನೆ ಮೊದಲಾದ ಕಾಮಗಾರಿಗಳು ಪ್ರಮುಖವಾಗಿವೆ.

ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ನಡೆದ ಹಲವು ಕಾಮಗಾರಿಗಳು ಊರಿನ ಅಭಿವೃದ್ಧಿಗೆ ಪೂರಕವಾಗಿವೆ. ಕೃಷಿಕರ ಪಾಲಿಗೆ ಬಂಧುವಾಗಿವೆ. ರಸ್ತೆ ನಿರ್ಮಾಣ, ಶಾಲಾ ಅಭಿವೃದ್ಧಿ ಕಾಮಗಾರಿಗಳು ಊರಿನ ಅಭ್ಯುದಯಕ್ಕೆ ನೆರವಾಗಿವೆ. ಬಹುತೇಕ ಕಡೆಗಳಲ್ಲಿದ್ದ ಕುಡಿಯುವ ನೀರಿನ ಬವಣೆ ನಿವಾರಣೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಕಲಾತ್ಮಕ ವಿನ್ಯಾಸದ ಬಾವಿ: ಕೊಳ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಸರಸ್ವತಿಮೂಲೆ ನಿವಾಸಿ ಪದ್ಮನಾಭ ನಾಯ್ಕ್ ಅವರು ನರೇಗಾ ಯೋಜನೆಯಡಿ ನಿರ್ಮಿಸಿರುವ ಕಲಾತ್ಮಕ ವಿನ್ಯಾಸದ ಬಾವಿ ನೋಡುಗರ ಗಮನ ಸೆಳೆಯುತ್ತಿದೆ. ₹67 ಸಾವಿರ ವೆಚ್ಚದಲ್ಲಿ ಆಕರ್ಷಕ ಶೈಲಿಯಲ್ಲಿ ಈ ಬಾವಿಯನ್ನು ನಿರ್ಮಿಸಲಾಗಿದೆ.

ಹಿರೇಬಂಡಾಡಿ ತಾಲ್ಲೂಕಿನಲ್ಲೇ ಪ್ರಥಮ: ಪುತ್ತೂರು ತಾಲ್ಲೂಕಿನ ಹಿರೇಬಂಡಾಡಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯನ್ನು ಅತಿ ಹೆಚ್ಚು ಬಳಕೆಮಾಡಿಕೊಂಡು ವಿಶೇಷ ಸಾಧನೆ ಮಾಡಲಾಗಿದೆ. ಈ ಗ್ರಾಮ ಪಂಚಾಯಿತಿ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಿರೇಬಂಡಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನರೇಗಾ ಯೋಜನೆಯ ₹ 20 ಲಕ್ಷ ಅನುದಾನ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ₹5 ಲಕ್ಷ ಸೇರಿದಂತೆ ಒಟ್ಟು ₹25 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಭೋಜನೆ ಶಾಲೆ ನಿರ್ಮಾಣ ಮಾಡಲಾಗಿದೆ.

ಉದ್ಯೋಗ ಖಾತರಿ ಯೋಜನೆಯಡಿ ತಾಲ್ಲೂಕಿನಲ್ಲಿ ಫಲಾನುಭವಿಗಳಿಗೆ ₹6.13 ಕೋಟಿ ಕೂಲಿ ಪಾವತಿಸಲಾಗಿದೆ. ₹1.76 ಕೋಟಿ ಸಾಮಗ್ರಿಗಳನ್ನು ಪೂರೈಸಲಾಗಿದ್ದು, ಒಟ್ಟು ₹7.89 ಕೋಟಿ ಖರ್ಚಾಗಿದೆ. ₹1.70 ಕೋಟಿ ಅನುದಾನ ಬಿಡುಗಡೆಗೆ ಬಾಕಿ ಇದೆ ಎಂದು ವಿಭಾಗದ ಎಂಜಿನಿಯರ್ ವಿನೋದ್‌ಕುಮಾರ್ ತಿಳಿಸಿದರು.

‘ಗ್ರಾಮದ ಅಭಿವೃದ್ಧಿಗೆ ವರದಾನ’
‘ಹಿರೇಬಂಡಾಡಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಗುರಿ ಮೀರಿದ ಸಾಧನೆ ಮಾಡಲಾಗಿದೆ. ಈ ಯೋಜನೆ ಗ್ರಾಮದ ಅಭಿವೃದ್ಧಿಗೆ ವರದಾನವಾಗಿದೆ. ಗ್ರಾಮಸ್ಥರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಕಾರದಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶೌಕತ್ ಅಲಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT