ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | 1,800ಕ್ಕೂ ಹೆಚ್ಚು ಮಂದಿಗೆ ಎಂಆರ್‌ಜಿ ಗ್ರೂಪ್ ‘ನೆರವು’

ಅಶಕ್ತರಿಗೆ, ಅಂಗವಿಕಲರಿಗೆ, ಅನಾರೋಗ್ಯಪೀಡಿತರಿಗೆ ‘ಆಶಾ ಪ್ರಕಾಶ ಶೆಟ್ಟಿ ಸಹಾಯ ಹಸ್ತ’
Published 26 ಡಿಸೆಂಬರ್ 2023, 7:51 IST
Last Updated 26 ಡಿಸೆಂಬರ್ 2023, 7:51 IST
ಅಕ್ಷರ ಗಾತ್ರ

ಮಂಗಳೂರು: ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಸಮಸ್ಯೆ ಎದುರಿಸುವವರು, ಭಿನ್ನಸಾಮರ್ಥ್ಯದವರ ಆರೈಕೆಗೆ ನೆರವುಕೋರಿ ಬಂದವರು, ಅಂಗವಿಕಲರು, ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಮಸ್ಯೆ ಎದುರಿಸುತ್ತಿರುವವರು, ಕ್ರೀಡಾಳುಗಳು... ಹೀಗೆ ಆರ್ಥಿಕ ನೆರವಿನ ಅವಶ್ಯಕತೆ ಇರುವ 1,800ಕ್ಕೂ ಹೆಚ್ಚು ಮಂದಿಗೆ ಎಂ.ಆರ್.ಜಿ. ಗ್ರೂಪ್ ವತಿಯಿಂದ ಇಲ್ಲಿ ‘ನೆರವಿನ ಹಸ್ತ’ ಚಾಚಲಾಯಿತು.

ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಶಾ ಪ್ರಕಾಶ್ ಶೆಟ್ಟಿ ಸಹಾಯಹಸ್ತ ‘ನೆರವು’ ಕಾರ್ಯಕ್ರಮವು ನೋವುಂಡವರ ಕಣ್ಣೀರು ಒರೆಸುವ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಯಿತು.

ಚಿತ್ರನಟ ರಮೇಶ ಅರವಿಂದ್‌, ‘ಪ್ರಕಾಶ ಎಂದರೆ ಬೆಳಕು. ಬೆಳಕು ಯಾವಾಗಲೂ ಒಳಗಿನಿಂದಲೇ ಬರಬೇಕು. ಸಮಾಜದಲ್ಲಿ ಕೋಟ್ಯಾಧಿಪತಿಗಳು ಬಹಳಷ್ಟು ಮಂದಿ ಇರಬಹುದು. ಒಳಗಿನಿಂದ ಕೊಡುವ ಮನಸು ಹುಟ್ಟಿಕೊಂಡರೆ ಮಾತ್ರ ಕೊಡುವ ಯೋಗ ಒಲಿಯುತ್ತದೆ’ ಎಂದರು.  

‘ದಾನ ಮಾಡುವಾಗ ಪ್ರಕಾಶ ಶೆಟ್ಟಿ ಅವರು ಜನರ ಜಾತಿ, ಧರ್ಮ‌ವನ್ನು ಕೇಳುವುದಿಲ್ಲ. ನಿಮ್ಮ ಕಷ್ಟ ಏನು ಎಂದು ಮಾತ್ರ ಕೇಳುತ್ತಾರೆ. ಅವರ ಈ ಪಯಣ ಹೀಗೆಯೇ ಮುಂದುವರಿಯಲಿ’ ಎಂದರು.

‘ಇಂದು ನೀವು ಪಡೆದ ಸಹಾಯ ಒಂದು ಸ್ಪೂರ್ತಿ. ನೀವು ಮತ್ತೆ ಬಲಶಾಲಿಗಳಾಗಿ ಮತ್ತೊಬ್ಬರಿಗೆ ಸಹಾಯ ಮಾಡುವ ಮಟ್ಟಕ್ಕೆ ಬೆಳೆಯಬೇಕು. ಕೆಲಸದಲ್ಲಿ ಉತ್ಕೃಷ್ಟತೆ ಕಾಯ್ದುಕೊಳ್ಳುವ, ನಂಬಿಕೆಗೆ ಅರ್ಹರಾಗಿರುವ, ಕೊಟ್ಟ ಮಾತನ್ನು ನಡೆಸಿಕೊಡುವ, ಇನ್ನೊಬ್ಬರ ಬಗ್ಗೆ ಕಾಳಜಿ ವಹಿಸುವ ‌ಗುಣ ಬೆಳೆಸಿಕೊಂಡರೆ ಅದ್ಭುತ ನಾಳೆಗಳು ಕಾದಿರುತ್ತವೆ’ ಎಂದು ಸ್ಫೂರ್ತಿ ತುಂಬಿದರು.

ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗಲು ಐದು ವರ್ಷಗಳಿಂದ ಪ್ರಕಾಶ ಶೆಟ್ಟಿ ಅವರು ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ನೂರು ಕೈಗಳು ದುಡಿದದ್ದನ್ನು ಸಾವಿರ ಕೈಗಳಿಗೆ ದಾನ ಮಾಡಿದರೆ ಭಗವಂತ ಮತ್ತಷ್ಟು ನೀಡುತ್ತಾನೆ’ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ‘ಕೋಟ್ಯಧಿಪತಿಗಳ ನಡುವೆ  ಒಪ್ಪೊತ್ತಿನ ಊಟಕ್ಕೂ ಪರದಾಡುವ, ಅನಾರೋಗ್ಯ ಕಾಡಿದಾಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಜನರಿದ್ದಾರೆ. ಅಂತೆಯೇ, ದುಡಿಮೆಯ ಭಾಗವನ್ನು ಜನರ ಕಣ್ಣೀರು ಒರೆಸಲು ಮೀಸಲಿಡುವ ಪ್ರಕಾಶ್ ಶೆಟ್ಟಿಯಂತಹವರೂ ಇದ್ದಾರೆ’ ಎಂದರು. 

ಉಡುಪಿ ಬ್ರಹ್ಮಾವರದ ಶೇಖ್ ತಬರಕ್, ಕಿನ್ನಿಮೂಲ್ಕಿ ಬುರ್ಹಾನುದ್ದೀನ್, ಜೆಸಿಂತಾ ಪಿರೇರಾ ಶ್ರೀಧರ ಭೋಜ ಪೂಜಾರಿ ಅವರಿಗೆ ಹಾಗೂ ಕೆಲವು ವಿಶೇಷ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೆರವು ಹಸ್ತಾಂತರಿಸಲಾಯಿತು.

ಬ್ಯಾಡ್ಮಿಂಟನ್ ಆಟಗಾರ ಆಯುಷ್‌ ಶೆಟ್ಟಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ವೀಕ್ಷಿತಾ, ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ 600 ಅಂಕ ಗಳಿಸಿದ ಅನನ್ಯಾ ಈಜುಪಟು ಚಿಂತನ್  ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಎಂ.ಆರ್.ಜಿ. ಗ್ರೂಪ್ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಭಾಗವಹಿಸಿದ್ದರು.  ಆರ್.ಜೆ ಪ್ರಸನ್ನ, ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಅಡ್ಯಾರ್ ಪುರುಷೋತ್ತಮ ಭಂಡಾರಿ ನೆರವು ಪಡೆದವರ ಪಟ್ಟಿ ಓದಿದರು. ಅನುಷ್ಕಾ ಗೌರವ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಕ್ರೀಡಾಳುಗಳಿಗೆ, ಪ್ರತಿಭಾವಂತೆ ವಿದ್ಯಾರ್ಥಿಗಳಿಗೂ ಆರ್ಥಿಕ ಸಹಾಯ ನೋವುಂಡವರ ಕಣ್ಣೀರು ಒರೆಸುವ ಕ್ಷಣಗಳಿಗೆ ಸಾಕ್ಷಿಯಾದ ಕಾರ್ಯಕ್ರಮ

ಬಾಲ್ಯದಲ್ಲಿ ಬಡತನ ಮತ್ತು ಸಂಕಷ್ಟದ ಕಾರಣಕ್ಕೆ ನಾನು ಊರುಬಿಟ್ಟು ಬೆಂಗಳೂರಿಗೆ ಹೋಗಬೇಕಾಯಿತು. ಬಡತನದ ‌ಬದುಕು ಬಹಳಷ್ಟನ್ನು ಕಲಿಸಿದೆ.  ಸಂಪಾದನೆಯ ಒಂದಂಶವನ್ನು ಒಳ್ಳೆಯ ಕೆಲಸಕ್ಕೆ ವಿನಿಯೋಗಿಸುತ್ತಿದ್ದೇನೆ
ಕೆ.ಪ್ರಕಾಶ್ ಶೆಟ್ಟಿ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT