ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೂರಾಗ ಇದ್ದದ್ದ ತಿಂದ ಇರ್ತೆವ್ರಿ: ಊರಿನತ್ತ ತೆರಳುತ್ತಿರುವ ವಲಸೆ ಕಾರ್ಮಿಕರು

Last Updated 27 ಏಪ್ರಿಲ್ 2021, 3:43 IST
ಅಕ್ಷರ ಗಾತ್ರ

ಮಂಗಳೂರು: ನಾವು ದಿನಗೂಲಿ ಕೆಲಸ ಮಾಡಾವ್ರು. ದಿನದ ದುಡಿಮಿಯಿಂದ ಜೀವನ ನಡಿಬೇಕು. ಮತ್ತ 14 ದಿನ ಕರ್ಫ್ಯೂ ಮಾಡ್ತಾರಂತ. ಕೆಲಸ ಇಲ್ದ ಹೆಂಗ ಇರೋದ್ರಿ. ನಮ್ಮೂರಿಗೆ ಹೋಗಿ ಇದ್ದದ್ದ ತಿಂದ ಇರ್ತೆವ್ರಿ’

ಊರಿಗೆ ತೆರಳಲು ನಗರದ ಬಿಜೈನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ಕೊಪ್ಪಳದ ಕಾರ್ಮಿಕ ಶಿವಣ್ಣ ಹೇಳಿದ ಮಾತುಗಳಿವು.

ರಾಜ್ಯ ಸರ್ಕಾರ ಬುಧವಾರದಿಂದ 14 ದಿನಗಳ ಕೋವಿಡ್ ಕರ್ಫ್ಯೂ ಜಾರಿ ಮಾಡಿದ್ದು, ನಗರದ ಬಹುತೇಕ ಕಾರ್ಮಿಕರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಸೋಮವಾರ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿಯೇ ಸೇರಿತ್ತು.

ತಮ್ಮೆಲ್ಲ ಸರಕು ಸರಂಜಾಮುಗ ಳೊಂದಿಗೆ ಊರಿಗೆ ಮರಳುತ್ತಿರುವ ಕಾರ್ಮಿಕರು, ಪತ್ನಿ, ಮಕ್ಕಳೊಂದಿಗೆ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ರಾಜ್ಯ ಸರ್ಕಾರ 14 ದಿನ ಕರ್ಫ್ಯೂ ಮಾಡೈತಿ. ಇನ್ನ ನಾವ ಮಂಗಳೂರಿನ್ಯಾಗ ಇರಾಕ ಆಗುದುಲ್ಲ. ಅದಕ್ಕ ಊರಿಗೆ ಹೋಗೊದ ಉತ್ತಮ ಅಂತ ಊರಿಗೆ ಹೊಂಟೇವ್ರಿ. ಇಲ್ಲಿ ಇದ್ದು ಊಟಕ್ಕೆ ಒದ್ದಾಡುಕಿಂತ ನಮ್ಮ ಹಳ್ಯಾಗ ಸಂಬಂಧಿಕರ ಜೊತಿಗಿ ಇದ್ದದ್ದನ್ನ ತಿಂದಕೊಂಡ ಆರಾಮಾಗಿ ಇರ್ತೆವ್ರಿ’ ಎಂದು ಶಿವಣ್ಣ ಹೇಳಿದರು.

‘ನಾವು ದಿನಗೂಲಿ ಮ್ಯಾಲೆ ಕೆಲಸ ಮಾಡಾವ್ರು. 14 ದಿನ ಬಂದ್ ಆದ್ರ ನಮಗ ಕೆಲಸ ಇರುದುಲ್ಲ. ಹಂಗಾಗಿ ದುಡಿಮಿನೂ ಇಲ್ಲ. ರೊಕ್ಕ ಇಲ್ಲ ಅಂದಮ್ಯಾಲ ಹೊಟ್ಟಿಗೆ ಏನು ತಿನ್ನೋದ್ರಿ’ ಎನ್ನುವ ಪ್ರಶ್ನೆ ಗದಗ ಜಿಲ್ಲೆಯ ಮತ್ತೊಬ್ಬ ಕಾರ್ಮಿಕ ಕಾಯಪ್ಪ ಅವರದ್ದು.

‘ಎಲ್ಲಿ ಮಟ ಕರ್ಫ್ಯೂ ಇರತೈತಿ ಅನ್ನೋದ ಗೊತ್ತಿಲ್ಲ. ಹೋದ ವರ್ಷ ಲಾಕ್‌ಡೌನ್‌ನ್ಯಾಗ ತೊಂದರಿ ಅನುಭವಿಸೇವಿ. ಮತ್ತ ಅಂಥಾ ಪರಿಸ್ಥಿತಿ ಬರೋದ ಬ್ಯಾಡ ಅಂತ ಊರಿಗೆ ಹೊಂ ಟೇವಿ. ಎರಡು ಹೊತ್ತಿನ ಊಟಕ್ಕೂ ಗತಿ ಇಲ್ದಂಗ ಆದ್ರ ಏನ್‌ ಮಾಡೋದ್ರಿ’ ಎಂದು ಅವರು ಪ್ರಶ್ನಿಸಿದರು.

‘ಹಳ್ಯಾಗ ಕೆಲಸ ಇಲ್ದಕ್ಕ ನಾವು ಮಂಗಳೂರಿಗೆ ಬಂದಿದ್ದು. ಈಗ ಇಲ್ಲೂ ಕೆಲಸ ಇಲ್ಲ ಅಂದ ಮ್ಯಾಲ ಇಲ್ಲಿ ಇರೋದ್ರಾಗ ಏನ ಅರ್ಥ ಐತಿ. ನಮ್ಮ ಊರಾಗ, ನಮ್ಮ ಮಂದಿ ಜೋಡಿ ಇರ್ತೇವ್ರಿ. ಅದ್ರಾಗ ಈ ಕರ್ಫ್ಯೂ ಎಷ್ಟ ದಿನ ಇರತೈತಿ ಅನ್ನೋದು ಗೊತ್ತಿಲ್ಲ. ಹಿಂಗಾಗಿ ಊರಿಗೆ ಹೊಂಟೇವ್ರಿ’ ಎಂದು ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುವ ವಿಜಯಲಕ್ಷ್ಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT