ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸರಪಣಿ ತುಂಡರಿಸಲು ಸಹಕರಿಸಿ

ವಿಡಿಯೊ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 16 ಮೇ 2021, 2:46 IST
ಅಕ್ಷರ ಗಾತ್ರ

ಮಂಗಳೂರು: ಗ್ರಾಮೀಣ ಭಾಗದಲ್ಲಿ ಕೋವಿಡ್‌ ಸೋಂಕು ಹರಡುವ ಸರಪಣಿ ಯನ್ನು ತುಂಡರಿಸುವ ಜವಾಬ್ದಾರಿ ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್‌ ಸಮಿತಿಯದ್ದಾಗಿದೆ. ಚಾಚೂ ತಪ್ಪದೆ ಇದನ್ನು ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶನಿವಾರ ಇಲ್ಲಿ ಆಯೋಜಿಸಿದ್ದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಸುಳ್ಯ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರ ಜೊತೆ ಅವರು ಮಾತನಾಡಿದರು.

‘ಕೋವಿಡ್ ಎರಡನೇ ಅಲೆಯಲ್ಲಿ ರೂಪಾಂತರಿ ವೈರಸ್‌ನ ಹರಡುವ ಪ್ರಮಾಣ ಮೊದಲಿನ ಅಲೆಗಿಂತ ಹೆಚ್ಚು ಇದೆ. ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಪ್ರಾರಂಭವಾಗಿದೆ. ಗ್ರಾಮೀಣ ಜನರು ಅವಶ್ಯ ಇದ್ದರೆ ಮಾತ್ರ ಮನೆಯಿಂದ ಹೊರಬರಬೇಕು. ಸೋಂಕಿನ ಬಗ್ಗೆ ತಿಳಿವಳಿಕೆ ಹೊಂದುವ ಜತೆಗೆ, ಮಾಸ್ಕ್‌ ಧರಿಸುವುದು, ವೈಯಕ್ತಿಕ ಅಂತರ ಕಾಪಾಡಿಕೊಳ್ಳುವುದನ್ನು ಪಾಲಿಸಿ, ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ವಿನಂತಿಸಿದರು.

ಸೋಂಕು ನಿಯಂತ್ರಣದ ಕುರಿತು ಪ್ರತಿದಿನ ನಡೆಸುವ ಟಾಸ್ಕ್‌ಫೋರ್ಸ್‌ ಸಮಿತಿಯ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬ ಸದಸ್ಯ ಕೈಜೋಡಿಸಬೇಕು. ಸಹಕಾರ ನೀಡದೇ ಇರುವ ಸಮಿತಿಯ ಸದಸ್ಯರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೋವಿಡ್ ಲಕ್ಷಣಗಳಾದ ಶೀತ, ಕೆಮ್ಮು, ಜ್ವರ ಸೇರಿದಂತೆ ಮತ್ತಿತರ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೇ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷೆಯ ಫಲಿತಾಂಶ ಬರುವವರೆಗೆ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ಕೋವಿಡ್‌ನ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಡಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ನಿಗದಿಪಡಿಸಿದಕ್ಕಿಂತ ಹೆಚ್ಚು ಪಡಿತರ ಆಹಾರವನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದನ್ನು ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್ ಮಾತನಾಡಿ, ‘ಕೋವಿಡ್ ಸೋಂಕಿತರ ಮನೆಗೆ ಸಂಪರ್ಕಿಸಲು ದೂರವಿದ್ದಲ್ಲಿ ಒಂದು ತಿಂಗಳ ಅವಧಿಗೆ ಬಾಡಿಗೆಯ ಆಧಾರದ ಮೇಲೆ ವಾಹನವನ್ನು ಪಡೆದುಕೊಳ್ಳಿ. 14ನೇ ಹಣಕಾಸಿನ ಅನುದಾನದಲ್ಲಿ ಇದನ್ನು ಪಾವತಿಸಬೇಕು. ಟಾಸ್ಕ್‌ಫೋರ್ಸ್ ಸಮಿ ತಿಯ ಪ್ರತಿಯೊಬ್ಬ ಸದಸ್ಯ ಇದರ ಬಳಕೆ ಮಾಡಿಕೊಂಡು ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು’ ಎಂದರು.

‘ಕೋವಿಡ್ ಕೇರ್ ಸೆಂಟರ್‌ಗೆ ಒತ್ತು ನೀಡಿ’

ಗ್ರಾಮೀಣ ಭಾಗದ ಹಲವಾರು ಸೋಂಕಿತರ ಮನೆಗಳಲ್ಲಿ ಪ್ರತ್ಯೇಕ ಕೊಠಡಿ ಸೇರಿದಂತೆ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಈ ಕಾರಣ ಸೋಂಕಿತರಿಗೆ ಹೋಂ ಕ್ವಾರಂಟೈನ್‌ಗೆ ಹೆಚ್ಚು ಅವಕಾಶ ನೀಡದೆ, ಹತ್ತಿರದ ಕೋವಿಡ್ ಕೇರ್ ಸೆಂಟರ್‌ಗೆ ಅಥವಾ ಅವಶ್ಯವಿದ್ದಲ್ಲಿ ಆಸ್ಪತ್ರೆಗೆ ವರ್ಗಾಯಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮ ಮಟ್ಟದ ಸಮಿತಿಗಳು ಯೋಜನೆ ರೂಪಿಸಿಕೊಂಡು ಅದಕ್ಕೆ ಬದ್ಧವಾಗಿ ಕೆಲಸ ಮಾಡಿದರೆ ಕೋವಿಡ್ ನಿಯಂತ್ರಣ ಸಾಧ್ಯ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT