ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ವಿಚಾರ ಸ್ವೀಕರಿಸುವ ಮನಃಸ್ಥಿತಿ‌‌‌ ಬೆಳೆಸಿಕೊಳ್ಳಿ: ದಿನೇಶ್ ಗುಂಡೂರಾವ್

Published 12 ಜನವರಿ 2024, 5:48 IST
Last Updated 12 ಜನವರಿ 2024, 5:48 IST
ಅಕ್ಷರ ಗಾತ್ರ

ಮಂಗಳೂರು: ಯಾವುದೇ ಧರ್ಮವಾಗಲಿ, ವ್ಯಕ್ತಿಯಾಗಲಿ ಹೇಳುವ ಒಳ್ಳೆಯ ವಿಚಾರಗಳು ಸಮಾಜಕ್ಕೆ ಪ್ರೇರಕವಾದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಕೂಡ ಇದನ್ನೇ ಹೇಳಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಇಲ್ಲಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಧ್ಯಾತ್ಮದ ತಳಹದಿ, ವಿವೇಚನೆ, ವೈಜ್ಞಾನಿಕ ಮನೋಭಾವ ಈ ಮೂರು ಅಂಶಗಳನ್ನು ಅಳವಡಿಸಿಕೊಂಡರೆ ವ್ಯಕ್ತಿ ಪರಿಪೂರ್ಣ ವ್ಯಕ್ತಿತ್ವ‌‌ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರು ತಮ್ಮ ಜೀವನದಲ್ಲಿ ಇದನ್ನೇ ಅಳವಡಿಸಿಕೊಂಡಿದ್ದರು. ಹೀಗಾಗಿ ಇಂದಿಗೂ ಅವರ ವಿಚಾರಗಳು ವೈಚಾರಿಕ ಬೆಳಕಾಗಿ‌ ಸಮಾಜವನ್ನು ಮುನ್ನಡೆಸುತ್ತಿವೆ ಎಂದರು.

ವಿವೇಕಾನಂದರು ಧರ್ಮದಲ್ಲಿ ಹೊಸ ಚೈತನ್ಯ ತುಂಬುವ ಕಾರ್ಯ ಮಾಡಿದರು. ಜಗತ್ತಿನ ಎಲ್ಲೆಡೆಯ ಒಳ್ಳೆಯ ವಿಚಾರಗಳನ್ನು ಸ್ವೀಕರಿಸಬೇಕು, ನಮ್ಮಲ್ಲಿನ ಒಳ್ಳೆಯ ವಿಚಾರಗಳನ್ನು ಹಂಚಬೇಕು. ಯುವಜನರಲ್ಲಿ ಸತ್ಯ ತಿಳಿದುಕೊಳ್ಳುವ ಕುತೂಹಲ ಇರಬೇಕು. ಇದನ್ನು ನಿಯಂತ್ರಿಸುವ‌ ಕೆಲಸ ಆಗಬಾರದು ಎಂದು ವಿವೇಕಾನಂದರು ನಂಬಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಾಹಿತಿ ಯುಗದಲ್ಲಿ ಬೇಕಾದ, ಬೇಡದ ಮಾಹಿತಿಗಳು ಮೊಬೈಲ್ ಫೋನ್‌ನಲ್ಲಿ ಬಂದು ಬೀಳುತ್ತವೆ. ಅದರಲ್ಲಿ ಯಾವುದು ಸತ್ಯ, ಯಾವುದನ್ನು ಸ್ವೀಕರಿಸಬೇಕು ಎಂಬ ವಿವೇಚನೆಯನ್ನು ‌ಯುವಜನರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜೀ, ಸ್ವಾಮಿ ಸರಸ್ವತಾನಂದಜೀ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮುಖಂಡ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎನ್. ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT