ಸೋಮವಾರ, ಜೂಲೈ 6, 2020
28 °C
ಜಾಗೃತಿ ಕಾರ್ಯಕ್ರಮ ತೀವ್ರಗೊಳಿಸಲು ಸಚಿವ ಕೋಟ ಸೂಚನೆ

ಕೋವಿಡ್‌–19 ನಿಯಂತ್ರಣಕ್ಕೆ ಸಹಕರಿಸಿ: ಜನರಲ್ಲಿ ಸಚಿವರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್ ಯಶಸ್ವಿಗೊಳಿಸಲು ಜನರ ಸಹಕಾರ ಅಗತ್ಯವಾಗಿದೆ. ಜನರು ಸ್ವಯಂ ಕರ್ಫ್ಯೂಗೆ ಒಳಗಾಗಿ, ಕೊರೊನಾ ಸಾಂಕ್ರಾಮಿಕ ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಡೆಂಗಿ, ಮಲೇರಿಯಾ ವ್ಯಾಪಿಸದಂತೆ ಗ್ರಾಮ ಪಂಚಾಯಿತಿಗಳು ಸ್ಥಳೀಯವಾಗಿ ಮುನ್ನೆಚ್ಚರಿಕೆ ವಹಿಸಬೇಕು. ಕೆಲವೆಡೆ ದಿನಸಿ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಜಾಸ್ತಿ ದರ ವಿಧಿಸಿರುವ ಬಗ್ಗೆ ಸಾರ್ವಜನಿಕರ ದೂರುಗಳು ಬರುತ್ತಿವೆ. ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳ ದರಗಳನ್ನು ಆಗಿಂದಾಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಆರೋಗ್ಯ ಸಮೀಕ್ಷಾ ಕಾರ್ಯಗಳಿಗೆ ಆಶಾ ಕಾರ್ಯಕರ್ತೆಯರೊಂದಿಗೆ ಸಹಕರಿಸಬೇಕು. 2 ನೇ ಹಂತದ ಸಮೀಕ್ಷೆ ನಡೆಯುತ್ತಿದ್ದು, ಇದು ಮಹತ್ವದ್ದಾಗಿದೆ. ಸಾರ್ವಜನಿಕರ ಚಲನವಲನಗಳ ಮಾಹಿತಿ, ಆರೋಗ್ಯ ಸಮೀಕ್ಷೆ ಯಶಸ್ವಿಗೊಳ್ಳಲು ಸಹಕರಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಪಡಿತರ ವಿತರಣೆಯನ್ನು ಪರಿಶೀಲಿಸಿದ ಸಚಿವರು, ಏಪ್ರಿಲ್ ತಿಂಗಳಲ್ಲಿ ಪಡಿತರ ವಿತರಣೆ ಯಶಸ್ವಿಯಾಗಿ ನಡೆದಿದೆ. ಕಾರ್ಡ್ ಇಲ್ಲದವರಿಗೆ ಅಕ್ಕಿ ಕೊಡುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಬೇಕು. ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಜಾರಿಗೆ ತರಬೇಕು. ಕುಡಿಯುವ ನೀರಿನ ಅಗತ್ಯ ಇರುವ ಕಡೆ ಕೊಳವೆಬಾವಿಗಳನ್ನು ಕೊರೆಯಲು ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು.

ಕೊರೊನಾ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ₹20ಸಾವಿರ ಅನುದಾನ ನೀಡಲಾಗಿದೆ. ಇದರಲ್ಲಿ ವಿವಿಧ ಜಾಗೃತಿ ಮೂಡಿಸುವ ಕಾರ್ಯವನ್ನು ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಡಾ.ಆರ್‌.ಸೆಲ್ವಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.