ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತರ ಕಡೆಗಣನೆ: ಐವನ್‌ ಆರೋಪ

Last Updated 4 ಫೆಬ್ರುವರಿ 2023, 15:20 IST
ಅಕ್ಷರ ಗಾತ್ರ

ಮಂಗಳೂರು: ‘ಬಜೆಟ್‌ನಲ್ಲಿ ಅನುದಾನ ಒದಗಿಸುವಾಗ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರನ್ನು ಕಡೆಗಣಿಸಿದೆ. 2022–23ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹ 5020 ಕೋಟಿ ಅನುದಾನ ನೀಡಿದ್ದ ಕೇಂದ್ರ ಸರ್ಕಾರ, 2023–24ನೇ ಸಾಲಿನಲ್ಲಿ ಈ ಮೊತ್ತವನ್ನು ₹ 3097ಕ್ಕೆ ಕಡಿತಗೊಳಿಸಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿಸೋಜ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು,‘2018–19ರಲ್ಲಿ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ₹ 3500 ಕೋಟಿ ಅನುದಾನ ಮೀಸಲಿಟ್ಟಿತ್ತು. ಕೇಂದ್ರವು 2023–24ರಲ್ಲಿ ಈ ಉದ್ದೇಶಕ್ಕಾಗಿ ಮೀಸಲಿದ್ದ ಅನುದಾನ ಅದಕ್ಕಿಂತಲೂ ಕಡಿಮೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 19ರಷ್ಟು ಇರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಕನಿಷ್ಠ ಪಕ್ಷ ₹ 20 ಸಾವಿರ ಕೋಟಿ ಅನುದಾನವನ್ನಾದರೂ ಮೀಸಲಿಡಬೇಕಿತ್ತು’ ಎಂದರು.

‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೂ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳ ಅನುದಾನವನ್ನು ₹ 1,517 ಕೋಟಿಗೆ ಇಳಿಸಿದೆ. 2019–20ನೇ ಸಾಲಿನಲ್ಲಿ ಪ್ರಕಟಿಸಲಾದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಇನ್ನೂ ರಚಿಸಿಲ್ಲ. ಈ ಸಲದ ಬಜೆಟ್‌ನಲ್ಲಾದರೂ ಈ ನಿಗಮ ರಚಿಸಿ ಕನಿಷ್ಠ ₹ 500 ಕೋಟಿ ಅನುದಾನ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಆ ಬಳಿಕ ಕೋಮು ಸೌಹಾರ್ದ ಕದಡುವ ಪ್ರಯತ್ನಗಳು ತನ್ನಿಂದ ತಾನೆ ಕಡಿಮೆ ಆಗಲಿವೆ. ಈಗಿನ ಸರ್ಕಾರದ ಆಯಕಟ್ಟಿನ ಜಾಗದಲ್ಲಿರುವವರೇ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಇಂತಹ ಕೋಮುದ್ವೇಷ ಬೆಳೆಸಲು ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದರು.

ಕರಾವಳಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಿರುವ ಪ್ರಣಾಳಿಕೆಯ ಮುಖ್ಯಾಂಶಗಳನ್ನು ಅವರು ಬಿಡುಗಡೆ ಮಾಡಿದರು. ‘ಮಾ 15ರ ಒಳಗೆ ಜಿಲ್ಲೆಯ ಪ್ರತಿ ಮನೆಗೂ ಇದನ್ನು ತಲುಪಿಸಿ ಸ್ವೀಕೃತಿ ಪಡೆಯಲಿದ್ದಾರೆ. ಈ ಸಲುವಾಗಿ ಪ್ರತಿ ಬೂತ್‌ಗೆ 20 ಕಾರ್ಯಕರ್ತರನ್ನು ನೇಮಿಸಿದ್ದೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್‌ ಡಿಸೋಜ, ಪಕ್ಷದ ಮುಖಂಡರಾದ ಶಾಹುಲ್‌ ಹಮೀದ್‌, ಶುಭೋದಯ ಆಳ್ವ, ರಮಾನಂದ ಪೂಜಾರಿ, ಸಬಿತಾ ಮಿಸ್ಕಿತ್‌, ವಿವೇಕರಾಜ್‌, ಸಿ.ಎ.ಮುಸ್ತಾಫಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT