ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಬಿರು ಬಿಸಿಲ ನಡುವೆಯೂ ಪ್ರವಾಸಿಗರ ಪ್ರವಾಹ

ಪ್ರವಾಸಿ ತಾಣಗಳಿಗೆ ಕಳೆದ ವರ್ಷಗಳಿಗಿಂತ ದುಪ್ಪಟ್ಟು ಪ್ರವಾಸಿಗರು
Published 22 ಏಪ್ರಿಲ್ 2024, 7:39 IST
Last Updated 22 ಏಪ್ರಿಲ್ 2024, 7:39 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ವರ್ಷಗಳಿಗೆ ಹೋಲಿಸಿದರೆ ಬಿಸಿಲಿನ ಭರಾಟೆ ಈ ವರ್ಷ ತುಸು ಜಾಸ್ತಿಯೇ ಇತ್ತು. ಆದಾಗ್ಯೂ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಈ ಪ್ರವಾಸಿ ಋತುವಿನಲ್ಲಿ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಸಲ ದುಪ್ಪಾಟ್ಟಾಗಿದೆ.

ಸಾಮಾನ್ಯವಾಗಿ ನವೆಂಬರ್‌ ತಿಂಗಳಿನಿಂದ ಏಪ್ರಿಲ್‌ವರೆಗೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಜಾಸ್ತಿ ಇರುತ್ತದೆ. ಈ ಸಲ ಈ ಪ್ರವಾಸಿ ಋತುವಿನುದ್ದಕ್ಕೂ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕಿದ್ದವು. ಪ್ರವಾಸೋದ್ಯಮ ಇಲಾಖೆ ಕಲೆ ಹಾಕಿದ ಮಾಹಿತಿಗಳ ಪ್ರಕಾರ ಧಾರ್ಮಿಕ ಪ್ರವಾಸಿ ಕೇಂದ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಕೊಡ್ಯಡ್ಕ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ಈಚಿನ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಸಲ ದುಪ್ಪಟ್ಟಿಗಿಂತಲೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2023ರ ಜನವರಿಯಲ್ಲಿ 3.42 ಲಕ್ಷ, ಫೆಬ್ರುವರಿಯಲ್ಲಿ  3.15 ಲಕ್ಷ ಹಾಗೂ  ಮಾರ್ಚ್‌ ತಿಂಗಳಿನಲ್ಲಿ 5.48 ಲಕ್ಷ ಭಕ್ತರು ಭೇಟಿ ನೀಡಿದ್ದರು. 2024ರಲ್ಲಿ ಭಕ್ತರ ಸಂಖ್ಯೆ ಎರಡು ಪಟ್ಟಿಗಿಂತಲೂ ಹೆಚ್ಚಾಗಿದೆ.  2024ರ ಜನವರಿ ಜನವರಿ, ಫೆಬ್ರುವರಿ ಮಾರ್ಚ್‌ ತಿಂಗಳುಗಳಲ್ಲಿ ಕ್ರಮವಾಗಿ 9.15 ಲಕ್ಷ, 8.95 ಲಕ್ಷ ಹಾಗೂ 8.90 ಲಕ್ಷ ಮಂದಿ ಇಲ್ಲಿ ದೇವರ ದರ್ಶನ ಪಡೆದಿದ್ದಾರೆ.

ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಇದೇ ರೀತಿ ಹೆಚ್ಚಳವಾಗಿದೆ. ಇಲ್ಲಿಗೆ 2023ರ ಜನವರಿ ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳುಗಳಲ್ಲಿ ಕ್ರಮವಾಗಿ 3.12 ಲಕ್ಷ, 3.15 ಲಕ್ಷ ಹಾಗೂ 3.11 ಲಕ್ಷ ಭಕ್ತರು ಭೇಟಿ ನೀಡಿದ್ದರೆ, 2024ರಲ್ಲಿ ಈ ಮೂರು ತಿಂಗಳುಗಳಲ್ಲಿ 7.65 ಲಕ್ಷ, 7.89 ಲಕ್ಷ ಹಾಗೂ 8.45 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಧರ್ಮಸ್ಥಳದಲ್ಲೂ ಹೆಚ್ಚು ಕಡಿಮೆ ಇಷ್ಟೇ ಪ್ರಮಾಣದಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ.

ಜಿಲ್ಲೆಯ ಕಡಲ ಕಿನಾರೆಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಭಾರಿ ಹೆಚ್ಚಳ ಕಂಡು ಬಂದಿದೆ. ಕಿನಾರೆಗಳು ವಾರಾಂತ್ಯಗಳಲ್ಲಿ ಹಾಗೂ ಇತರ ರಜಾದಿನಗಳಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿವೆ.

ಪಣಂಬೂರು ಕಡಲ ಕಿನಾರೆಗೆ 2023ರ ಜನವರಿ, ಫೆಬ್ರುವರಿ ಹಾಗೂ ಮಾರ್ಚ್ ತಿಂಗಳುಗಳಲ್ಲಿ ಕ್ರಮವಾಗಿ 1.05 ಲಕ್ಷ, 1.06 ಲಕ್ಷ ಹಾಗೂ 1.10 ಲಕ್ಷ ದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. 2024ರ ಮೊದಲ ಮೂರು ತಿಂಗಳುಗಳಲ್ಲಿ ಕ್ರಮವಾಗಿ 2.25 ಲಕ್ಷ, 2.65 ಹಾಗೂ 1.85 ಲಕ್ಷ ಪ್ರವಾಸಿಗರು ಬಂದು ಹೋಗಿದ್ದಾರೆ. ತಣ್ಣೀರುಬಾವಿ ಕಡಲ ಕಿನಾರೆಗೆ 2023ರ ಜನವರಿಯಲ್ಲಿ 84,500, ಫೆಬ್ರುವರಿಯಲ್ಲಿ 92 ಸಾವಿರ ಹಾಗೂ ಮಾರ್ಚ್‌ನಲ್ಲಿ 84,500 ಪ್ರವಾಸಿಗರು ಭೇಟಿ ನೀಡಿದ್ದರು. 2024ರ ಜನವರಿಯಲ್ಲಿ 2.15 ಲಕ್ಷ, ಫೆಬ್ರುವರಿಯಲ್ಲಿ 2.25 ಲಕ್ಷ ಹಾಗೂ ಮಾರ್ಚ್‌ನಲ್ಲಿ 1.56 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.

‘ಈ ಸಲದ ಬಿಸಿಲ ಝಳವನ್ನು ನೋಡುವಾಗ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಹಿಂದೆಂದಿಗಿಂತ ಹೆಚ್ಚು ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳನ್ನು ಸಂದರ್ಶಿಸುತ್ತಿದ್ದಾರೆ’ ಎನ್ನುತ್ತಾರೆ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ಸುಮಾರು 40 ಪ್ರವಾಸಿ ತಾಣಗಳನ್ನು ಗುರುತಿಸಿದ್ದು, ಅಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಕ್ರಮವಹಿಸಿದೆ. ಬೇಸಿಗೆಯಲ್ಲಿ ಪ್ರವಾಸಿಗರಿಗೆ ನೀರಿನ ಕೊರತೆ ಎದುರಾಗದಂತೆ ಸ್ಥಳೀಯ ಸಂಸ್ಥೆಗಳು ವ್ಯವಸ್ಥೆ ಕಲ್ಪಿಸಿವೆ.

ಜಿಲ್ಲೆಯಲ್ಲಿ 2019ರಲ್ಲಿ ಬೇಸಿಗೆಯಲ್ಲಿ ನೀರಿನ ತೀವ್ರ ಅಭಾವ ಎದುರಾಗಿತ್ತು. ಆಗ ಕೆಲವು  ಪ್ರವಾಸಿ ಕೇಂದ್ರಗಳೂ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದವು. ಕೆಲವು ಧಾರ್ಮಿಕ ಕೇಂದ್ರಗಳು ಭಕ್ತರು ಪ್ರವಾಸವನ್ನು ಮುಂದಕ್ಕೆ ಹಾಕುವಂತೆ ಕೋರಿದ್ದವು. ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಗಳಲ್ಲಿ ಭಕ್ತರ ಸ್ನಾನಕ್ಕೂ ನೀರಿಲ್ಲದ ಸ್ಥಿತಿ ಎದುರಾಗಿತ್ತು. ಈ ಸಲ ಬೇಸಿಗೆಯಲ್ಲೂ ಪ್ರವಾಸಿ ತಾಣಗಳಲ್ಲಿ ಎಲ್ಲೂ ನೀರಿನ ಸಮಸ್ಯೆ ಅಷ್ಟಾಗಿ ಕಾಣಿಸಿಕೊಂಡಿಲ್ಲ.   

‘ಜಿಲ್ಲೆಯ ಯಾವ ಪ್ರವಾಸಿ ಕೇಂದ್ರದಲ್ಲೂ ಕುಡಿಯುವ ನೀರಿನ ಕೊರತೆ ಎದುರಾದ ಬಗ್ಗೆ ಇದುವರೆಗೆ ನಮಗೆ ದೂರು ಬಂದಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.

ಪಣಂಬೂರು ಕಡಲ ಕಿನಾರೆಯಲ್ಲಿ ಪ್ರವಾಸಿಗರ ದಂಡು – ಪ್ರಜಾವಾಣಿ ಚಿತ್ರ
ಪಣಂಬೂರು ಕಡಲ ಕಿನಾರೆಯಲ್ಲಿ ಪ್ರವಾಸಿಗರ ದಂಡು – ಪ್ರಜಾವಾಣಿ ಚಿತ್ರ
ಪಣಂಬೂರು ಕಡಲ ಕಿನಾರೆಯಲ್ಲಿ ಪ್ರವಾಸಿಗರ ದಂಡು – ಪ್ರಜಾವಾಣಿ ಚಿತ್ರ
ಪಣಂಬೂರು ಕಡಲ ಕಿನಾರೆಯಲ್ಲಿ ಪ್ರವಾಸಿಗರ ದಂಡು – ಪ್ರಜಾವಾಣಿ ಚಿತ್ರ
ಪ್ರವಾಸಕ್ಕೆ ‘ಶಕ್ತಿ’ ತುಂಬಿದ ಉಚಿತ ಪ್ರಯಾಣ
ರಾಜ್ಯ ಸರ್ಕಾರ ಶಕ್ತಿ ಯೋಜನೆ ಆರಂಭಿಸಿದ ಬಳಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮಹಿಳೆಯರ ಪ್ರಮಾಣ ಗಣನೀಯವಾಗಿ ಹೆಚ್ಚಳ ಕಂಡಿದೆ. ಜಿಲ್ಲೆಯಲ್ಲಿ ಈಸಲ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುವುದಕ್ಕೂ ಈ ಯೋಜನೆ ಚಾಲಕ ಶಕ್ತಿಯಾಗಿರುವುದನ್ನು ಅಲ್ಲಗಳೆಯಲಾಗದು ಎನ್ನುತ್ತಾರೆ ಅಧಿಕಾರಿಗಳು.
ವೇಣೂರು: 1.26 ಲಕ್ಷ ಮಂದಿ ಭೇಟಿ
ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿಯ ಮಹಾಮಸ್ತಕಾಭಿಷೇಕ  ಫೆ.22ರಿಂದ ಮಾ.1ರವರೆಗೆ ನೆರವೇರಿತ್ತು. 2024ರ ಫೆಬ್ರುವರಿ ತಿಂಗಳೊಂದರಲ್ಲೇ 1.26 ಲಕ್ಷ ಭಕ್ತರು ವೇಣೂರಿಗೆ ಭೇಟಿ ನೀಡಿದ್ದಾರೆ ಎನ್ನುತ್ತವೆ ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT