ಗುರುವಾರ , ಮೇ 28, 2020
27 °C

ಅನ್ನದಾತನ ಹಿತ ಕಾಯ್ದ ಬಿಜೆಪಿ ಸರ್ಕಾರ: ನಳಿನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್‌ ಸಂಕಷ್ಟಕ್ಕೆ ಒಳಗಾದ ರೈತರ ಹಿತರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹತ್ವದ ಯೋಜನೆಗಳನ್ನು ಘೋಷಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ₹20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಕೃಷಿ ಮೂಲ ಸೌಕರ್ಯಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ₹1 ಲಕ್ಷ ಕೋಟಿ ಹಂಚಿಕೆ ಮಾಡಿರುವುದು ಅನ್ನದಾತನಿಗೆ ನೆರವಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.

ಮೀನುಗಾರರಿಗೆ ₹20 ಸಾವಿರ ಕೋಟಿ ಮೀಸಲಿರಿಸಿದ್ದು, ಕರ್ನಾಟಕದ ಕರಾವಳಿಯ ಮೀನುಗಾರರಿಗೂ ಇದರ ಪ್ರಯೋಜನ ದೊರೆಯಲಿದೆ. ಮತ್ಸೋದ್ಯಮ ಕ್ಷೇತ್ರದಲ್ಲಿ 65 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿರುವುದು ಕರಾವಳಿಗೆ ವರದಾನವಾಗಲಿದೆ ಎಂದಿದ್ದಾರೆ.

ಡೇರಿ ಉತ್ಪನ್ನಗಳಿಗೆ ಗುಣಮಟ್ಟ ಹೆಚ್ಚಳಕ್ಕೆ ₹15 ಸಾವಿರ ಕೋಟಿ ಮೀಸಲಿಟ್ಟಿರುವುದು ಹೈನುಗಾರಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಕೃಷಿ ಮಾರುಕಟ್ಟೆಗೆ ಸುಧಾರಣೆ ತರಲು ಕೇಂದ್ರ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ರೈತರು, ಕಾರ್ಮಿಕರು ಸೇರಿದಂತೆ ದುಡಿಯುವ ಮಂದಿಗೆ ₹1,610 ಕೋಟಿ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎರಡನೇ ಹಂತದಲ್ಲಿ ತರಕಾರಿ ಬೆಳೆಗಾರರ ಹಾಗೂ ನೇಕಾರರ ಸಮಸ್ಯೆಗೆ ಸ್ಪಂದಿಸಿ ₹162 ಕೋಟಿ ಪ್ಯಾಕೇಜ್ ಘೋಷಿಸಿ ನೆರವಿಗೆ ನಿಂತಿದ್ದಾರೆ ಎಂದು ಹೇಳಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರಿಗೆ ವರದಾನವಾಗಲಿದೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಯೋಗ್ಯ ಧಾರಣೆ ದೊರೆಯುವ ಅವಕಾಶ ಕಲ್ಪಿಸಿದಂತಾಗಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ದುಡಿದ ಆಶಾ ಕಾರ್ಯಕರ್ತೆಯರಿಗೆ ₹3 ಸಾವಿರ ಪ್ರೋತ್ಸಾಹಧನ ಘೋಷಿಸಿರುವುದು ಸ್ವಾಗತಾರ್ಹ ಎಂದು ನಳಿನ್‌ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.