ಶನಿವಾರ, ಅಕ್ಟೋಬರ್ 1, 2022
20 °C

ಎಲ್ಲ ಹತ್ಯೆ ಪ್ರಕರಣ ಎನ್‌ಐಎ ತನಿಖೆಗೆ ನೀಡಿ: ಮುಸ್ಲಿಂ ಐಕ್ಯತಾ ವೇದಿಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್ (ದಕ್ಷಿಣ ಕನ್ನಡ): ಜಿಲ್ಲೆಯಲ್ಲಿ ಈಚೆಗೆ ನಡೆದಿರುವ ಮೂರು ಹತ್ಯೆ ಪ್ರಕರಣಗಳಲ್ಲಿ ಒಂದನ್ನು ಮಾತ್ರ ಎನ್‌ಐಎ ತನಿಖೆಗೆ ನೀಡಲಾಗಿದ್ದು, ಇನ್ನುಳಿದ ಎರಡು ಪ್ರಕರಣಗಳನ್ನೂ ಎನ್‌ಐಎ ತನಿಖೆಗೆ ವಹಿಸಬೇಕು. ಹತ್ಯೆಯಾಗಿರುವ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೀಡಿದಂತೆ, ಇನ್ನಿಬ್ಬರು ಯುವಕರ ಕುಟುಂಬಗಳಿಗೂ ತಲಾ ₹ 25 ಲಕ್ಷ ಪರಿಹಾರ ನೀಡಬೇಕು. 10 ದಿನಗಳೊಳಗೆ ಈ ಕ್ರಮ ಆಗದಿದ್ದಲ್ಲಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ವಲಯ ಎಚ್ಚರಿಸಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಕ್ಯತಾ ವೇದಿಕೆಯ ಕಾನೂನು ಸಲಹೆಗಾರ ಉಮರ್ ಫಾರೂಕ್‌, ‘ಮೂರು ಹತ್ಯೆ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ. ಮುಖ್ಯಮಂತ್ರಿ, ಗೃಹ ಸಚಿವರು, ಶಾಸಕರು, ಸಂಸದರು ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿಂದ 5 ಕಿ.ಮೀ ದೂರದಲ್ಲಿದ್ದ ಹತ್ಯೆಯಾದ ಇನ್ನೊಬ್ಬ ಯುವಕ ಮಸೂದ್ ಮನೆಗೆ ಭೇಟಿ ನೀಡಿಲ್ಲ. ಸುರತ್ಕಲ್‌ನಲ್ಲಿ ಹತ್ಯೆಯಾದ ಫಾಝಿಲ್ ಮನೆಗೂ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ’ ಎಂದರು.

‘ಎನ್ಐಎಗೆ ಪ್ರಕರಣ ವರ್ಗಾಯಿಸುವುದಾದರೆ ಮೂರು ಪ್ರಕರಣಗಳನ್ನೂ ವರ್ಗಾಯಿಸಬೇಕು ಅಥವಾ ರಾಜ್ಯದ ಉನ್ನತ ಪೊಲೀಸ್‌ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರ ತಂಡ ರಚಿಸಿ ತನಿಖೆ ನಡೆಸಬೇಕು’ ಎಂದರು.

ಫಾಝಿಲ್‌ ಹತ್ಯೆಯಾಗಿರುವ ದಿನ ಮಧ್ಯಾಹ್ನ ಸುರತ್ಕಲ್ ಪೊಲೀಸ್ ಠಾಣಾಧಿಕಾರಿಗೆ ಸಲಾಂ ಕಾನ ಎಂಬ ಉದ್ಯೋಗಿಯೊಬ್ಬರು ತಮ್ಮನ್ಉ ಹಿಂಬಾಲಿಸಿಕೊಂಡು ಬಂದು ವಾಹನವೊಂದು ತಿರುಗಾಡುತ್ತಿದೆ ಎಂಬ ಮಾಹಿತಿ ನೀಡಿರುವುದರ ತನಿಖೆಯಾಗಿದೆಯೇ? ಆ ವಾಹನದಲ್ಲಿ ತಿರುಗಾಡಿದವರು ಯಾರು ಎನ್ನುವುದನ್ನು ಪತ್ತೆ ಹಚ್ಚಿ ಕಾನೂನು ರೀತಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು. ಪ್ರವೀಣ್ ಹತ್ಯೆಯ ನಂತರ ಕೆಲವು ವಾಹನಗಳು ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದವು ಎನ್ನುವ ಗುಮಾನಿ ಕೇಳಿಬಂದಿದ್ದು, ಪೊಲೀಸ್ ಇಲಾಖೆ ಎಷ್ಟು ವಾಹನ ಜಪ್ತಿ ಮಾಡಿದೆ, ಎಷ್ಟು ಮಂದಿಯನ್ನು ಬಂಧಿಸಿದೆ ಎಂಬ ವಿವರ ಬಹಿರಂಗ ಗೊಳಿಸಬೇಕು ಎಂದು ಆಗ್ರಹಿಸಿದರು.

ಫಾಝಿಲ್ ಹಂತಕರು ಹತ್ಯೆ ನಡೆಸಲು ಉಪಯೋಗಿಸಿದ ಕಾರು ನಿರ್ಜನ ಪ್ರದೇಶದಲ್ಲಿ ಪರಾರಿಯಾದ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಹಂತಕರನ್ನು ಬಂಧಿಸಿ ಈವರೆಗೆ ನಂತರ ಉಪಯೋಗಿಸಿದ ವಾಹನ ಮತ್ತು ಅವಿತು ಕೊಂಡಿರುವ ಸ್ಥಳ ಮತ್ತು ಪರಾರಿಗೆ ಸಹಕರಿಸಿದ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಹತ್ಯೆಯ ಹಿಂದಿರುವ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರವಾಗಿದೆಯೇ ಎಂಬ ಸಂಶಯ ಬರುತ್ತದೆ ಎಂದು ಆರೋಪಿಸಿದರು.

ಮೃತ ಪಾಝೀಲ್‍ ತಂದೆ ಉಮರ್ ಫಾರೂಕ್, ಚೊಕ್ಕಬೆಟ್ಟು ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಅಝೀಝ್ ದಾರಿಮಿ, ಕೃಷ್ಣಾಪುರ ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಂ. ಮಮ್ತಾಜ್‍ಅಲಿ, ಕೃಷ್ಣಾಪುರ ಬದ್ರಿಯ ಜುಮ್ಮಾ ಮಸೀದಿಯ ಖತೀಬರಾದ ಉಮರ್ ಫಾರೂಕ್, ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಅಶ್ರಫ್ ಬದ್ರಿಯ, ಪ್ರಧಾನ ಕಾರ್ಯದರ್ಶಿ ಕೆ ಶರೀಫ್, ಅಬುಬಕ್ಕರ್ ಕುಳಾಯಿ, ಜಲೀಲ್ ಉಪಸ್ಥಿತರಿದ್ದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು