ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೂರಿ ಇರಿತಕ್ಕೆ ಒಳಗಾದವರಿಗೆ ಪರಿಹಾರ ಕೊಡಿ: ನಳಿನ್‌

Published 12 ಜೂನ್ 2024, 6:54 IST
Last Updated 12 ಜೂನ್ 2024, 6:54 IST
ಅಕ್ಷರ ಗಾತ್ರ

ಮಂಗಳೂರು: ‘ಬೋಳಿಯಾರ್‌ನಲ್ಲಿ ಚೂರಿ ಇರಿತಕ್ಕೆ ಒಳಗಾದ ಬಿಜೆಪಿ ಕಾರ್ಯಕರ್ತರಾದ ಹರೀಶ್‌ ಹಾಗೂ ನಂದ ಕುಮಾರ್‌ ಅವರಿಗೆ ಸರ್ಕಾರ ಪರಿಹಾರ ನೀಡಬೇಕು. ಭಾರತ್‌ ಮಾತಾ ಕಿ ಜೈ ಘೋಷಣೆ ಕೂಗಿದವರ ವಿರುದ್ಧವೂ ಸರ್ಕಾರ ಎಫ್‌ಐಆರ್‌ ದಾಖಲಿಸಿದ್ದು, ಅದನ್ನು ಕೈಬಿಡಬೇಕು’ ಎಂದು ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್‌ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಇಲ್ಲಿ ಮಂಗಳವಾರ ಮಾತನಾಡಿದ ಅವರು, ‘ಈ ದೇಶದಲ್ಲಿ ಭಾರತ್ ಮಾತಾ ಕಿ ಜೈ ಹಾಕುವುದೂ ತಪ್ಪೇ. ಇಲ್ಲಿ ಇಂತಹ ಘೋಷಣೆ ನಿಷಿದ್ಧವೇ. ಸರ್ಕಾರಿ ಕಾರ್ಯಕ್ರಮದಲ್ಲಿಈ ಘೋಷಣೆ ಹಾಕಿದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೀರಾ. ಈ ಘೋಷಣೆಯನ್ನೂ ಮತಾಂಧ ಶಕ್ತಿಗಳು ಏಕೆ ವಿರೋಧಿಸುತ್ತಿವೆ. ಬೋಳಿಯಾರ್‌ ಪಾಕಿಸ್ತಾನದಲ್ಲಿದೆಯೇ. ಈ ರೀತಿ ಹಲ್ಲೆ ನಡೆಸುವುದು ಭಯೋತ್ಪಾದನೆಯಲ್ಲವೇ. ಇಲ್ಲಿ ತುಘಲಕ್‌ ಸರ್ಕಾರ ನಡೆಯುತ್ತಿದೆಯೇ’ ಎಂದು ಪ್ರಶ್ನಿಸಿದರು.

‘ಪ್ರಾರ್ಥನೆಗೆ ಬಂದವರ ಕೈಯಲ್ಲಿ ಶಸ್ತ್ರಾಸ್ತ್ರ ಹೇಗೆ ಬಂದವು.  ಅವರು ಪ್ರಾರ್ಥೆನೆಗೆ ಬರುತ್ತಾರೆಯೇ ಅಥವಾ ಗಲಭೆಗೆ ಪ್ರಚೋದನೆ ನೀಡಲು ಬರುತ್ತಾರೆಯೇ. ಈ ವಿಚಾರವನ್ನು ಮುಖ್ಯಮಂತ್ರಿಯವರು ಹಾಗೂ ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ವಿಡಿಯೊದಲ್ಲಿ ಕಂಡುಬರುವ ಅಷ್ಟೂ ಮಂದಿಯ ವಿರುದ್ಧ ಕ್ರಮವಾಗಬೇಕು‘ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್‌ನ ಕಾರ್ಯಕ್ರಮಗಳಲ್ಲಿ ಮೂರು ಕಡೆ ‘ಪಾಕಿಸ್ತಾನ್ ಜಿಂದಾಬಾದ್‌’ ಘೋಷಣೆ ಕೂಗಲಾಗಿದೆ. ಅವರ ವಿರುದ್ಧ ಕ್ರಮವಾಗಿಲ್ಲ. ವಿಧಾನಸೌಧದಲ್ಲೇ ಈ ಘೋಷಣೆ ಕೂಗಿದವರ ವಿರುದ್ಧ ಏನು ಕ್ರಮವಾಗಿದೆ. ಗೃಹಸಚಿವರು ಅನ್ನ ತಿನ್ನುತ್ತಾರೋ, ಏನು ತಿನ್ನುತ್ತಾರೆ’ ಎಂದು ಪ್ರಶ್ನಿಸಿದರು.

‘ಪಕ್ಷದ ಕಾರ್ಯಕರ್ತರು ಮತ–ಧರ್ಮದ ವಿರುದ್ಧ ಘೋಷಣೆ ಕೂಗಿದ್ದರೆ ಅದನ್ನು ಖಂಡಿಸುತ್ತೇನೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT