ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ವ್ಯವಸ್ಥೆ ಲೋಪ: ಹೋರಾಟವೊಂದೇ ದಾರಿ

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅರುಣ ಶಹಾಪುರ
Last Updated 12 ಜನವರಿ 2020, 14:28 IST
ಅಕ್ಷರ ಗಾತ್ರ

ಮಂಗಳೂರು: ‘ಶಿಕ್ಷಣ ವ್ಯವಸ್ಥೆಯ ಭ್ರಷ್ಟಾಚಾರಕ್ಕೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಪರಿಣಾಮಗಳ ಬಗ್ಗೆ ಯೋಚಿಸದೇ ಸಂಘಟಿತರಾಗಿ ಹೋರಾಡಬೇಕಾಗಿದೆ. ಹೊಸದಾಗಿ ಆರಂಭವಾಗಲಿರುವ ಇ-ಆಫೀಸ್‌ ವ್ಯವಸ್ಥೆ ಒಂದಷ್ಟು ಸಮಸ್ಯೆಗಳನ್ನು ನಿವಾರಿಸುವ ಭರವಸೆಯಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ (ನ್ಯಾಕ್‌) ಆಶ್ರಯದಲ್ಲಿ ನಗರದ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಉಪನ್ಯಾಸಕರ ಸಮಸ್ಯೆಗಳಿಗೆ ಅವರು ಉತ್ತರಿಸಿದರು.

2002 ರಲ್ಲಿ ಅಂದಿನ ಎಸ್‌.ಎಂ ಕೃಷ್ಣ ಸರ್ಕಾರ ತೆಗೆದುಕೊಂಡ 10 ಅಂಶಗಳ ನಿರ್ಣಯದಿಂದ ನೇಮಕಾತಿ, ವೇತನ ಬಿಡುಗಡೆಗೆ ಅಡ್ಡಿಯಾಗಿದೆ. ಜತೆಗೆ ಶಿಕ್ಷಣ ಇಲಾಖೆಯ ಪುನಃಸ್ಥಾಪನೆಯಾಗಬೇಕಿದೆ. ಈ ಕುರಿತು ಇದೇ 14 ರಂದು ಶಿಕ್ಷಣ ಸಚಿವರ ಜತೆ ಮಹತ್ವದ ಸಭೆ ನಡೆಯಲಿದೆ ಎಂದು ತಿಳಿಸಿದರು.

ಸಂಶೋಧನೆಗೆ ಯುಜಿಸಿ ಬಿಡುಗಡೆ ಮಾಡುವ ಸಹಾಯಧನದ ಕೊರತೆ ಕುರಿತು ಸ್ಪಷ್ಟನೆ ನೀಡಿದ ಯುಜಿಸಿ ಸದಸ್ಯ ಡಾ.ಗೋಪಾಲ ರೆಡ್ಡಿ, ‘ಮಾತೃ ಸಂಸ್ಥೆಯ ಒಪ್ಪಿಗೆ, ಅಗತ್ಯ ದಾಖಲೆಗಳು ಮತ್ತು 12ಬಿ ಮಾನ್ಯತೆ ಇದ್ದರೆ ಅನುದಾನಕ್ಕೆ ಸಮಸ್ಯೆಯಾಗುವುದಿಲ್ಲ’ ಎಂದರು.

ಖಾಸಗಿ ಸಂಸ್ಥೆಗಳಲ್ಲಿ ದೊರೆಯುತ್ತಿರುವ ಅತ್ಯಲ್ಪ ವೇತನದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ‘ಸಂಸ್ಥೆಗಳು ತಾವು ಉತ್ತಮ ವೇತನ ನೀಡುತ್ತಿರುವುದಾಗಿ ಯುಜಿಸಿಗೆ ದಾಖಲೆ ಸಲ್ಲಿಸುತ್ತವೆ. ಆದರೆ ಅದರ ಸತ್ಯಾಸತ್ಯತೆ ಪರಿಶೀಲಿಸುವ ವ್ಯವಸ್ಥೆ ಯುಜಿಸಿಯಲ್ಲಿ ಇಲ್ಲ, ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್‌ ಮಾತನಾಡಿ, ‘ವಿಶ್ವವಿದ್ಯಾಲಯ ಸಂಶೋಧನೆಯ ವಿದ್ಯಾರ್ಥಿ ಮೇಲೆ ₹6.94 ಲಕ್ಷ ಖರ್ಚು ಮಾಡುತ್ತಿದೆ. ಆದರೆ ಪೇಟೆಂಟ್‌, ಪ್ರಕಟಣೆ ಅಷ್ಟಾಗಿ ಆಗುತ್ತಿಲ್ಲ. ನಮ್ಮ ಹಕ್ಕು ಪಡೆಯುವ ಕೆಲಸವನ್ನು ಕೂಡ ಯೋಚಿಸಬೇಕು. ಸಂಬಳದ ಸಮಸ್ಯೆಗೆ ನಾವು ಮತ್ತೆ ಮಿನಿಮಮ್‌ ಚೆಕ್‌ ಮೂಲಕ ಸಂಬಳ ಪಾವತಿಯನ್ನು ಒತ್ತಾಯಿಸಿ ಹೋರಾಟ ಮಾಡಬೇಕಿದೆ’ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ನಿರಂಜನ ವಾನಳ್ಳಿ , ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರೊ. ಬಾಲಕೃಷ್ಣ ಭಟ್‌, ಕೆಆರ್‌ಎಂಎಸ್‌ಎಸ್‌ ಕಾರ್ಯದರ್ಶಿ ಡಾ.ಜಿ.ಸಿ. ರಾಜಣ್ಣ, ಎಸ್‌ಡಿಎಂ ಬಿಬಿಎಂ ಕಾಲೇಜಿನ ಪ್ರಾಂಶುಪಾಲೆ ಅರುಣಾ ಕಾಮತ್‌, ನಿರ್ದೇಶಕಿ ಸೀಮಾ ಶೆಣೈ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT