ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಗಾಲ ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಿ: ಜುಬಿನ್

Published 19 ಮೇ 2024, 13:49 IST
Last Updated 19 ಮೇ 2024, 13:49 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ‘ಎರಡು ನದಿಗಳ ಸಂಗಮ ತಾಣವಾಗಿರುವ ಉಪ್ಪಿನಂಗಡಿಯಲ್ಲಿ ಮಳೆಗಾಲದಲ್ಲಿ ಪ್ರವಾಹದ ಭೀತಿಯೂ ಇದ್ದು, ಮುಂಬರುವ ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳ ತಂಡ ಸನ್ನದ್ಧ ಸ್ಥಿತಿಯಲ್ಲಿರಬೇಕು. ಪ್ರಾಕೃತಿಕ ವಿಕೋಪದ ಸಂದರ್ಭ ಅಧಿಕಾರಿಗಳು ನಿರಂತರವಾಗಿ ಕೆಲಸ ಮಾಡಿ ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸಿ ಬರಬೇಕು’ ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ತಿಳಿಸಿದರು.

ಉಪ್ಪಿನಂಗಡಿಯಲ್ಲಿ ಪುತ್ತೂರು ತಾಲ್ಲೂಕು ಮಟ್ಟದ ಪ್ರಾಕೃತಿಕ ವಿಕೋಪದ ಬಗ್ಗೆ ಅಧಿಕಾರಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕು ಮಟ್ಟದಲ್ಲಿ ಈಗಾಗಲೇ ಸಹಾಯವಾಣಿ ಆರಂಭಿಸಲಾಗಿದೆ. ಉಪ್ಪಿನಂಗಡಿಯಲ್ಲೂ ಸಹಾಯವಾಣಿ ಆರಂಭಿಸಲಾಗುವುದು/ ಸಮಸ್ಯೆಗಳಿಳಿದ್ದರೆ ಸಾರ್ವಜನಿಕರು ಸಹಾಯವಾಣಿ 08251 230349ಗೆ ಕರೆ ಮಾಡಬಹುದು. ಕರೆ ತೆಗೆಯದೆ ನಿರ್ಲಕ್ಷ್ಯ ಮಾಡಿದರೆ, ಸಾರ್ವಜನಿಕರ ಸಮಸ್ಯೆಗಳನ್ನು ಕಡೆಗಣಿಸಿದರೆ ಅಂಥ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಲಾಗುವುದು ಎಂದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ನೇತೃತ್ವದಲ್ಲಿ ವಿವಿಧ ಇಲಾಖೆ ಸಿಬ್ಬಂದಿಯನ್ನೊಳಗೊಂಡ ಉಪಸಮಿತಿ ರಚಿಸಲು ನಿರ್ದೇಶನ ನೀಡಲಾಗಿದೆ. ಈ ತಂಡವು ಪರಸ್ಪರ ಸಂಪರ್ಕದಲ್ಲಿದ್ದು, ಮಳೆಗಾಲದಲ್ಲಿ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲಿದೆ. ಅವರು ಸ್ಪಂದಿಸದಿದ್ದರೆ ನನಗೆ ಅಥವಾ ತಹಶೀಲ್ದಾರ್‌ಗೆ ಕರೆ ಮಾಡಿ ತಿಳಿಸಬಹುದು ಎಂದರು.

ಮರ ಬಿದ್ದು ಸಂಚಾರಕ್ಕೆ ತೊಡಕಾದಾಗ ಸಂಚಾರ ಪೊಲೀಸರು ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಮೆಸ್ಕಾಂ ಇಲಾಖೆಯವರು ವಿದ್ಯುತ್ ತಂತಿಗಳಿಗೆ ಸ್ಪರ್ಶಿಸುವ ಮರದ ಗೆಲ್ಲು ತೆರವುಗೊಳಿಸಬೇಕು. ಅರಣ್ಯ ಇಲಾಖೆಯವರು ಅಪಾಯಕಾರಿ ಮರಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಬೇಕು. ಹೂಳು ತುಂಬಿದ ರಾಜಕಾಲುವೆ, ಚರಂಡಿಯಲ್ಲಿ ಸರಾಗವಾಗಿ ಮಳೆ ನೀರು ಹರಿದುಹೋಗುವಂತೆ ಮಾಡಲು ಪಿಡಬ್ಲ್ಯೂಡಿ ಇಲಾಖೆಗೆ, ಗ್ರಾಮ ಪಂಚಾಯಿತಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಗೃಹ ರಕ್ಷಕರನ್ನೊಳಗೊಂಡ ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡವೂ ಮಳೆಗಾಲದಲ್ಲಿ 24 ಗಂಟೆಯೂ ಸನ್ನದ್ಧ ಸ್ಥಿತಿಯಲ್ಲಿರಬೇಕು. ಪೊಲೀಸರು ಬೀಟ್ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು ಎಂದರು.

ಪುತ್ತೂರು ತಹಶೀಲ್ದಾರ್ ಕುಞಿ ಅಹ್ಮದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹನುಮ ರೆಡ್ಡಿ ಮಾತನಾಡಿದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್, ಎಸಿಎಫ್ ಸುಬ್ಬಯ್ಯ ನಾಯ್ಕ, ಪೊಲೀಸ್ ಅಧಿಕಾರಿಗಳಾದ ನಂದಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ
ಸಮಿತಿ ಸದಸ್ಯರಾದ ದೇವಿದಾಸ ರೈ, ಜಿ.ಕೃಷ್ಣರಾವ್ ಆರ್ತಿಲ, ವೆಂಕಪ್ಪ ಪೂಜಾರಿ, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಕೈಲಾರು ರಾಜಗೋಪಾಲ ಭಟ್, ಯು.ಟಿ.ಫಯಾಝ್, ನಾಗೇಶ್ ಪ್ರಭು, ರಶೀದ್ ಮಾತನಾಡಿದರು. ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.

ಚತುಷ್ಪಥ ಕಾಮಗಾರಿ ಸಮಸ್ಯೆ ಸರಿಪಡಿಸಲು ಸೂಚನೆ: ಉಪ್ಪಿನಂಗಡಿ ಪೇಟೆ ಭಾಗದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ, ಕಾಮಗಾರಿಯಿಂದಾಗಿ ಆಗುತ್ತಿದ್ದ ಸಮಸ್ಯೆಗಳನ್ನು 15 ದಿನಗಳೊಳಗೆ ನಿವಾರಿಸಬೇಕು ಎಂದು ಗುತ್ತಿಗೆ ಸಂಸ್ಥೆಯವರಿಗೆ ಸೂಚನೆ ನೀಡಿದ್ದೇನೆ. ಅವರು ಅದಕ್ಕೆ ಒಪ್ಪಿಕೊಂಡಿದ್ದಾರೆ. ಪಾಕೃತಿಕ  ವಿಕೋಪ ಸಂಭವಿಸಿದಾಗ ರಕ್ಷಣೆಯನ್ನು ಪಡೆಯುವ ಬಗ್ಗೆ ಪುತ್ತೂರಿನಲ್ಲಿ ಅಣಕು ಪ್ರದರ್ಶನ ನಡೆಸಲಾಗಿದೆ. ಮುಂದಿನ ವಾರದಲ್ಲಿ ಉಪ್ಪಿನಂಗಡಿಯಲ್ಲೂ ಅಣಕು ಪ್ರದರ್ಶನ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT