ಭಾನುವಾರ, ಫೆಬ್ರವರಿ 16, 2020
31 °C
ಪರಿಸರ ಸಂರಕ್ಷಣೆ ಕುರಿತು ಗಮನ ಸೆಳೆಯಲು ಆಯೋಜನೆ: ಶಶಿಧರ್‌ ಶೆಟ್ಟಿ

ಮಾ.1 ರಂದು ರಾಜ್ಯ ಮಟ್ಟದ ಪರಿಸರ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಜ್ಯಮಟ್ಟದ 2 ನೇ ಪರಿಸರ ಸಮ್ಮೇಳನವನ್ನು ಮಾರ್ಚ್‌ 1 ರಂದು ಇಲ್ಲಿನ ತಣ್ಣೀರುಬಾವಿ ಟ್ರೀ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್)ದ ಮುಖಂಡ ಶಶಿಧರ ಶೆಟ್ಟಿ, ಪರಿಸರ ಸಂರಕ್ಷಣೆ, ಶುದ್ಧ ಗಾಳಿ, ನೀರು, ಆಹಾರ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಅದರ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಮೊದಲ ಸಮ್ಮೇಳನ 2014ರಲ್ಲಿ ನಡೆದಿದ್ದು, ಈಗ ನಡೆಯುತ್ತಿರುವ ಸಮ್ಮೇಳನದಲ್ಲಿ ಪರಿಸರ ಉಳಿವಿನ ದೃಷ್ಟಿಯಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಸುಮಾರು 8 ಸಾವಿರ ಪರಿಸರ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಬುಡಕಟ್ಟು ಜನಾಂಗಗಳ ಭೂಮಿ ಹಕ್ಕು, ಎಂಡೋಪೀಡಿತರ ಬಗ್ಗೆ ಚರ್ಚೆ, ನೀರಾವರಿ ವ್ಯವಸ್ಥೆ ಕುರಿತು ಬಯಲುಸೀಮೆಯ ಹೋರಾಟಗಾರರು ಅಹವಾಲು ಮಂಡಿಸಲಿದ್ದಾರೆ. ಅರಣ್ಯ ಇಲಾಖೆಯ ಕುಂದುಕೊರತೆ, ಅಗತ್ಯವಿರುವ ಅಭಿವೃದ್ಧಿ ಕಾರ್ಯಯೋಜನೆ ಕುರಿತು ಅರಣ್ಯಾಧಿಕಾರಿಗಳು ಮಾತನಾಡಲಿದ್ದಾರೆ. ಪಶ್ಚಿಮ ಘಟ್ಟ ರಕ್ಷಣೆ ಬಗ್ಗೆಯೂ ಚರ್ಚೆ ನಡೆಯಲಿದೆ. ರಾಜಕೀಯ, ಧಾರ್ಮಿಕ ವಿಚಾರಗಳೆಲ್ಲವನ್ನೂ ಮೀರಿ, ಕೇವಲ ಪರಿಸರ ಕುರಿತಾಗಿ ಈ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.

ಪರಿಸರ ಸಮ್ಮೇಳನಕ್ಕೆ ರಾಜ್ಯದ ಎಲ್ಲ ಶಾಸಕರು, ಡಿಎಫ್‌ಒಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಅಧೀನ ಕಾರ್ಯದರ್ಶಿಗಳಿಗೆ ಆಹ್ವಾನ ಪತ್ರ ಕಳುಹಿಸಲಾಗುವುದು. ಎಲ್ಲರೂ ಬಂದು ಚರ್ಚಿಸಿ, ಅಭಿಪ್ರಾಯ ಮಂಡನೆಯಲ್ಲಿ ಪಾಲ್ಗೊಳ್ಳಬಹುದು. ಸಮಸ್ಯೆಗಳ ಕುರಿತು ದಾಖಲೆ ಸಹಿತ ವಾದಗಳ ಮಂಡನೆ ನಡೆಯಲಿದೆ ಎಂದು ತಿಳಿಸಿದರು.

ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಮಾತನಾಡಿ, ‘ಕಳೆದ ನವೆಂಬರ್‌ನಲ್ಲೇ ಜಿಲ್ಲೆಯಲ್ಲಿ 30 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಬರಗಾಲ-ಜಲಪ್ರವಾಹಗಳೆರಡೂ ಜಿಲ್ಲೆಯನ್ನು ಕಾಡುತ್ತಿವೆ. ಹೀಗೇಕೆ ಆಗುತ್ತಿದೆ ಎನ್ನುವ ಅಧ್ಯಯನ ಆಗಿಲ್ಲ. ವನ್ಯಜೀವಿಗಳ ಕಾಯ್ದೆ ಇನ್ನೂ ಕಾರ್ಯಗತವಾಗಿಲ್ಲ’ ಎಂದರು.

ಒಕ್ಕೂಟದ ಪ್ರಮುಖರಾದ ಸ್ವರ್ಣ ಸುಂದರ್ ಆನಂದ, ಪಾಂಗಾಳ, ರೋಶನ್ ಬಾಳಿಗ, ರತ್ನಾಕರ ಸುವರ್ಣ ಇದ್ದರು.

‘ಕೋರ್ಟ್ ಮಾದರಿ ಸಮ್ಮೇಳನ’
ಸಮ್ಮೇಳನವು ಕೋರ್ಟ್ ಮಾದರಿಯಲ್ಲಿ ನಡೆಯಲಿದೆ. 10 ಮಂದಿ ವಕೀಲರು ಭಾಗವಹಿಸಲಿದ್ದಾರೆ. ರವೀಂದ್ರನಾಥ್ ಶ್ಯಾನುಭಾಗ್ ನ್ಯಾಯಾಧೀಶರ ಸ್ಥಾನದಲ್ಲಿರುತ್ತಾರೆ ಎಂದು ಶಶಿಧರ್‌ ಶೆಟ್ಟಿ ತಿಳಿಸಿದರು.

ಪರಿಸರಕ್ಕಾಗಿ ಮುಡಿಪಾಗಿಟ್ಟ ಸುಕ್ರಿಬೊಮ್ಮ ಗೌಡ, ತುಳಸಿ ಗೌಡ, ಸಿದ್ದಿ ಸಮುದಾಯದ ಹೋರಾಟಗಾರ ಡಿಯಾಗೋ ಬಸ್ತ್ಯವ್ ಸಿದ್ದಿ, ಪಾಡ್ದನ ಹಾಡುಗಾರ್ತಿ ಕುತ್ತಾರ್ ತಿಮ್ಮಕ್ಕ, ಸಾಮಾಜಿಕ ಹೋರಾಟಗಾರ ರವೀಂದ್ರನಾಥ ಶ್ಯಾನುಭಾಗ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪರಿಸರಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಪ್ರತಿನಿಧಿಯಾಗಿ ಅಧಿಕಾರಿಗಳನ್ನು ಕಳುಹಿಸಲು ಮನವಿ ಮಾಡಲಾಗಿದೆ. ಪರಿಸರ ಉಳಿಸಲು ಈಗಿರುವ ಕಾನೂನುಗಳ ಕಟ್ಟುನಿಟ್ಟಿನ ಪಾಲನೆ, ಅಗತ್ಯವಾಗಿರುವ ತಿದ್ದುಪಡಿಗಳ ಕುರಿತು ಚರ್ಚಿಸಿ, ನಿರ್ಣಯ ಕೈಗೊಳ್ಳಲಾಗುವುದು. ಇದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು