ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರುಕಟ್ಟೆಗೆ ಆವಕ ಕಡಿಮೆ: ಹೊಸ ಅಡಿಕೆ ದರ ಏರಿಕೆ

Published : 17 ಆಗಸ್ಟ್ 2024, 0:40 IST
Last Updated : 17 ಆಗಸ್ಟ್ 2024, 0:40 IST
ಫಾಲೋ ಮಾಡಿ
Comments

ಮಂಗಳೂರು: ಹೊಸ ಅಡಿಕೆ (ಚಾಲಿ) ದರದಲ್ಲಿ ಏರಿಕೆಯಾಗಿದ್ದು, ಇಲ್ಲಿನ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹400 ಧಾರಣೆ ದೊರೆತಿದೆ.

ಜೂನ್–ಜುಲೈ ತಿಂಗಳಿನಲ್ಲಿ ಕೆ.ಜಿಗೆ ₹375ರಿಂದ ₹385ರ ಆಸುಪಾಸಿನಲ್ಲಿದ್ದ ದರವು ಆಗಸ್ಟ್ ಮೊದಲ ವಾರದಲ್ಲಿ ತುಸು ಏರಿಕೆಯಾಗಿತ್ತು. ಅಡಿಕೆ ವಹಿವಾಟು ನಡೆಸುವ ಕ್ಯಾಂಪ್ಕೊದಲ್ಲಿ ಶುಕ್ರವಾರ ಗರಿಷ್ಠ ದರ ₹390 ಇದ್ದರೆ, ಸುಳ್ಯ ತಾಲ್ಲೂಕು ಬೆಳ್ಳಾರೆಯ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹400 ದರ ದಾಖಲಾಯಿತು.

ಮಾರ್ಚ್‌ ಎರಡನೇ ವಾರದಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ ₹352 ಇದ್ದರೆ, ಏಪ್ರಿಲ್ 4ರಂದು ₹365 ಇತ್ತು. ಮೇ ತಿಂಗಳ ಕೊನೆಯಲ್ಲಿ ₹380ಕ್ಕೆ ತಲುಪಿದ್ದ ದರವು, ಜೂನ್‌ನಲ್ಲಿ ಒಮ್ಮೆ ಕುಸಿದಿತ್ತು. ನಂತರ ಆಗಸ್ಟ್ ಮೊದಲ ವಾರದವರೆಗೆ ಬಹುತೇಕ ಸ್ಥಿರವಾಗಿತ್ತು.

‘ಬಾಂಗ್ಲಾದೇಶದ ಗಡಿಯಲ್ಲಿ ಅಡಿಕೆ ಅಕ್ರಮ ಒಳನುಸುಳುವಿಕೆ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಹೊಸ ಅಡಿಕೆ ದರ ಏರುಗತಿಯಲ್ಲಿ ಸಾಗಿರುವ ಸಾಧ್ಯತೆ ಇದೆ. ಬಾಂಗ್ಲಾದಲ್ಲಿ ಅಕ್ರಮ ಅಡಿಕೆ ನುಸುಳುವಿಕೆಗೆ ಕೈಗೊಂಡಿರುವ ಬಿಗಿಯಾದ ಕ್ರಮ ಮತ್ತು ಬೆಳೆ ಕುಸಿತದಿಂದಾಗಿ ಅಡಿಕೆಗೆ ಇದೇ ದರ ಮುಂದುವರಿಯಬಹುದು ಅಥವಾ ಇನ್ನೂ ಏರಿಕೆಯಾಗಬಹುದು’ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ಬಾರಿ ಏಪ್ರಿಲ್, ಮೇ ತಿಂಗಳಲ್ಲಿ ಸುಡುಬಿಸಿಲಿಗೆ ಅಡಿಕೆ ಕಾಯಿಗಳು ಉದುರಿವೆ. ಜೂನ್‌ನಿಂದ ಜುಲೈ ಕೊನೆಯವರೆಗೆ ಎಡೆಬಿಡದೆ ಮಳೆಯಾಗಿದ್ದರಿಂದ ಬೋರ್ಡೊ ದ್ರಾವಣ ಸಿಂಪಡಣೆ ಸಾಧ್ಯವಾಗದೆ, ಅಡಿಕೆ ತೋಟಗಳು ಕೊಳೆರೋಗಕ್ಕೆ ಸಿಲುಕಿ ನಲುಗಿವೆ ಎಂದು ಹೇಳಿದರು.

‘ಸಣ್ಣ ಹಾಗೂ ಅತಿಸಣ್ಣ ರೈತರ ಬಳಿ ಅಡಿಕೆ ಸಂಗ್ರಹವಿಲ್ಲ. ಸಾಮಾನ್ಯವಾಗಿ ಬೆಳೆ ಬಂದ ಕೂಡಲೇ ಅವರು ಮಾರಾಟ ಮಾಡುವುದರಿಂದ ಶೇ 40ರಷ್ಟು ಉತ್ಪನ್ನ ಉಳಿದಿರಬಹುದು. ದೊಡ್ಡ ಹಿಡುವಳಿದಾರರು, ಇನ್ನಷ್ಟು ದರದ ನಿರೀಕ್ಷೆಯಲ್ಲಿ ದಾಸ್ತಾನು ಇಟ್ಟುಕೊಳ್ಳಬಹುದು. ಹೀಗಾಗಿ, ಮಾರುಕಟ್ಟೆಯಲ್ಲಿ ಆವಕ ಹೆಚ್ಚು ಆಗುತ್ತಿಲ್ಲ’ ಎನ್ನುತ್ತಾರೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ.

ಪಟ್ಟಿ ಕೆ.ಜಿ ಅಡಿಕೆ ದರ ₹360;2020ರ ಆಗಸ್ಟ್‌  ₹461;2021ರ ಆಗಸ್ಟ್‌  ₹460;2022ರ ಆಗಸ್ಟ್‌  ₹488;2023ರ ಆಗಸ್ಟ್‌   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT