ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್ ನೆಟ್ಟಾರು ಹತ್ಯೆ: ಆರೋಪಿಗಳ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಿದ ಎನ್‌ಐಎ

ಪ್ರವೀಣ್ ನೆಟ್ಟಾರು ಹತ್ಯೆ: ಆರೋಪಿಗಳ ಸುಳಿವು ನೀಡುವಂತೆ ಧ್ವನಿವರ್ಧಕದಲ್ಲಿ ಘೋಷಣೆ
Published 28 ಜೂನ್ 2023, 17:19 IST
Last Updated 28 ಜೂನ್ 2023, 17:19 IST
ಅಕ್ಷರ ಗಾತ್ರ

ಸುಳ್ಯ/ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆ‌ಮರೆಸಿಕೊಂಡಿರುವ ಆರೋಪಿಗಳು ಇದೇ 30ರ ಒಳಗಾಗಿ ಶರಣಾಗಬೇಕು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗಡುವು ವಿಧಿಸಿದೆ. ಆರೋಪಿಗಳ ಆಸ್ತಿಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನೂ ಆರಂಭಿಸಿದೆ.

ಆರೋಪಿಗಳ ಆಸ್ತಿಮುಟ್ಟುಗೋಲಿಗೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ನ್ಯಾಯಾಲಯ ನೀಡಿರುವ ಆದೇಶದ ಪ್ರತಿಯನ್ನು, ತಲೆಮರೆಸಿಕೊಂಡಿರುವ ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಮೊಹಮ್ಮದ್‌ ಮುಸ್ತಾಫ ಎಸ್‌. ಹಾಗೂ ಸುಳ್ಯ ಕಲ್ಲುಮುಟ್ಟು ಮನೆಯ ಉಮ್ಮರ್‌ ಫಾರೂಕ್‌ ಮನೆಗೆ ಎನ್‌ಐಎ ಅಧಿಕಾರಿಗಳು ಬುಧವಾರ ಅಂಟಿಸಿದ್ದಾರೆ.

ಈ ಕುರಿತು ಸುಳ್ಯ ಹಾಗೂ ಬೆಳ್ಳಾರೆ ಪಟ್ಟಣಗಳಲ್ಲಿ ಎನ್‌ಐಎ ಅಧಿಕಾರಿಗಳು ಧ್ವನಿವರ್ಧಕ ಬಳಸಿ ಬುಧವಾರ ಘೋಷಣೆ ಮಾಡಿದರು. ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನ ನೀಡಲಾಗುವುದು ಎಂದೂ ಸಾರ್ವಜನಿಕರಿಗೆ ತಿಳಿಸಿದರು.

ಆರೋಪಿಗಳಿಗೆ ನೆರವಾದವರಿಗಾಗಿ ಶೋಧ

ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪಿಗಳಾದ ಕೊಡಗು ಜಿಲ್ಲೆಯ ಅಬ್ದುಲ್ ನಾಸಿರ್ ಮತ್ತು ಅಬ್ದುಲ್ ರೆಹಮಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪಡಂಗಡಿ ಗ್ರಾಮದ ನೌಷದ್ ಎಂಬುವರ ಮನೆಗಳಲ್ಲಿ ಎನ್‌ಐಎ ಮಂಗಳವಾರ ಪರಿಶೀಲನೆ ನಡೆಸಿತ್ತು.

ಈ ಶೋಧ ಕಾರ್ಯದ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎನ್‌ಐಎ, ‘ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳು ಹಾಗೂ ಇತರ ಐವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಹತ್ಯೆ ನಡೆಸಿದ ಆರೋಪಿಗಳಿಗೆ ಈ ಮೂವರು ಕರ್ನಾಟಕ ಮತ್ತು ತಮಿಳುನಾಡಿನ ಬೇರೆ ಬೇರೆ ಕಡೆ ಆಶ್ರಯ ನೀಡಿರುವ ಶಂಕೆ‌ ಇದೆ. ತಪಾಸಣೆ ವೇಳೆ ಈ ಮೂವರ ಮನೆಗಳಲ್ಲಿ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಮತ್ತು ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎನ್ಐಎ ತಿಳಿಸಿದೆ.

ಬೆಳ್ಳಾರೆಯಲ್ಲಿ 2022 ಜುಲೈ 26ರಂದು ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ತಲೆ ಮರೆಸಿಕೊಂಡಿರುವ ಆರೋಪಿಗಳೂ ಸೇರಿದಂತೆ ಒಟ್ಟು 21 ಆರೋಪಿಗಳ ವಿರುದ್ಧ ಎನ್ಐಎ ನ್ಯಾಯಲಯಕ್ಕೆ 2023ರ ಜನವರಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು. ಆರೋಪಿಗಳ ವಿರುದ್ಧ1967ರ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ)ಯ ಸೆಕ್ಷನ್‌ 16, 18 ಮತ್ತು 20,  ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 120 ಬಿ, 153 ಎ, 302, ಮತ್ತು 34 ಮತ್ತು ಸಶಸ್ತ್ರ ಕಾಯ್ದೆಯ ಸೆಕ್ಷನ್‌ 25 (1) (ಎ) ಅಡಿ ಮೊಕದ್ದಮೆಗಳನ್ನು ದಾಖಲಾಗಿತ್ತು.  

ಪಿಎಫ್ಐ ಸಂಘಟನೆಯ ‘ಕಿಲ್ಲರ್ ಸ್ಕ್ವ್ಯಾಡ್’ ಹಾಗೂ ‘ಸರ್ವಿಸ್ ಟೀಮ್’ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಡೆಸಿದೆ. ಕೋಮುದ್ವೇಷ ಹಬ್ಬಿಸುದ ದೃಷ್ಟಿಯಿಂದ ಈ ದ್ವೇಷದ ಹತ್ಯೆ ನಡೆಸಲಾಗಿದೆ. 2047 ರಲ್ಲಿ ದೇಶದಲ್ಲಿ ಇಸ್ಲಾಮಿಕ್‌ ಆಡಳಿತ ತರುವ ಉದ್ದೇಶವನ್ನು ಆ ಸಂಸ್ಥೆ ಹೊಂದಿತ್ತು ಎಂದು ಎನ್ಐಎ ಆರೋಪಿಸಿದೆ‌.

ಈ ಹಿಂದೆಯೂ ಆಸ್ತಿ ವಶಕ್ಕೆ ಪಡೆದಿದ್ದ ಎನ್‌ಐಎ

ಈ ‍ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್‌ ಅನ್ನು ಎನ್‌ಐಎ ಈ ಹಿಂದೆಯೇ ವಶಕ್ಕೆ ಪಡೆದಿದೆ. ‘ಫ್ರೀಡಂ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಒಡೆತನಕ್ಕೆ ಸೇರಿದ ಈ ಸಭಾಂಗಣವನ್ನು ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು  ಪಿಎಫ್‌ಐ ಬಳಸಿಕೊಂಡಿತ್ತು’ ಎಂಬುದು ಎನ್‌ಐಎ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT