ಶುಕ್ರವಾರ, ಅಕ್ಟೋಬರ್ 7, 2022
24 °C

ಎಸ್‌ಡಿಪಿಐ ಮುಖಂಡ ರಿಯಾಜ್‌ ಪರಂಗಿಪೇಟೆ ಮನೆ ಮೇಲೆ ಎನ್‌ಐಎ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡವು ಬಿಹಾರದ ಪ್ರಕರಣವೊಂದರ ಸಲುವಾಗಿ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್‌ ಪರಂಗಿಪೇಟೆ ಅವರ ಮನೆಗೆ ( ಬಿ.ಸಿ.ರೋಡ್‌ ಸಮೀಪ) ಗುರುವಾರ ದಾಳಿ ನಡೆಸಿ ತಪಾಸಣೆ ನಡೆಸಿದೆ.

ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು, ‘ಪಕ್ಷದ ನಾಯಕರಿಗೆ ವಿನಾ ಕಾರಣ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಿಯಾಜ್‌, ‘ಎನ್‌ಐಎ ಅಧಿಕಾರಿಗಳು ಬಿಹಾರದ ಪ್ರಕರಣವೊಂದರ ವಿಚಾರಣೆ ಸಲುವಾಗಿ ಬೆಳ್ಳಂಬೆಳಗ್ಗೆ ನನ್ನ ಮನೆಗೆ ಬಂದಿದ್ದರು. ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ್ದಾರೆ’ ಎಂದು ತಿಳಿಸಿದರು.

‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿ ನಿರ್ದೇಶನಾಲಯ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮೊದಲಾದ ವಿಶೇಷ ತನಿಖೆ ಸಂಸ್ಥೆಗಳು ಬಿಜೆಪಿಗೆ ಅನುಕೂಲವಾಗುವಂತೆ ವರದಿಗಳನ್ನು ಸಲ್ಲಿಸಿವೆ. ಈ ಪ್ರಕರಣದಲ್ಲಿ ಹಾಗೆ ಆಗಬಾರದು. ಸತ್ಯ ಏನೆಂದು ಎನ್‌ಐಎಯವರು ಜನತೆಗೆ ತಿಳಿಸಬೇಕು. ಯಾರಿಗೂ ಅನ್ಯಾಯ ಆಗುವುದಕ್ಕೆ ಎನ್‌ಐಎ ಅವಕಾಶ ನೀಡಬಾರದು’ ಎಂದು ಅವರು ಒತ್ತಾಯಿಸಿದರು.

‘ಅಮಾನವೀಯ ಕೃತ್ಯಗಳನ್ನು ಸಂಘ ಪರಿವಾರ ನಡೆಸುತ್ತಿದೆ. ಬಿಜೆಪಿ ಇದಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಎನ್‌ಐಎ ಅಧಿಕಾರಿಗಳು ಹಾಗೂ ವಿಶೇಷ ತನಿಖಾ ತಂಡಗಳು ಹೇಗೆ ನಮ್ಮ ಮನೆ ಬಾಗಿಲಿಗೆ ಬರುತ್ತವೆಯೋ, ಅದೇ ರೀತಿ ಸಂಘ ಪರಿವಾರದವರ ಮನೆ ಬಾಗಿಲಿಗೂ ಭೇಟಿ ನೀಡಲಿ. ಅವರ ಮುಖಂಡರನ್ನೂ ವಿಚಾರಣೆಗೆ ಒಳಪಡಿಸಲಿ’ ಎಂದು ಆಗ್ರಹಿಸಿದರು.

‘ಎನ್‌ಐಎ ತಂಡ ನಡೆಸಿದ ರಿಯಾಜ್ ಫರಂಗಿಪೇಟೆ ಅವರ ಮನೆಗೆ ದಾಳಿ ನಡೆಸಿದ್ದು ನಿಜ. ಆದರೆ, ಅದು ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್‌ ನೆಟ್ಟಾರು ಹತ್ಯೆಗೂ ಈ ದಾಳಿಗೂ ಯಾವುದೇ ಸಂಬಂಧ ಇಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು