ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು: ಅಪಾಯದ ಸ್ಥಿತಿಯಲ್ಲಿ 9 ಮನೆಗಳು

ಬೆಳ್ಳಿಪ್ಪಾಡಿಯ ದೇವಸ್ಯದಲ್ಲಿ ಗುಡ್ಡ ಕುಸಿತ: ಹಟ್ಟಿ, ಕೊಟ್ಟಿಗೆಗಳಿಗೆ ಹಾನಿ
Published 3 ಆಗಸ್ಟ್ 2024, 14:04 IST
Last Updated 3 ಆಗಸ್ಟ್ 2024, 14:04 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಕೋಡಿಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ದೇವಸ್ಯದಲ್ಲಿ ಗುಡ್ಡ ಕುಸಿದು, ಗುಡ್ಡದ ಕೆಳಭಾಗದಲ್ಲಿ ಅಕ್ಕಪಕ್ಕದಲ್ಲಿರುವ ಒಂದೇ ಕುಟುಂಬಕ್ಕೆ ಸೇರಿದ 9 ಮನೆಗಳಿಗೆ ಅಪಾಯದ ಸ್ಥಿತಿ ಎದುರಾಗಿದೆ. ಗುಡ್ಡ ಕುಸಿದು ಮೂರು ಮನೆಗಳ ಕೊಟ್ಟಿಗೆ ಮತ್ತು ಹಟ್ಟಿಗಳಿಗೆ ಹಾನಿಯಾಗಿದೆ.

ಬೆಳ್ಳಿಪ್ಪಾಡಿ ಗ್ರಾಮದ ದೇವಸ್ಯ ನಿವಾಸಿ ಕೊರಗಪ್ಪ ಗೌಡ, ರಾಜೀವಿ, ರವಿಚಂದ್ರ ಅವರ ಕುಟುಂಬಕ್ಕೆ ಸೇರಿದ 9 ಮನೆಗಳು ಒಂದೇ ಸಾಲಿನಲ್ಲಿ ಅಕ್ಕಪಕ್ಕದಲ್ಲಿದ್ದು, ಈ ಮನೆಗಳ ಹಿಂಭಾಗದಲ್ಲಿರುವ ಮೇಲ್ಭಾಗದ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣು ಕುಸಿದು ಮೂರು ಮನೆಗಳ ಹಟ್ಟಿ ಮತ್ತು ಕೊಟ್ಟಿಗೆಗಳು ಹಾನಿಗೀಡಾಗಿವೆ. ಮನೆಯ ಹಿಂಬದಿಯ ಚಾವಣಿಗೂ ಹಾನಿ ಉಂಟಾಗಿದೆ.

ಕೆಲ ದಿನಗಳ ಹಿಂದೆಯೇ ಸಣ್ಣ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ನಿವಾಸಿಗಳು ದನ ಕರುಗಳನ್ನು ಬೇರೆಡೆ ಕಟ್ಟಿ ಹಾಕಿದ್ದರು. ಹಾಗಾಗಿ ಈ ಕಟುಂಬಸ್ಥರ ಜಾನುವಾರುಗಳು ಅಪಾಯದಿಂದ ಪಾರಾಗಿವೆ.

ಗುಡ್ಡದ ತಳಭಾಗದಲ್ಲಿ ಈ ಹಿಂದಿನಿಂದಲೂ ನೀರಿನ ಒರತೆ ಬರುತ್ತಿತ್ತು. ಆದರೆ, ಇದುವರೆಗೆ ಸಮಸ್ಯೆ ಉಂಟಾಗಿರಲಿಲ್ಲ. ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಗುಡ್ಡದಲ್ಲಿ ಕುಸಿತ ಉಂಟಾಗಿದೆ. ಗುಡ್ಡದಲ್ಲಿ ಬಿರುಕು ಬಿಟ್ಟಿರುವುದರಿಂದ ಇನ್ನಷ್ಟು ಕುಸಿಯುವ ಭೀತಿ ಇದ್ದು, ಕುಟುಂಬಗಳ ವಾಸ್ತವ್ಯವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

ಕೋಡಿಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲಿಸಿದ್ದಾರೆ.

ಗುಡ್ಡ ಇನ್ನಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಳ್ಳಿಪ್ಪಾಡಿ ಶಾಲೆಯ ಕಾಳಜಿ ಕೇಂದ್ರಕ್ಕೆ ಇಲ್ಲಿನ 9 ಮನೆಯವರ ವಾಸ್ತವ್ಯ ಸ್ಥಳಾಂತರಿಸಲು ಪ್ರಯತ್ನ ನಡೆಸಿದ್ದೇವೆ. ಆದರೆ, ಅಲ್ಲಿಯೂ ಧರೆ ಕುಸಿದಿರುವುದರಿಂದ ಆ ಜಾಗವೂ ಸುರಕ್ಷಿತವಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಹಾಗಾಗಿ ಸಂಬಂಧಿಕರ ಮನೆಗೆ ತಾತ್ಕಾಲಿಕವಾಗಿ ವಾಸ್ತವ್ಯ ಸ್ಥಳಾಂತರಿಸುವಂತೆ ಅಲ್ಲಿನ ಕುಟುಂಬಗಳ ಜತೆ ಮಾತುಕತೆ ನಡೆಸಿ ಮನವೊಲಿಸುವ ಕೆಲಸ ಮಾಡಲಾಗಿದೆ ಎಂದು ಜಯಪ್ರಕಾಶ್ ಬದಿನಾರ್ ತಿಳಿಸಿದ್ದಾರೆ.

ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ದೇವಸ್ಯ ಎಂಬಲ್ಲಿ ಗುಡ್ಡ ಕುಸಿದಿದೆ
ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ದೇವಸ್ಯ ಎಂಬಲ್ಲಿ ಗುಡ್ಡ ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT