ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಆಪತ್ತಿಗೆ ಸಿಲುಕಿದ ಹಡಗು– ನೆರವಿಗೆ ಮುನ್ನ ಎಚ್ಚರ ಅಗತ್ಯ'

ಹಡಗು ತುರ್ತು ಪ್ರವೇಶದ ಕೋರಿಕೆ ಹಿಂದೆ ದುರುದ್ದೇಶ: ಎನ್‌ಎಂಪಿಎ ಅಧ್ಯಕ್ಷ
Published 7 ಮೇ 2024, 6:30 IST
Last Updated 7 ಮೇ 2024, 6:30 IST
ಅಕ್ಷರ ಗಾತ್ರ

ಮಂಗಳೂರು: ಭಾರತದ ಸರಹದ್ದಿನೊಳಗಿನ ಸಮುದ್ರದಲ್ಲಿ ಅಥವಾ ಅಂತರರಾಷ್ಟ್ರೀಯ ವ್ಯಾಪ್ತಿಯ ಸಮುದ್ರದಲ್ಲಿ ಸಂಚರಿಸುವ ಕೆಲವು ಹಡಗುಗಳು ದುರುದ್ದೇಶದಿಂದ ‘ಆಪತ್ಕಾಲದ ನೆರವು’ ಕೋರುತ್ತವೆ. ಅಂತಹ ಹಡಗುಗಳ ಕುರಿತು ಭಾರತೀಯ ಕರಾವಳಿ ರಕ್ಷಣಾ ಪಡೆಯೂ (ಐಸಿಜಿ) ಸೇರಿದಂತೆ ಜಲಸಾರಿಗೆ ನಿರ್ವಹಣೆಯ ಪಾಲುಗಾರರು ಎಚ್ಚರವಹಿಸಬೇಕು ಎಂದು ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಅಧ್ಯಕ್ಷ ಎ.ವಿ.ರಮಣ ಹೇಳಿದರು.

ಜಲಸಾರಿಗೆ ಬಿಕ್ಕಟ್ಟುಗಳ ನಿರ್ವಹಣೆ ಕುರಿತು  ಎನ್‌ಎಂಪಿಎಯು ಇಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

ದೃಢತೆ ಪ್ರಮಾಣಪತ್ರವನ್ನು ಹೊಂದಿರದ ವಾಣಿಜ್ಯ ಹಡಗುಗಳು ವರ್ಷಪೂರ್ತಿ ಸಂಚರಿಸುತ್ತಿರುತ್ತವೆ.  ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಸಮಸ್ಯೆಗೆ ಸಿಲುಕುತ್ತವೆ. ಇಂತಹ ಸಂದರ್ಭದಲ್ಲಿ ಹಡಗಿನ ನಾವೀಕ ಸ್ಥಳೀಯ ಏಜೆಂಟರ ನೆರವು ಪಡೆದ ಆಪತ್ತಿನ ಸಂದೇಶ ರವಾನಿಸಿ ಬಂದರಿಗೆ ಪ್ರವೇಶಾವಕಾಶವನ್ನು ಕೋರುತ್ತಾರೆ. ಸಮುದ್ರ ಮಧ್ಯದಲ್ಲಿ ಲಂಗರು ಹಾಕಿ ಬಂದರಿನ ಯೋಜಿತ ಚಟುವಟಿಕೆಗಳಿಗೆ ಕಿರಿಕಿರಿ ಉಂಟುಮಾಡುತ್ತಾರೆ. ಹಡಗುಗಳ ಸಂಚಾರ ಮಾರ್ಗದಲ್ಲೇ ಅಂತಹ ಹಡಗುಗಳು ಮುಳುಗಿದರೆ ಬಂದರಿನ ನಿರ್ವಹಣೆಗೆ ಸಮಸ್ಯೆಯಾಗುವುದರ ಜೊತೆಗೆ, ಸಮುದ್ರ ಮಾಲಿನ್ಯವೂ ಉಂಟಾಗುತ್ತದೆ’ ಎಂದು ವಿವರಿಸಿದರು.

‘ನಮ್ಮ ದೇಶದಲ್ಲಿ ನೌಕಾಯಾನ ಮಹಾನಿರ್ದೇಶನಾಲಯವು ಹಡಗುಗಳ ದೃಢತೆ ಪ್ರಮಾಣಪತ್ರವನ್ನು ನೀಡುತ್ತದೆ. ವಾಣಿಜ್ಯ ಹಡಗುಗಳು ಅವರಬಳಿಯೇ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವೇನಲ್ಲ. ಅವರು ಬೇರಾವುದೇ ದೇಶದಿಂದಲೂ ಈ ಪ್ರಮಾಣಪತ್ರವನ್ನು ಪಡೆಯಬಹುದು. ಹಡಗು ಮಾಲೀಕರು ಕಟ್ಟುನಿಟ್ಟಿನ ನಿಯಮಗಳಿಲ್ಲದ ದೇಶಗಳಲ್ಲಿ ಹಡಗಿಗೆ ದೃಢತಾ ಪ್ರಮಾಣಪತ್ರ ಪಡೆದುಕೊಳ್ಳುವ ಮೂಲಕ ಲಾಭ ಗಳಿಕೆಗೆ ಅನೈತಿಕ ಮಾರ್ಗ ಅನುಸರಿಸುತ್ತಾರೆ. ಭಾರತದ ಕಾನೂನು ಲೋಪಗಳನ್ನು ದುರ್ಬಳಕೆಮಾಡಿಕೊಳ್ಳುತ್ತಾರೆ. ಹಾಗಾಗಿ ಯಾವುದೇ ಹಡಗು ಆಪತ್ಕಾಲದ ಸಂದೇಶ ರವಾನಿಸಿತೆಂದರೆ, ಅದರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ನೆರವಿಗೆ ಧಾವಿಸುವ ಮುನ್ನ ಅವುಗಳು ಅಂತರರಾಷ್ಟ್ರೀಯ ವಿಮೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು‘ ಎಂದರು. 

‘ಆಪತ್ತಿಗೆ ಸಿಲುಕಿದ ಹಡಗುಗಳ ರಕ್ಷಣೆಗೆ ಎನ್ಎಂಪಿಎ ಮಾದರಿ ಕಾರ್ಯಾಚರಣೆ ವಿಧಾನವನ್ನು ರೂಪಿಸಿದೆ.  ಬಿಕ್ಕಟ್ಟಿನ ಸಂದರ್ಭದ ಗೊಂದಲ ನಿವಾರಣೆಗೆ ಹಾಗೂ ಸಮುದ್ರ ಮಾಲಿನ್ಯ ತಡೆಯಲು ಇದು ಸಹಕಾರಿ. ದುರುದ್ದೇಶದಿಂದ  ಆಪತ್ಕಾಲದ ಸಂದೇಶ ರವಾನಿಸುವ ಹಡಗು ನಿರ್ವಹಣೆಗೆ ಕಠಿಣ ನಿಲುವು ಹೊಂದುವ ಅಗತ್ಯ ಇದೆ’ ಎಂದರು.

ಬಂದರು, ನೌಕಾಯಾನ ಹಾಗೂ ಜಲಮಾರ್ಗಗಳ ಸಚಿವಾಲಯದ  ಪರಿಸರ ಸಲಹೆಗಾರ ಆರ್‌.ಡಿ.ತ್ರಿಪಾಠಿ, ‘ಸೂಕ್ತ ನಿರ್ವಹಣೆ ಇಲ್ಲದೇ ಕೆಟ್ಟುಹೋಗುವ ಹಡಗುಗಳನ್ನು ಸಮುದ್ರ ಮಧ್ಯದಲ್ಲೇ ಬಿಟ್ಟುಹೋಗುವ ಪರಿಪಾಠ 2020ರ ಬಳಿಕ ಜಾಸ್ತಿಯಾಗಿದೆ. 2020ಕ್ಕೆ ಮುಂಚೆ ಜಗತ್ತಿದನಾದ್ಯಂತ  ತ್ರೈ ಮಾಸಿಕವೊಂದರಲ್ಲಿ 200 ಹಡಗುಗಳು ಕೆಟ್ಟು ಹೋಗುತ್ತಿದ್ದವು. ಈಗ 440 ಹಡಗುಗಳು ಹದಗೆಡುತ್ತಿವೆ. 30ಕ್ಕೂ ಹೆಚ್ಚು ಹಡಗುಗಳು ಸಮುದ್ರದಲ್ಲಿ ಭಾರತದ ಸರಹದ್ದಿನಲ್ಲಿ ಲಂಗರು ಹಾಕಿವೆ’ ಎಂದು ವಿವರ ನೀಡಿದರು.  

‘ವರ್ಷದಲ್ಲಿ 600ಕ್ಕೂ ಹೆಚ್ಚು ಹಡಗುಗಳು ಮುಳುಗಡೆಯಾಗುತ್ತಿವೆ. ಇವುಗಳಲ್ಲಿ ನಿಜವಾಗಿಯೂ ಆಕಸ್ಮಿಕವಾಗಿ ಮುಳುಗಿದ ಹಡಗುಗಳ ಪ್ರಮಾಣ ಬಲು ಕಡಿಮೆ. ಉದ್ದೇಶಪೂರ್ವಕ ಕೃತ್ಯಗಳೇ ಜಾಸ್ತಿ’ ಎಂದರು.

ಎನ್ಎಂಪಿಎಯ ಉಪಸರಂಕ್ಷಣಾಧಿಕಾರಿ ಕ್ಯಾ.ಎಸ್‌.ಆರ್‌.ಪಟ್ನಾಯಕ್‌ ಸ್ವಾಗತಿಸಿದರು.

‘ಬಂದರು ಸಂಪರ್ಕ ಸಮಸ್ಯೆಗೆ ಶೀಘ್ರ ಮುಕ್ತಿ’ ‘ರಾಜ್ಯದ ರಾಜಧಾನಿಯ ಜೊತೆಗೆ ನಗರವನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿ 75ರ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಬಳಿಕ ಬಂದರಿನ ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ನಿವಾರಣೆ ಆಗಲಿವೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದರು.

‘ಬಂದರು ಪ್ರಾಧಿಕಾರಗಳ ಮಂಡಳಿಗೆ ಹೆಚ್ಚಿನ ಅಧಿಕಾರ’ ‘2021ರ ಪ್ರಮುಖ ಬಂದರು ಪ್ರಾಧಿಕಾರಗಳ ಕಾಯ್ದೆಯಡಿ  ಬಂದರುಗಳ ಅಭಿವೃದ್ಧಿ ನಿಯಂತ್ರಣ ಹಾಗೂ ನಿರ್ಬಂಧಗಳಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳುವುದಕ್ಕೆ ಪ್ರಮುಖ ಬಂದರು ಪ್ರಾಧಿಕಾರಗಳ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳು ರೂಪಿಸುವ ನಗರ ಮಹಾಯೋಜನೆ ಹಾಗೂ ಬಂದರು ಅಭಿವೃದ್ಧಿ ಯೋಜನೆಗಳ ನಡುವೆ ತಿಕ್ಕಾಟ ಉಂಟಾದಲ್ಲಿ  ಮಂಡಳಿಯ ತೀರ್ಮಾನವೇ ಅಂತಿಮವಾಗಲಿದೆ. ಬಂದರು ಅಭಿವೃದ್ಧಿ ಯೋಜನೆ ರೂಪಿಸಲು ರಾಜ್ಯ ಸರ್ಕಾರದ ಅಥವಾ ಸ್ಥಳೀಯ ಸಂಸ್ಥೆಯ ಪರವಾನಗಿ ಪಡೆಯುವ ಅಗತ್ಯವೂ ಇಲ್ಲ’ ಎಂದು ಹಿರಿಯ ಉಪಕಾರ್ಯದರ್ಶಿ ಕೃಷ್ಣ ಬಪ್ಪಿ ರಾಜು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT