ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರೀಶ್ ಪೂಂಜರಿಂದ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿಲ್ಲ: ಸದಾನಂದ ಪೂಜಾರಿ

Published 30 ಮೇ 2023, 14:49 IST
Last Updated 30 ಮೇ 2023, 14:49 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಶಾಸಕ ಹರೀಶ್ ಪೂಂಜ ಹಾಗೂ ಬಿಜೆಪಿಯಿಂದ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಸತ್ಯಜೀತ್ ಸುರತ್ಕಲ್ ಹೇಳಿರುವ ಮಾತು ಸುಳ್ಳಾಗಿದ್ದು, ಬಿಜೆಪಿ ಸರ್ಕಾರ ಬಿಲ್ಲವ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಈ ಕುರಿತು ಬಹಿರಂಗ ಚರ್ಚೆಗೆ ಸಿದ್ಧ’ ಎಂದು ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಸತ್ಯಜಿತ್ ಅವರು ವೈಯಕ್ತಿಕ ತೆವಲಿಗೆ ಬೆಳ್ತಂಗಡಿಗೆ ಬಂದು ಬಿಜೆಪಿ ವಿರುದ್ಧ ಒಗ್ಗಟ್ಟಿನಲ್ಲಿರುವ ಬಿಲ್ಲವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಹಿಂದೂ ಸಂಘಟನೆಯಲ್ಲಿ ದುಡಿದ ನೀವು ಬೆಳ್ತಂಗಡಿಯ ನಾಲ್ಕು ಬಿಲ್ಲವರ ಮಾತು ಕೇಳಿ ಒಂದು ಸಮುದಾಯದ ಓಲೈಕೆಗೆ ಬಂದಿರುವುದಲ್ಲದೆ ಟಿಪ್ಪು ಜಯಂತಿ ಆಚರಣೆ ನಡೆಸುವ, ಇಫ್ತಾರ್ ಕೂಟ ಆಚರಿಸುವ, ಭಜನೆ ಮಾಡುವವರು ಭಯೋತ್ಪಾದಕರು ಎಂದವರ ಕುಟುಂಬಕ್ಕೆ ಹೋಗಿ ಮತಯಾಚನೆ ಮಾಡಿದ್ದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಪೆಂರ್ಬುಡ ಕಂಬಳವನ್ನು ಬಿಲ್ಲವರಿಂದ ಕಸಿದುಕೊಳ್ಳುವ ಪ್ರಯತ್ನ ಶಾಸಕ ಹರೀಶ್ ಪೂಂಜ ಮಾಡಿದರು ಎಂದು ಆರೋಪಿಸಿದ್ದೀರಿ. ಆದರೆ ಅದನ್ನು ಆರಂಭಿಸಿದವರು ಜೀವಂಧರ್ ಜೈನ್ ಮತ್ತು ವಲೇರಿಯನ್ ಲೋಬೊ. ಕಂಬಳ ಇರುವ ಸ್ಥಳ ಖಾಸಗಿ ಜಾಗ, ಇಲ್ಲಿ ಕಂಬಳ ನಡೆಸುವ ಬಗ್ಗೆ ಸಮಸ್ಯೆ ಬಂದಾಗ ಊರವರು ಬಂದು ಶಾಸಕರಲ್ಲಿ ಕೇಳಿದಾಗ ಬಿಲ್ಲವ ಸಮಾಜದ ಜನಾರ್ದನ ಪೂಜಾರಿ ಅಧ್ಯಕ್ಷತೆಯಲ್ಲಿ ಕಂಬಳ ನಡೆಸಲು ಯೋಚಿಸಲಾಯಿತು. ಇದರಲ್ಲಿ ಗೊಂದಲ ಮೂಡಿದಾಗ  ನಿತೇಶ್ ಅವರ ಅಧ್ಯಕ್ಷತೆಯಲ್ಲಿ ಕಂಬಳ ನಡೆಸಲು ಒಪ್ಪಿಕೊಳ್ಳಲಾಯಿತೇ ಹೊರತು ಶಾಸಕರ ಪಾತ್ರ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಹಿಂದುತ್ವಕ್ಕಾಗಿ ತಾವೂ ಬದುಕನ್ನು ಮೀಸಲಿರಿಸಿದ ಬಗ್ಗೆ ನಮಗೆ ಅತ್ಯಂತ ಗೌರವವಿದೆ. ಆದರೆ, ಶಾಸಕ ಹರೀಶ್ ಪೂಂಜ ನೈಜ ಹಿಂದುತ್ವವಾದಿಯೇ ಹೊರತು ನಿಮ್ಮಂತ ಅವಕಾಶವಾದಿಯಲ್ಲ’ ಎಂದರು.

ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ಮಂಜುನಾಥ ಸಾಲಿಯಾನ್ ಬಾರ್ಯ, ಮಾಜಿ ಸಂಘಟನಾ ಕಾರ್ಯದರ್ಶಿ ರವಿ ಕುಮಾರ್ ಬರೆಮೇಲು ಮಾತನಾಡಿದರು. ಮರೋಡಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ಬುಣ್ಣನ್, ಬೆಳ್ತಂಗಡಿ ಸಂಘದ ನಿರ್ದೇಶಕ ಗಂಗಾಧರ್ ಪರಾರಿ, ಮಾಜಿ ನಿರ್ದೇಶಕ ರಾಜೇಶ್ ಪೂಜಾರಿ ಮೂಡುಕೋಡಿ, ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ., ತಣ್ಣೀರುಪಂತ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಜೇಂಕ್ಯಾರ್, ಕಿರಣ್ ಮಂಜಿಲಾ, ಅಶೋಕ ಪೂಜಾರಿ ಕಡಿರುದ್ಯಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT