ಬುಧವಾರ, ಮೇ 12, 2021
18 °C
ದಿನದಿಂದ ದಿನಕ್ಕೆ ಏರುತ್ತಿರುವ ಕೋವಿಡ್‌–19 ಪ್ರಕರಣ: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸಿದ್ಧತೆ

ದ.ಕ. ಜಿಲ್ಲೆಯಲ್ಲಿ ಹಾಸಿಗೆಗಳ ಕೊರತೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್–19 ಎರಡನೇ ಅಲೆ ತೀವ್ರಗೊಳ್ಳುತ್ತಿದ್ದು, ರೋಗಿಗಳಿಗೆ ಸಮಸ್ಯೆ ಆಗದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಮುಂದಾಗಿದೆ. ಅಗತ್ಯ ಹಾಸಿಗೆಗಳ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 5,355 ಹಾಸಿಗೆಗಳು ಕೋವಿಡ್‌ ರೋಗಿಗಳಿಗೆ ಮೀಸಲಿರಿಸಲಾಗಿದೆ. ಸದ್ಯ 199 ಮಂದಿ ಕೋವಿಡ್‌ ರೋಗಿಗಳು ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಿಲ್ಲೆಯಲ್ಲಿ ಸದ್ಯ 5,156 ಹಾಸಿಗೆಗಳು ಖಾಲಿ ಇವೆ. ಜಿಲ್ಲೆಯಲ್ಲಿ ಒಟ್ಟು 1,152 ಮಂದಿ ಕೋವಿಡ್‌ ಸಕ್ರಿಯ ಪ್ರಕರಣ ಇದ್ದು, ಶೇ 90ರಷ್ಟು ಮಂದಿ ಹೋಂ ಐಸೋಲೇಶನ್‌ನಲ್ಲಿದ್ದಾರೆ. 1,152ರ ಪೈಕಿ 953 ಮಂದಿ ಹೋಂ ಐಸೋ ಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು ಕೋವಿಡ್‌ ರೋಗಿಗಳ ಪೈಕಿ ವೆನ್ಲಾಕ್‌ ಆಸ್ಪತ್ರೆಯಲ್ಲಿ 33 ಮಂದಿ, ಬಂಟ್ವಾಳ ತಾಲ್ಲೂಕು ಆಸ್ಪತ್ರೆಯಲ್ಲಿ ಇಬ್ಬರು, ಬೆಳ್ತಂಗಡಿಯಲ್ಲಿ 16 ಮತ್ತು ಪುತ್ತೂರಿನಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 147 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ವೆಂಟಿಲೇಟರ್‌ ಮತ್ತು ಹಾಸಿಗೆಯ ಕೊರತೆ ಸದ್ಯಕ್ಕಿಲ್ಲ. ಆದರೂ ಜಿಲ್ಲಾ ಆರೋಗ್ಯ ಇಲಾಖೆ ನಿರಂತರ ನಿಗಾ ವಹಿಸಿದ್ದು, ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಕಳೆದ ವರ್ಷ ಇದ್ದಂತಹ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಮತ್ತೆ ಆರಂಭಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸುತ್ತಿದೆ.

ಮಂಗಳೂರಿನ ಎನ್‌ಐಟಿಕೆಯ ಒಂದು ಬ್ಲಾಕ್‌ ಮತ್ತು ಕದ್ರಿ ಶಿವಬಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್‌ ಕೇರ್‌ ಸೆಂಟರ್‌ ಮಾಡಲು ಯೋಚಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಒಂದು ವೇಳೆ ಕೋವಿಡ್‌ ಪ್ರಕರಣ ಏರಿಕೆಯಾದರೆ, ಯಾವುದೇ ರೀತಿಯಲ್ಲಿ ಬೆಡ್‌ಗಳ ಕೊರತೆ ಉಂಟಾಗದಂತೆ ಯೋಜನೆ ರೂಪಿಸಲಾಗುತ್ತಿದೆ.

ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಒಟ್ಟು 377 ಹಾಸಿಗೆ ಮೀಸಲಿರಿಸಲಾಗಿದ್ದು, ಸದ್ಯ 33 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿಯೋಜಿತ ಕೋವಿಡ್‌ ಆಸ್ಪತ್ರೆಯಲ್ಲಿ (ಡಿಸಿಎಚ್‌ಸಿ) ಮೀಸಲಿಟ್ಟ 4,978 ಹಾಸಿಗೆಯಲ್ಲಿ 166 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

5,156 ಬೆಡ್‌ಗಳು ಖಾಲಿ: ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆಯ ಕೊರತೆ ಇಲ್ಲ. ಸದ್ಯ ಇರುವ 1,152 ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ 199 ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಹೋಂ ಐಸೋಲೇಷನ್‌ನಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.