ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಮದ ನಂತರ ರಂಗಕ್ಕೆ ‘ನೃತ್ಯಗಾಥಾ’

ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರೇಕ್ಷಕರ ಮನಮುಟ್ಟಿದ ಅನಘಶ್ರೀ ಏಕವ್ಯಕ್ತಿ ಪ್ರದರ್ಶನ
Published : 17 ಸೆಪ್ಟೆಂಬರ್ 2024, 4:48 IST
Last Updated : 17 ಸೆಪ್ಟೆಂಬರ್ 2024, 4:48 IST
ಫಾಲೋ ಮಾಡಿ
Comments

ಮಂಗಳೂರು: ನಾಟ್ಯ ಮತ್ತು ನೃತ್ಯಗಾರ್ತಿಯರ ಕಥೆ ಹೇಳುತ್ತ ರಾಜ್ಯದ ನಾನಾ ಕಡೆಗಳಲ್ಲಿ ಸಹೃದಯರನ್ನು ರಂಜಿಸಿದ್ದ  ‘ನೃತ್ಯಗಾಥಾ’ ಏಕವ್ಯಕ್ತಿ ಪ್ರದರ್ಶನ ಎರಡು ವರ್ಷಗಳ ವಿರಾಮದ ನಂತರ ಮತ್ತೆ ರಂಗದ ಮೇಲೆ ಕಾಣಿಸಿಕೊಂಡಿದೆ.

ನಗರದ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಮತ್ತು ಜೆಸಿಐ ಆಯೋಜಿಸಿರುವ ನಾಟಕೋತ್ಸವವು ‘ನೃತ್ಯಗಾಥಾ’ದ ಮರುಪ್ರವೇಶಕ್ಕೆ ವೇದಿಕೆಯಾಯಿತು.

ಉಡುಪಿ ಕೊಡವೂರಿನ ನೃತ್ಯನಿಕೇತನ 2018ರಲ್ಲಿ ಆರಂಭಿಸಿದ ಪ್ರದರ್ಶನ ನೃತ್ಯಗಾಥಾ. ಮಾರ್ಪಳ್ಳಿ ಕುಕ್ಕಿಕಟ್ಟೆಯ ಅನಘಶ್ರೀ ಈ ಏಕವ್ಯಕ್ತಿ ನಾಟಕದ ಪಾತ್ರಧಾರಿ. ಉಡುಪಿಯ ಎಂಜಿಎಂ ಕಾಲೇಜು ಸಭಾಂಗಣದಲ್ಲಿ ಮೊದಲ ಪ್ರದರ್ಶನ ಕಂಡ ನಾಟಕ ನಂತರ ಮೈಸೂರು, ಬೆಂಗಳೂರು, ಧಾರವಾಡ, ಶಿರಸಿ, ಕಲಬುರಗಿ, ಕಾಸರಗೋಡು ಮುಂತಾದ ಕಡೆ ಕಲಾರಸಿಕರ ಹೃದಯ ಗೆದ್ದಿತ್ತು. ಎಂಟೆಕ್ ಪದವೀಧರೆ ಅನಘಶ್ರೀ ಅವರಿಗೆ ಬೆಂಗಳೂರಿನ ಬ್ರಾಡ್ ಕಾಮ್ ಕಂಪನಿಯಲ್ಲಿ ಉದ್ಯೋಗ ಲಭಸಿದ ನಂತರ ಓಡಾಟದ ತಾಪತ್ರಯದಿಂದಾಗಿ ಪ್ರದರ್ಶನ ನಿಂತಿತ್ತು.

ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಅನಘಶ್ರೀ ಅವರಿಗೆ ಈಗ ಅನುಕೂಲ ಆಗಿರುವ ಹಿನ್ನೆಲೆಯಲ್ಲಿ ನಾಟಕವನ್ನು ಮತ್ತೆ ರಂಗಕ್ಕೆ ತರಲು ನೃತ್ಯನಿಕೇತನ ನಿರ್ಧಿರಿಸಿತ್ತು. ಬಹುಭಾಷಾ ನಾಟಕೋತ್ಸವದಲ್ಲಿ ಭಾನುವಾರ ರಾತ್ರಿ ನಡೆದದ್ದು ನಾಟಕದ ಒಟ್ಟಾರೆ 21ನೇ ಪ್ರದರ್ಶನ. 

‘ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಮ್ಮ ಪ್ರದರ್ಶನಗಳಲ್ಲಿ ‘ನೃತ್ಯಗಾಥಾ’ವೂ ಪ್ರಮುಖವಾಗಿತ್ತು. ಅನಘಶ್ರೀ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಹೋದ ಕಾರಣ ಮುಂದುವರಿಸುವುದು ಕಷ್ಟವಾಗಿತ್ತು. ಕೈಯಲ್ಲಿ ಒಂದಿಷ್ಟು ಕೆಲಸಗಳೂ ಇದ್ದವು. ಆದ್ದರಿಂದ ಎರಡು ವರ್ಷ ಕಳೆದು ಹೋಯಿತು. ಈಗ ಮತ್ತೆ ಪ್ರದರ್ಶನಗೊಂಡಿರುವುದು ಖುಷಿ ತಂದಿದೆ’ ಎಂದು ನೃತ್ಯನಿಕೇತನದ ಸುಧೀರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿಕ್ಷಣದ ನಡುವೆ ಅಭ್ಯಾಸ, ಪ್ರದರ್ಶನ

ಉಡುಪಿಯ ಸೇಂಟ್ ಮೇರೀಸ್ ಶಾಲೆ ಮತ್ತು ಪೂರ್ಣಪ್ರಜ್ಞ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಅನಘಶ್ರೀ ಭರತನಾಟ್ಯ, ಯಕ್ಷಗಾನ ಮತ್ತು ರಂಗಭೂಮಿಯಲ್ಲಿ ಸಕ್ರಿಯ. ಸುಧೀರ್ ರಾವ್ ಮತ್ತು ಮಾನಸಿ ಅವರ ಶಿಷ್ಯೆಯಾಗಿ ಭರತನಾಟ್ಯ ‘ವಿದ್ವತ್‌’ ಪೂರ್ಣಗೊಳಿಸಿರುವ ಅವರು ನಿಟ್ಟೆ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿದ ನಂತರ ಮಣಿಪಾಲದ ಎಂಐಟಿಯಲ್ಲಿ ಎಂಟೆಕ್‌  ಮಾಡುವುದಕ್ಕೆ ಮೊದಲು ಲಭಿಸಿದ ಅವಧಿಯಲ್ಲಿ ಈ ನಾಟಕದ ಅಭ್ಯಾಸ ಮಾಡಿದ್ದರು.

‘ಸಮಯ ಸಿಕ್ಕಿದಾಗಲೆಲ್ಲ ಅಭ್ಯಾಸ ಮಾಡಿ ನಾಟಕ ಸಿದ್ಧಗೊಳ್ಳಲು 3 ತಿಂಗಳ ಹಿಡಿದಿತ್ತು. ನಂತರ ಒಂದು ವರ್ಷ ಪ್ರದರ್ಶನ ನಡೆಯಿತು. ಎಂಟೆಕ್ ಮಾಡುವಾಗಲೂ ಪ್ರದರ್ಶನಕ್ಕೆ ಅಡ್ಡಿಯಾಗಲಿಲ್ಲ. ಉದ್ಯೋಗ ಲಭಿಸಿದ ನಂತರ ನಾಟಕವನ್ನು ಹೇಗೆ ಮುಂದುವರಿಸುವುದು ಎಂದೇ ಗೊತ್ತಾಗಲಿಲ್ಲ. ಈಗ ಅದಕ್ಕೆ ಕಾಲ ಕೂಡಿಬಂದಿದೆ’ ಎಂದು ಅನಘಶ್ರೀ ಹೇಳಿದರು.

‘ಎಲ್ಲವೂ ಮನಸ್ಸಿನಲ್ಲಿ ಅಚ್ಚಾಗಿತ್ತು. ಹೀಗಾಗಿ ಕೆಲವೇ ದಿನಗಳ ಅಭ್ಯಾಸ ಸಾಕಾಗಿತ್ತು. ಸಂಭಾಷಣೆಗಳ ಮೇಲೆ ಮತ್ತೊಮ್ಮೆ ಕಣ್ಣಾಡಿಸುವುದಷ್ಟೇ ಬೇಕಾಗಿತ್ತು. ಸ್ವಲ್ಪ ಕಾಲ ದೂರ ಉಳಿದು ಮತ್ತೆ ಪ್ರದರ್ಶನಕ್ಕೆ ಬಂದಾಗ ನಾಟಕ ಹೆಚ್ಚು ಆಪ್ತವಾದಂತೆ ಭಾಸವಾಯಿತು’ ಎಂದು ಅವರು ತಿಳಿಸಿದರು.

ಎರಡು ವರ್ಷಗಳ ನಂತರ ರಂಗಕ್ಕೆ ಬಂದಿರುವ ಅನಘಶ್ರೀ ಅವರ ಪ್ರದರ್ಶನದಲ್ಲಿ ಹೆಚ್ಚು ಪಕ್ವತೆ ಕಂಡುಬಂದಿದೆ. ಅವರ ಆತ್ಮವಿಶ್ವಾಸದ ಮಟ್ಟ ಹೆಚ್ಚಾಗಿರುವುದರಿಂದ ನಾಟಕ ಮತ್ತಷ್ಟು ಸೊಗಸಾಗಿ ಮೂಡಿದೆ.

–ಸುಧೀರ್ ರಾವ್ ನೃತ್ಯನಿಕೇತನದ ಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT