ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗ ಪೂರ್ಣ ಸೇವೆ ನಮ್ಮದಾಗಲಿ: ಒಡಿಯೂರು ಸ್ವಾಮೀಜಿ

ಒಡಿಯೂರಿನಲ್ಲಿ 24ನೇ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನ
Published 18 ಫೆಬ್ರುವರಿ 2024, 15:29 IST
Last Updated 18 ಫೆಬ್ರುವರಿ 2024, 15:29 IST
ಅಕ್ಷರ ಗಾತ್ರ

ವಿಟ್ಲ: ‘ತ್ಯಾಗ ಮತ್ತು ಸೇವೆ ರಾಷ್ಟ್ರೀಯ ಆದರ್ಶ. ತ್ಯಾಗ ಪೂರ್ಣ ಸೇವೆ ನಮ್ಮದಾಗಬೇಕು. ರಾಮಾಯಣ ಬದುಕಿನ ಬೆಳಕು. ರಾಮಾಯಣ ನಮ್ಮ ಜೀವನದ ದಾರಿದೀವಿಗೆಯಾಗಿದೆ’ ಎಂದು ಒಡಿಯೂರು ಗುರುದೇವದತ್ತ ಸಂಸ್ತಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ನಡೆಯುವ ತುಳುನಾಡ ಜಾತ್ರೆ– ಒಡಿಯೂರು ರಥೋತ್ಸವದ ಪ್ರಥಮ ದಿನವಾದ ಭಾನುವಾರ ಸಂಸ್ಥಾನದ ಆತ್ರೆಯ ಮಂಟಪದಲ್ಲಿ ನಡೆದ 24ನೇ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಆನಂದದ ಸೆಲೆ ರಾಮನ ಆದರ್ಶದಲ್ಲಿದೆ. ರಾಮನ ಬದುಕೆ ಆನಂದವಾಗಿದ್ದು, ವಿಶ್ವವೇ ರಾಮಮಯವಾಗಿರುವ ಕಾರಣ ‘ಸಿರಿರಾಮೆ’ ಎನ್ನುವ ಹೆಸರನ್ನು ಈ ಬಾರಿಯ ತುಳು ಸಾಹಿತ್ಯ ಸಮ್ಮೇಳನಕ್ಕೆ ಇಡಲಾಗಿದೆ ಎಂದರು.

ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕ ವಸಂತಕುಮಾರ್ ಪೆರ್ಲ ಅವರು ಮಾತನಾಡಿ, ತುಳು ಭಾಷೆಯನ್ನು ಬೆಳೆಸುವ ಕೆಲಸ ತುಳು ಸಾಹಿತ್ಯ ಸಮ್ಮೇಳನದ ಮೂಲಕ ಸಂಸ್ಥಾನದಿಂದ ಆಗುತ್ತಿದೆ. ಜಾನಪದ ಉಳಿದರೆ ಸಂಸ್ಕೃತಿ ಉಳಿಯುತ್ತದೆ ಎನ್ನುವ ದೂರದೃಷ್ಟಿಯಿಂದ ಸ್ವಾಮೀಜಿ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದಾರೆ ಎಂದರು.

ವೈದ್ಯ ಭಾಸ್ಕರಾನಂದ ಕಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಗೆನಾಡು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಉದ್ಯಮಿ ಶ್ರೀಧರ ಕೆ.ಶೆಟ್ಟಿ ಗುಬ್ಯ ಮೇಗಿನಗುತ್ತು, ಒಡಿಯೂರು ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಒಡಿಯೂರು ರಥೋತ್ಸವ ಸಮಿತಿ ಕೋಶಾಧಿಕಾರಿ ಎ.ಸುರೇಶ್ ರೈ ಭಾಗವಹಿಸಿದ್ದರು.

ಗುರುದೇವಾನಂದ ಸ್ವಾಮೀಜಿಯವರು ತುಳು ಲಿಪಿ ಕೈಬರಹವನ್ನು ಒಳಗೊಂಡ ‘ಆಧ್ಯಾತ್ಮ ರಾಮಾಯಣಾಂತರ್ಗತೊ ಸುಂದರಕಾಂಡ’ ಹಾಗೂ  ವಸಂತಕುಮಾರ್ ಪೆರ್ಲ ಅವರು ಬರೆದ ‘ತೂಪರಿಕೆ’ ಕೃತಿ ಬಿಡುಗಡೆಗೊಂಡಿತು.

ರೇಣುಕಾ ಎಸ್.ರೈ ಪ್ರಾರ್ಥಿಸಿದರು. ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಸಂಚಾಲಕ ಪಿ.ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು.

ರಾಮಾಯಣದ ಕುರಿತ ವಿಚಾರ ಮಂಥನ ನಡೆಯಿತು. ವಿವೇಕಾನಂದ ಕಾಲೇಜು ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀಶ ಕುಮಾರ್ ಎಂ.ಕೆ. ಮಾತನಾಡಿ, ಯಾರಿಗೂ ನೋವು ನೀಡದೆ ಬದುಕಬೇಕು ಎಂದು ತಿಳಿಸಿದರು.

ದೈವನರ್ತಕ ರವೀಶ್ ಪಡುಮಲೆ ಮಾತನಾಡಿ, ಪ್ರಕೃತಿಯ ನಡುವಿನಲ್ಲಿ ಬದುಕು ಕಟ್ಟಿದವರಿಂದ ಜಾನಪದ ರಾಮಾಯಣ ನಿರ್ಮಾಣವಾಗಿದೆ. ತುಳುವರು ಜನಪದ ಬದುಕು ಕಟ್ಟಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ಶೇಖರ್ ಶೆಟ್ಟಿ ಬಾಯಾರು ಸ್ವಾಗತಿಸಿದರು. ಲೀಲಾ ಪಾದೆಕಲ್ಲು ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಡಾ.ಭಾಸ್ಕರಾನಂದ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಕಬಿತೆ-ಪದ-ಚಿತ್ರೊ ಕಾರ್ಯಕ್ರಮ ನಡೆಯಿತು.

ಕವಿಗಳಾದ ವಸಂತಿ ಎ.ವಿಟ್ಲ, ರಾಜಶ್ರೀ ಟಿ.ರೈ ಪೆರ್ಲ, ವಿಜಯಾ ಶೆಟ್ಟಿ ಸಾಲೆತ್ತೂರು, ಟಿ.ಸುಬ್ರಹ್ಮಣ್ಯ ಒಡಿಯೂರು ಕವಿತೆ ವಾಚಿಸಿದರು. ಕಲಾವಿದ ಗಣೇಶ ಸೋಮಾಯಾಜಿ ಬಿ., ಕಲಾವಿದೆ ಜಯಶ್ರೀ ಶರ್ಮ ಚಿತ್ರ ಬಿಡಿಸಿದರು. ಹಿರಿಯ ಕಲಾವಿದ ಪ್ರೊ.ಅನಂತಪದ್ಮನಾಭ ರಾವ್ ಸಹಕರಿಸಿದರು. ರವಿರಾಜ್ ಶೆಟ್ಟಿ ಒಡಿಯೂರು ರಾಗ ಸಂಯೋಜನೆಯಲ್ಲಿ ಜೈ ಗುರುದೇವ್ ಕಲಾಕೇಂದ್ರದವರು ಹಾಡಿದರು.

ಸ್ವಯಂಸೇವಕ ಸಮಿತಿಯ ಸಂಚಾಲಕ ಯಶೋಧರ ಸಾಲ್ಯಾನ್ ಸ್ವಾಗತಿಸಿದರು. ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕಿ ಕಾವ್ಯಲಕ್ಷ್ಮೀ ವಂದಿಸಿದರು. ವಸಂತ ಕುಮಾರ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT